ಜಿಬಿಎ ವ್ಯಾಪ್ತಿಯಲ್ಲಿ ವಾರ್ಡ್ ಮರುವಿಂಗಡಣೆ ; ಕರಡು ಅಧಿಸೂಚನೆ ಪ್ರಕಟ

ಕರಡು ಅಧಿಸೂಚನೆಯ ಪ್ರಕಾರ, ಐದು ನಗರ ಪಾಲಿಕೆಗಳಲ್ಲಿ ಒಟ್ಟು 368 ವಾರ್ಡ್‌ಗಳನ್ನು ವಿಂಗಡಣೆ ಮಾಡಲಾಗಿದೆ.

Update: 2025-10-01 00:30 GMT

ಶಕ್ತಿಕೇಂದ್ರ ವಿಧಾನಸೌಧ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿ ನಗರಾಭಿವೃದ್ಧಿ ಇಲಾಖೆ ಕರಡು ಅಧಿಸೂಚನೆ ಪ್ರಕಟಿಸಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024ರ ಅನ್ವಯ ಈ ವಾರ್ಡ್ ಮರುವಿಂಗಡಣೆ ಮಾಡಲಾಗಿದೆ.

ಕರಡು ಅಧಿಸೂಚನೆಯ ಪ್ರಕಾರ, ಐದು ನಗರ ಪಾಲಿಕೆಗಳಲ್ಲಿ ಒಟ್ಟು 368 ವಾರ್ಡ್‌ಗಳನ್ನು ವಿಂಗಡಣೆ ಮಾಡಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ 63 ವಾರ್ಡ್‌ಗಳು, ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ 72 ವಾರ್ಡ್‌ಗಳು, ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ 50 ವಾರ್ಡ್‌ಗಳು, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ 111 ವಾರ್ಡ್‌ಗಳು ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ 72 ವಾರ್ಡ್‌ಗಳನ್ನು‌ ಮರುವಿಂಗಡಣೆ ಮಾಡಲಾಗಿದೆ.

ಮರುವಿಂಗಡಣೆ ಪ್ರಕ್ರಿಯೆಯ ಹಾದಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್‌ಗಳ ಪುನರ್‌ವಿಂಗಡಣಾ ಆಯೋಗ ರಚಿಸಲಾಗಿತ್ತು. ರಾಜ್ಯ ಸರ್ಕಾರ ಸೆಪ್ಟೆಂಬರ್ 2 ರಂದು ಮಾರ್ಗಸೂಚಿಗಳನ್ನು ಹೊರಡಿಸಿತು. ಈ ಮಾರ್ಗಸೂಚಿಗಳ ಆಧಾರದ ಮೇಲೆ ಆಯೋಗವು ಸೆ. 30 ರಂದು ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರವು ಆ ವರದಿಯನ್ನು ಅಂಗೀಕರಿಸಿ, 2011ರ ಜನಗಣತಿಯ ಮಾಹಿತಿ ಆಧಾರದ ಮೇಲೆ ವಾರ್ಡ್ ಮರುವಿಂಗಡಣೆ ಕರಡು ಅಧಿಸೂಚನೆ ಪ್ರಕಟಿಸಿದೆ.

ಆಕ್ಷೇಪಣೆಗೆ ಅವಕಾಶ

ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಆಕ್ಷೇಪಣೆ ಅಥವಾ ಸಲಹೆ ನೀಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಸಲಹೆ/ಆಕ್ಷೇಪಣೆಗಳನ್ನು ಪೂರ್ಣ ವಿಳಾಸ ಮತ್ತು ಸಹಿಯೊಂದಿಗೆ, ಸೂಕ್ತ ಕಾರಣವನ್ನು ವಿವರಿಸಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸ ಸೌಧ, ಡಾ. ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು – 560001 ಈ ವಿಳಾಸಕ್ಕೆ ಅ. 15 ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆ ಕೋರಿದೆ‌

ಸರ್ಕಾರವು ಸಾರ್ವಜನಿಕರಿಂದ ಬಂದ ಸಲಹೆ-ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಅಧಿಸೂಚನೆ ಪ್ರಕಟಿಸಲಿದೆ. ಅದರ ಆಧಾರದ ಮೇಲೆ ಮುಂದಿನ ನಗರ ಪಾಲಿಕೆ ಚುನಾವಣೆಗಳು ನಡೆಯಲಿವೆ.

Tags:    

Similar News