DKS vs HDK| ಒಕ್ಕಲಿಗರ ಸಂಘ ