ಇಡೀ ದೇಶವನ್ನೇ ಸನಾತನ ಹಿಂದೂ ಧರ್ಮದ ಪ್ರಯೋಗ ಶಾಲೆ ಮಾಡ್ತೀವಿ; ಯತ್ನಾಳ್ ಘೋಷಣೆ
ಇನ್ನೂ ಎಷ್ಟು ವರ್ಷ ಇಂದಿರಾ ಗಾಂಧಿ ಅಂತ ಹೇಳುತ್ತಿರಿ, ಜಿಲೇಬಿ ಫ್ಯಾಕ್ಟರಿ ಮಾಡುತ್ತೇನೆ. ಬಟಾಟಿಯಲ್ಲಿ ಬಂಗಾರ ತೆಗೆಯುತ್ತೇನೆ ಅನ್ನುವ ರಾಹುಲ್ ಗಾಂಧಿ ಮಾತು ಕೇಳುತ್ತೀರಾ ಎಂದು ಕಾಂಗ್ರೆಸ್ ನಾಯಕರಿಗೆ ಯತ್ನಾಳ್ ಪ್ರಶ್ನಿಸಿದ್ದಾರೆ.;
ಇಡೀ ಭಾರತವನ್ನು ಸನಾತನ ಹಿಂದೂ ಧರ್ಮದ ಪ್ರಯೋಗ ಶಾಲೆ ಮಾಡಿಯೇ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶಿಗ್ಗಾವಿಯ ಧುಂಡಸಿಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಕಾಂಗ್ರೆಸ್ಸಿನವರು ಇನ್ನೂ ಎಷ್ಟು ವರ್ಷ ಇಂದಿರಾ ಗಾಂಧಿ ಅಂತ ಹೇಳುತ್ತೀರಿ, ಜಿಲೇಬಿ ಫ್ಯಾಕ್ಟರಿ ಮಾಡುತ್ತೇನೆ. ಬಟಾಟಿಯಲ್ಲಿ ಬಂಗಾರ ತೆಗೆಯುತ್ತೇನೆ ಅನ್ನುವ ರಾಹುಲ್ ಗಾಂಧಿ ಮಾತು ಕೇಳುತ್ತೀರಾ ? ಎಂದು ವಾಗ್ದಾಳಿ ನಡೆಸಿದ್ದಾರೆ.
ವಕ್ಫ್ ಕಾಯ್ದೆ ಎಷ್ಟು ಅಪಾಯಕಾರಿ ಎಂಬುದು ಎಲ್ಲರೂ ಗಮನಿಸಬೇಕು. ಅವರು(ಮುಸ್ಲಿಮರು) ಮೂವತ್ತು ಪರ್ಸೆಂಟ್ ಜನಸಂಖ್ಯೆಗೆ ಏರಿಕೆಯಾದರೆ, ನಮ್ಮವರು ಯಾರೂ ಶಾಸಕರಾಗಲು ಸಾಧ್ಯವಿಲ್ಲ. ನಮ್ಮ ಧರ್ಮ, ದೇಶ ಉಳಿಯಬೇಕೆಂದರೆ ಹಿಂದೂಗಳು ಒಗ್ಗಟ್ಟಾಗಬೇಕು. ಭರತ್ ಬೊಮ್ಮಾಯಿ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಗೆ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ.
90 ಪರ್ಸೆಂಟ್ ಕಮಿಷನ್ ಸರ್ಕಾರ: ಆರೋಪ
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನಡೆಸುತ್ತಿರುವುದು 90 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಬಸವಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೂವರೆ ವರ್ಷದಿಂದ ಒಂದು ರಸ್ತೆಗೆ ಮಣ್ಣು ಹಾಕಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಅಭಿವೃದ್ಧಿ ಕೆಲಸಗಳು ಸಂಪೂರ್ಣ ನಿಂತು ಹೋಗಿವೆ. ಗ್ಯಾರೆಂಟಿ ಯೋಜನೆಗಳ ಹೆಸರಲ್ಲಿ ಸರ್ಕಾರ ಹಗಲು ದರೋಡೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ ನಾಯಕರು ಬೊಬ್ಬೆ ಹೊಡೆಯುತ್ತಿದ್ದರು. ಈಗ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಮದ್ಯ ಮಾರಾಟಗಾರರಿಂದ ತಿಂಗಳ ಮಾಮೂಲಿ ಪಡೆಯುತ್ತಿರುವುದೇ 90 ಪರ್ಸೆಂಟ್ ಸರ್ಕಾರಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.