ಮನೆಗಳಿಗೆ ನೀರು, ವಿದ್ಯುತ್‌ ಸಂಪರ್ಕ | ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ, ಏನಿದು ಸ್ವಾಧೀನಾನುಭವ ಪತ್ರ ವಿವಾದ?

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 1,200 ಚದರ ಅಡಿಗಳಿಗಿಂತ ಹೆಚ್ಚಿನ ವಿಸ್ತೀರ್ಣದ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡುವ ಸಂಬಂಧ ಕಳೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು.

Update: 2025-09-29 08:13 GMT

ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸುವ ಸಂಬಂಧ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅನಧಿಕೃತ ಕಟ್ಟಡ ಹಾಗೂ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಸಲುವಾಗಿ ಸ್ವಾಧೀನಾನುಭವ ಪತ್ರ ಕಡ್ಡಾಯಗೊಳಿಸಿರುವ ಸುಪ್ರೀಂಕೋರ್ಟ್‌ ಆದೇಶದಿಂದ ಲಕ್ಷಾಂತರ ನಿವಾಸಿಗಳು ನೀರು ಮತ್ತು ವಿದ್ಯುತ್‌ ಸಂಪರ್ಕದ ಸಮಸ್ಯೆಗೆ ಒಳಗಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಟ್ಟಿದೆ. 

ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದ್ಯಂತ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ನೀಡದಂತೆ ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿದೆ. ಆದೇಶದನ್ವಯ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು ಅನಧಿಕೃತ ಕಟ್ಟಡಗಳಿಗೆ ವಿದ್ಯುತ್​ ಸಂಪರ್ಕ ಒದಗಿಸದಂತೆ ಸೂಚಿಸಿತ್ತು. ಇದರಿಂದ ಲಕ್ಷಾಂತರ ಕಟ್ಟಡ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿತ್ತು.

ಸುಪ್ರೀಂಕೋರ್ಟ್ ಹೇಳಿದ್ದೇನು? 

2024 ಡಿಸೆಂಬರ್​​​ ನಿಂದ ಒಸಿ ಮತ್ತು ಪ್ಲಾನ್​​ ಇಲ್ಲದ ಕಟ್ಟಡಗಳಿಗೆ ವಿದ್ಯುತ್​ ಹಾಗೂ ನೀರಿನ ಸಂಪರ್ಕ ನೀಡದಂತೆ ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ಬೆಸ್ಕಾಂ ವ್ಯಾಪ್ತಿಯಲ್ಲಿ 4 ಲಕ್ಷ ಸೇರಿ ರಾಜ್ಯದಾದ್ಯಂತ 10 ಲಕ್ಷ ಮನೆಗಳು ಸಿಸಿ ಹಾಗೂ ಒಸಿ ಇಲ್ಲದೇ ಅನಧಿಕೃತವಾಗಿ ನಿರ್ಮಿಸಿದ್ದರು. ಹೊಸ ಮನೆ ಕಟ್ಟಿದ ಮಾಲೀಕರು ವಿದ್ಯುತ್‌ ಹಾಗೂ ನೀರಿನ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕಳೆದ 9ತಿಂಗಳಿಂದ  ಸಮಸ್ಯೆ ಬಗೆಹರಿಸದೇ ಸರ್ಕಾರ ಕೂಡ ನಿಷ್ಕ್ರಿಯತೆ ತೋರಿತ್ತು. ಕೆಇಆರ್‌ಸಿ ಅಧಿಕಾರಿಗಳು ಸುಪ್ರೀಂಕೋರ್ಟ್‌ ಆದೇಶ ಉಲ್ಲೇಖಿಸಿ, ವಿದ್ಯುತ್‌ ಸಂಪರ್ಕ ನೀಡಲು ನಿರಾಕರಿಸಿದ್ದರು.

ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 1,200 ಚದರ ಅಡಿಗಳಿಗಿಂತ ಹೆಚ್ಚಿನ ವಿಸ್ತೀರ್ಣದ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡುವ ಸಂಬಂಧ ಕಳೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. 

