‌WATER CRISIS | ಬೆಂಗಳೂರು ಜಲಕ್ಷಾಮಕ್ಕೂ ತಟ್ಟಿದ ರಾಜಕಾರಣದ ಸೋಂಕು

Update: 2024-03-05 14:07 GMT

ರಾಜ್ಯ ರಾಜಧಾನಿ ಬೆಂಗಳೂರು ಜಲ ಕ್ಷಾಮಕ್ಕೆ ತುತ್ತಾಗಿದ್ದು, ನಿತ್ಯ ಬಳಕೆಗೆ ನೀರು ಮಹಾನಗರವಾಸಿಗಳು ದಿಕ್ಕೆಟ್ಟಿದ್ದಾರೆ. ನೀರು ಬರದೆ ಒಣಗಿದ ನಲ್ಲಿಗಳು, ಬತ್ತಿದ ಟ್ಯಾಂಕ್‌ಗಳು, ಬೋರ್‌ವೆಲ್‌ಗಳು ಒಂದೆಡೆಯಾದರೆ, ಇನ್ನೊಂದೆಡೆ ಗಗನಕ್ಕೇರುತ್ತಿರುವ ಟ್ಯಾಂಕರ್ ಬೆಲೆಗಳು. ಈ ನಡುವೆ ನಲ್ಲಿಗಳ ಬಳಿ ಮಹಿಳೆಯರ ಸರದಿ ಸಾಲು, ಕುಡಿಯುವ ನೀರಿನ ಘಟಕಗಳ ಬಳಿ ಪುರುಷರ ಸಾಲು, ಟ್ಯಾಂಕರ್‌ ನೀರು ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ಬೇಸಿಗೆಯಲ್ಲಿ ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗದಂತೆ ತಡೆಯಲು ಬೆಂಗಳೂರು ಜಲ ಮಂಡಳಿ ಸಾಧ್ಯವಿರುವ ಎಲ್ಲಾ ಯತ್ನಗಳನ್ನು ನಡೆಸಿದೆ. ಮಾರ್ಚ್‌ನಿಂದ ಮೇ ತಿಂಗಳವರೆಗೂ ಕಡು ಬೇಸಿಗೆ ಮುಂದುವರಿಯಲಿದ್ದು, ಮುಂದಿನ ಮೂರು ತಿಂಗಳ ಕಾಲ ನೀರಿನ ಹಾಹಾಕಾರ ಎದುರಾಗದಂತೆ ನೋಡಿಕೊಳ್ಳುವುದು ಅತಿ ದೊಡ್ಡ ಸವಾಲಾಗಿದೆ.

ಪ್ರತಿ ಬೇಸಿಗೆಯಲ್ಲೂ ಬೆಂಗಳೂರಿನ ನೀರಿನ ಕೊರತೆ ಇದ್ದೇ ಇರುತ್ತದೆ. ಈ ಬಾರಿ ತೀವ್ರ ಬರಗಾಲದಿಂದ ನೀರಿನ ಕ್ಷಾಮ ಹಿಂದೆಂದೂ ಕಂಡಿರದ ಮಟ್ಟಿಗೆ ತೀವ್ರವಾಗಿದೆ.

ಬ್ರಾಂಡ್‌ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ಈ ಮಟ್ಟದಲ್ಲಿ ತೀವ್ರವಾಗಲು ಕಾರಣ ಕೇವಲ ಒಂದು ಸರ್ಕಾರ, ಒಂದು ಆಡಳಿತವಲ್ಲ. ಬದಲಾಗಿ ನಿರಂತರ ಸರ್ಕಾರಗಳ ನಿರ್ಲಕ್ಷ್ಯ ಮತ್ತು ನಿರಾಸಕ್ತಿ ಕಾಲಾನುಕ್ರಮದಲ್ಲಿ ಸಮಸ್ಯೆಯನ್ನು ಬಿಗಡಾಯಿಸಿದೆ. 

ಆದರೆ, ಚುನಾವಣಾ ವರ್ಷದಲ್ಲಿ ತಲೆದೋರಿರುವ ಜಲಕ್ಷಾಮ ಇದೀಗ ರಾಜಕೀಯ ಲಾಭ ನಷ್ಟದ ದಾಳವಾಗಿ ಮಾರ್ಪಟ್ಟಿದೆ. ಈ ನೀರಿನ ವಿಚಾರವನ್ನೇ ಚುನಾವಣಾ ಅಸ್ತ್ರವಾಗಿಸಿಕೊಳ್ಳಲು ಪ್ರತಿಪಕ್ಷ ಬಿಜೆಪಿ ಸಿದ್ದವಾಗಿವೆ. ಈ ಸರ್ಕಾರವು ಬೆಂಗಳೂರಿನ ಜನ ಖಾಸಗಿ ಟ್ಯಾಂಕರ್ ಗಳಿಗೆ ಹಣ ಸುರಿಯುವಂತೆ ಮಾಡಿದೆ ಎಂದು ಬಿಜೆಪಿ ಕಿಡಿಕಾರಿದೆ.