30*40 ಅಳತೆಯ ನಿವೇಶನದಲ್ಲಿ ಕಟ್ಟಿರುವ ಹೊಸ ಮನೆಗಳಿಗೆ  ಸಿ.ಸಿ ಮತ್ತು ಓ.ಸಿ. ಅಗತ್ಯವಿಲ್ಲ ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದರೂ  ವಿದ್ಯುತ್ ಇಲಾಖೆಯಿಂದ ವಿವಿಧ ಎಸ್ಕಾಂಗಳು ತಮ್ಮ ವ್ಯಾಪ್ತಿಯ ಮನೆಗಳಿಗೂ ಸ್ವಾಧೀನಾನುಭವ ಪತ್ರವಿಲ್ಲದ ಕಾರಣ ವಿದ್ಯುತ್ ಸಂಪರ್ಕ ನೀಡಿರಲಿಲ್ಲ.  ಈ ಸಂಬಂಧ ಕೆಇಆರ್ ಸಿಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದಿಗೂ ಲಕ್ಷಾಂತರ ಮನೆಗಳು ಕತ್ತಲೆಯಲ್ಲಿ ಮುಳುಗುವಂತಾಗಿವೆ.  

600ಚದರಡಿಯ ಮನೆಗೆ ನಕ್ಷೆ ಬೇಕಿಲ್ಲ

600 ಚದರಡಿ ಒಳಗಿನ ಕಟ್ಟಡಗಳಿಗೆ ಯಾವುದೇ ಕಟ್ಟಡ ನಕ್ಷೆ ಅಗತ್ಯವಿಲ್ಲ. ಕಟ್ಟಡ ನಕ್ಷೆ ಇಲ್ಲದಿದ್ದರೂ ವಿದ್ಯುತ್ ಸಂಪರ್ಕ ನೀಡಬಹುದು ಎಂದು ಸರ್ಕಾರದ  ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

1200 ಚದರಡಿಯ ನಿವೇಶನಗಳಿಗೆ ಒಸಿ ವಿನಾಯಿತಿ ನೀಡುವಂತೆ ಸರ್ಕಾರದ ಆದೇಶ  ನೀಡಿ ಒಂದು ತಿಂಗಳು ಕಳೆದರೂ ವಿದ್ಯುತ್​​​ ಸಂಪರ್ಕ ನೀಡಿರಲಿಲ್ಲ.  ಬೆಸ್ಕಾಂ ಇಲ್ಲಿಯವರೆಗೂ ತಾತ್ಕಾಲಿಕ ಸಂಪರ್ಕ ಹಾಗೂ ಶಾಶ್ವತ ಸಂಪರ್ಕ ನೀಡದೆ ಸತಾಯಿಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

ಸ್ವಾಧೀನಾನುಭವ ಪತ್ರ ಏನು ?

ಬಿಬಿಎಂಪಿ, ನಗರಸಭೆ, ಮಹಾನಗರ ಪಾಲಿಕೆಯಂತಹ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡಕ್ಕೆ ನೀಡಲಾಗುವ ಕಾನೂನುಬದ್ಧ ದಾಖಲೆಯೇ ಸ್ವಾಧೀನಾನುಭವ ಪತ್ರವಾಗಿದೆ. ಅನುಮತಿ ಪಡೆದ ನಕ್ಷೆಯಂತೆ ಕಟ್ಟಡ ನಿರ್ಮಾಣವಾಗಿದೆಯೇ, ವಾಸಕ್ಕೆ ಸುರಕ್ಷಿತವಾಗಿದೆ ಎಂಬುದನ್ನು ಈ ಪತ್ರವು ದೃಢಪಡಿಸಲಿದೆ. ಅನಧಿಕೃತವಾಗಿ ಕಟ್ಟಡ ಹಾಗೂ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ಪತ್ರ ನೀಡುವುದಿಲ್ಲ. ಸ್ವಾಧೀನಾನುಭವ ಪತ್ರ ಇಲ್ಲವೆಂದರೆ ವಿದ್ಯುತ್‌ ಮತ್ತು ನೀರು, ಒಳಚರಂಡಿ ಸಂಪರ್ಕ ಸ್ಥಗಿತಗೊಳಿಸಲು ಆಯಾ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ.

ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸುವ ಕುರಿತಂತೆ ಉಂಟಾಗಿರುವ ಸಮಸ್ಯೆ ಬಗೆಹರಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯುತ್ತಿದೆ.

ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಬೆಸ್ಕಾಂ, ಬೆಂಗಳೂರು ನೀರು ಸರಬರಾಜು ಮಂಡಳಿ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ.  

ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದ್ಯಂತ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ನೀಡದ ಹಿನ್ನಲೆಯಲ್ಲಿ ವಿದ್ಯುತ್​ ಸಂಪರ್ಕ ಹಾಗೂ ನೀರಿನ ಸಂಪರ್ಕ ನಿಲ್ಲಿಸಲಾಗಿತ್ತು. ಇದರಿಂದ ಲಕ್ಷಾಂತರ ಕಟ್ಟಡ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿತ್ತು. ಹಾಗಾಗಿ ಇಂದಿನ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

Tags:    

Similar News