ʼʼಬೇಸಿಗೆ ಇನ್ನೂ ಆರಂಭವಾಗಿಲ್ಲ, ಆದರೆ ಈಗಲೇ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಕೂಡಲೇ ಬೆಂಗಳೂರಿಗೆ ಕುಡಿಯುವ ನೀರಿನ ಗ್ಯಾರೆಂಟಿ ಕೊಡಿʼʼ ಎಂದು ಬಿಜಿಪಿ‌ ನಾಯಕರು ಒತ್ತಾಯಿಸಿದ್ದಾರೆ.

ʼʼINDIA ಮೈತ್ರಿಕೂಟದ ತಮಿಳುನಾಡಿನ ಡಿಎಂಕೆ ಪಕ್ಷದ ಜೊತೆ ದೋಸ್ತಿ ಉಳಿಸಿಕೊಳ್ಳಲು ಕನ್ನಡಿಗರ ಹಿತಾಸಕ್ತಿ ಬಲಿಕೊಟ್ಟು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದ ನಾಡದ್ರೋಹಿ ಸರ್ಕಾರ ಬೆಂಗಳೂರಿನ ಜನತೆ ಖಾಸಗಿ ಟ್ಯಾಂಕರ್ ಗಳಿಗೆ ಸಾವಿರಾರು ರೂಪಾಯಿ ತೆರುವ ಪರಿಸ್ಥಿತಿ ತಂದಿಟ್ಟಿದೆʼʼ ಎಂದು ಪ್ರತಿಪಕ್ಷ ನಾಯಕ‌ ಅಶೋಕ್ ಕಿಡಿಕಾರಿದ್ದಾರೆ.

ಬೆಂಗಳೂರು ನಗರದಲ್ಲಿ ಕಾಡಬಹುದಾದ ನೀರಿನ ಸಮಸ್ಯೆ ಬಗ್ಗೆ ಮೊದಲೇ ಅಂದಾಜಿಸಿ ಹೆಚ್ಚುವರಿ ಕೊಳವೆ ಬಾವಿಗಳನ್ನು ಕೊರೆಸಲು, ಹಳೇ ಕೊಳವೆ ಬಾವಿಗಳ ಮರುಪೂರಣ ಮಾಡಲು, ನೀರಿಗಾಗಿ ಪರ್ಯಾಯ ವ್ಯವಸ್ಥೆ ಹುಡುಕಲು ಕ್ರಮ ಕೈಗೊಂಡಿದ್ದರೆ ಈಗ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಟ್ವೀಟ್ ಮಾಡಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬ್ರ್ಯಾಂಡ್ ಬೆಂಗಳೂರು ಕಟ್ಟುತ್ತೇವೆ ಎಂದು ಬಾಯಿಮಾತಿಗೆ ಘೋಷಣೆ ಮಾಡಿ ಆಡಳಿತದ ಚುಕ್ಕಾಣಿಯನ್ನು ಸಂಪೂರ್ಣವಾಗಿ ಅಧಿಕಾರಿಗಳಿಗೆ ಕೊಟ್ಟು ಕಾಂಗ್ರೆಸ್ ನಾಯಕರು ಸದಾ ತಮ್ಮ ಕುರ್ಚಿ ಉಳಿಸಿಕೊಳ್ಳಲು, ಪಕ್ಕದ ರಾಜ್ಯಗಳ ಚುನಾವಣೆ ಉಸಾಬರಿ ನೋಡಿಕೊಳ್ಳಲು ಕಾಲಹರಣ ಮಾಡುತ್ತಾ ಬೆಂಗಳೂರನ್ನು ಸಂಪೂರ್ಣವಾಗಿ ನಿರ್ಲಕ್ಷ ಮಾಡಿದ್ದರಿಂದ ಬೆಂಗಳೂರಿನ ಜನರು ಹನಿ ನೀರಿಗೂ ಪರದಾಡುವ ದುಃಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ನೀರಿನ ಸಮಸ್ಯೆಯನ್ನು ಅಸ್ತ್ರವಾಗಿಸಿಕೊಳ್ಳಲು ಬಿಜೆಪಿ ಪ್ಲ್ಯಾನ್‌ ಮಾಡಿಕೊಂಡಿದೆ. ಅದರಿಂದ ಕಾಂಗ್ರೆಸ್‌ ಯಾವ ರೀತಿ ಬಚಾವ್‌ ಆಗಲಿದೆ ಎನ್ನುವುದು ಇದೀಗ ಪ್ರಶ್ನೆಯಾಗಿದೆ.

ಬಿಬಿಎಂಪಿ ಚುನಾವಣೆ ಮೂರು ವರ್ಷಗಳ ಹಿಂದೆಯೇ ನಡೆಯಬೇಕಿತ್ತು. ಪಾಲಿಕೆಯ ಹಿಂದಿನ ಸದಸ್ಯರ ಅಧಿಕಾರಾವಧಿ 2020ರ ಸೆ.10ಕ್ಕೆ ಅಂತ್ಯಗೊಂಡಿತ್ತು. ಚುನಾವಣೆ ನಡೆಯದೇ ಮೂರು ವರ್ಷ ವಿಳಂಬವಾಗಿರುವುದರಿಂದ ಅಧಿಕಾರಿಗಳೇ ಪಾಲಿಕೆಯಲ್ಲಿ ಆಡಳಿತ ನಡೆಸುತ್ತ ಬಂದಿದ್ದಾರೆ. ಹಾಗಾಗಿ ಬೆಂಗಳೂರಿನ ಸಮಸ್ಯೆಗಳ ವಿಚಾರದಲ್ಲಿ ರಾಜ್ಯ ಸರ್ಕಾರವನ್ನೇ ಹೊಣೆ ಮಾಡಲು ಬಿಜೆಪಿ ಹಾತೊರೆಯುತ್ತಿರುತ್ತದೆ.

ಈ ಎಲ್ಲ ಸಂಗತಿಗಳಿಂದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಡಿಸಿಎಂ, ಜಲಸಂಪನ್ಮೂಲ, ಬೆಂಗಳೂರು ನಿಗಮ ಅಭಿವೃದ್ಧಿ ಖಾತೆಯ ಉಸ್ತುವಾರಿಯಾಗಿರುವ ಡಿಕೆ ಶಿವಕುಮಾರ್‌ ಅವರು ಈಗಾಗಲೇ ಬೆಂಗಳೂರು ನಗರ ವ್ಯಾಪ್ತಿಗೆ ಬರುವ ಎಲ್ಲ ಪ್ರದೇಶಗಳಿಗೂ ನೀರಿನ ಸಮಸ್ಯೆ ನೀಗಿಸಲು ಕ್ರಮ ವಹಿಸಿದ್ದಾರೆ.

ಬೆಂಗಳೂರಿನ ಜನರಿಗೆ ನೀರು ಪೂರೈಸುವುದು ನಮ್ಮ ಕರ್ತವ್ಯ ಗಾಬರಿಯಾಗಬೇಡಿ ಎಂದು ಡಿ ಕೆ ಶಿವಕುಮಾರ್‌ ಅವರು ಭರವಸೆ ನೀಡಿದ್ದಾರೆ. ಬೆಂಗಳೂರಲ್ಲಿ 3,500 ಟ್ಯಾಂಕರ್‌ಗಳು ಇದ್ದು, ಕೇವಲ 219 ಟ್ಯಾಂಕರ್‌ಗಳು ಮಾತ್ರ ನೋಂದಣಿ ಮಾಡಿಸಿಕೊಂಡಿವೆ. ಬಿಡಬ್ಲ್ಯೂಎಸ್ಎಸ್ಬಿ ಸಂಸ್ಥೆ 210 ಟ್ಯಾಂಕರ್‌ಗಳನ್ನು ಈಗಾಗಲೇ ನೀರಿನ ಪೂರೈಕೆಗೆ ಬಳಸುತ್ತಿದೆ. ನಗರದ ಎಲ್ಲ ನೀರಿನ ಟ್ಯಾಂಕರ್ ಮಾಲೀಕರು ಮಾ.7ರ ವೇಳೆಗೆ ನೋಂದಣಿ ಮಾಡಿಸದಿದ್ದರೆ ಸೀಜ್ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ನೀರು ಸರ್ಕಾರಕ್ಕೆ ಸೇರಿದ್ದು, ಯಾವುದೇ ವ್ಯಕ್ತಿಗೆ ಸೇರಿದ್ದಲ್ಲ. ಯಾವ ನೀರನ್ನು ಬೇಕಾದರೂ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹಕ್ಕು ಸರ್ಕಾರಕ್ಕೆ ಇದೆ. ಬೆಂಗಳೂರು ಹೊರವಲಯದಲ್ಲಿ ಅಂತರ್ಜಲ ನೀರಿನ ಮಟ್ಟ ಹೆಚ್ಚಿರುವ ಕಡೆಯಿಂದಲೂ ನೀರಿನ ಪೂರೈಕೆ ಮಾಡಲು ಸಿದ್ಧರಾಗಿ ಇರಬೇಕು. ನೀರಿನ ಸಮಸ್ಯೆ ಬಗೆಹರಿಸಲು ಚುನಾವಣಾ ನೀತಿ ಸಂಹಿತೆ ಅಡ್ಡ ಬರುವುದಿಲ್ಲ ಎಂದು ಡಿಸಿಎಂ ಸ್ಪಷ್ಟಪಡಿಸಿದರು.

ಸಮಸ್ಯೆ ಬಗೆಹರಿಸಲು ರೂ.556 ಕೋಟಿ ಮೀಸಲು

ಬೆಂಗಳೂರು ನಗರದ ಎಲ್ಲ ಶಾಸಕರಿಗೆ ನೀರಿನ ಸಮಸ್ಯೆ ಬಗೆಹರಿಸಲು 10 ಕೋಟಿ ಅನುದಾನ ನೀಡಲಾಗಿದೆ. ಬಿಬಿಎಂಪಿಗೆ 148 ಕೋಟಿ, ಬಿಡಬ್ಲ್ಯೂಎಸ್‌ಎಸ್‌ಬಿಯಿಂದ 128 ಕೋಟಿ ಸೇರಿದಂತೆ ಒಟ್ಟು 556 ಕೋಟಿ ಹಣವನ್ನು ಕುಡಿಯುವ ನೀರಿನ ಪೂರೈಕೆಗೆ ಮೀಸಲಿಡಲಾಗಿದೆ ಎಂದು ಅವರು ಹೇಳಿದ್ದಾರೆ.

ನಿರುಪಯುಕ್ತ ಹಾಲಿನ ಟ್ಯಾಂಕರ್ಗಳನ್ನು ನೀರು ಸರಬರಾಜಿಗೆ ಬಳಕೆ ಮಾಡಲು ಹೇಳಲಾಗಿದೆ. ಕೆಎಂಎಫ್ ವ್ಯಾಪ್ತಿಯ ಎಲ್ಲ ಘಟಕಗಳಿಂದ ಟ್ಯಾಂಕರ್‌ಗಳನ್ನು ತರಿಸಿ ಸ್ವಚ್ಛಗೊಳಿಸಿ ಬಳಸಬೇಕು. ಈ ಟ್ಯಾಂಕರ್ಗಳನ್ನು ನೀರಿನ ಸಮಸ್ಯೆ ಬಗೆಹರಿಯುವ ತನಕ ಬಳಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ನೀರಿನ ಸಮಸ್ಯೆ ಪರಿಹರಿಸುವ ವಿಚಾರವಾಗಿ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ʼʼನಗರದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಮತ್ತು ಜಲಮಂಡಳಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ನೀರಿನ ಟ್ಯಾಂಕರ್ ದರದ ಬಗ್ಗೆ ಜನರಲ್ಲಿ ಅಸಮಾಧಾನ ಇದೆ. ಹಾಗಾಗಿ ಎಲ್ಲರಿಗೂ ಒಂದೇ ದರ ನಿಗದಿಪಡಿಸಲಾಗುತ್ತದೆ" ಎಂದು ತಿಳಿಸಿದರು.

ಬಿಬಿಎಂಪಿಯಲ್ಲಿ ಕೇವಲ 54 ನೀರಿನ ಟ್ಯಾಂಕರ್ ವ್ಯಾಪಾರ ಪರವಾನಗಿ ಪಡೆದಿದ್ದಾರೆ. ನಗರದಲ್ಲಿ ನೀರಿನ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಅದನ್ನು ನಿಯಂತ್ರಿಸುವ ಉದ್ದೇಶದಿಂದ ಮಾ.1 ರಿಂದ 7ನೇ ದಿನಾಂಕದ ಒಳಗೆ ಸ್ವಯಂ ನೋಂದಣಿ ಮಾಡಿಕೊಳ್ಳಬೇಕು. ನೀರಿನ ವ್ಯವಹಾರ ನಡೆಸುವ ಎಲ್ಲರಿಗೂ ವಾಹನ ನೋಂದಣಿ ಮಾಡಲು ಅವಕಾಶವಿದೆ. ಮಾ.7ರೊಳಗೆ ನೀರಿನ ಟ್ಯಾಂಕರ್ ವಾಹನ ನೋಂದಣಿ ಮಾಡದಿದ್ದರೆ ನೀರು ಸರಬರಾಜು ಮಾಡಲು ಅವಕಾಶ ಮಾಡಿಕೊಡುವುದಿಲ್ಲ. ಆದಷ್ಟು ಬೇಗ ನಗರದಲ್ಲಿ ಈ ನೀರಿನ ಸಮಸ್ಯೆ ಪರಿಹರಿಸಲಾಗುತ್ತದೆʼʼ ಎಂದು ಹೇಳಿದರು.

Tags:    

Similar News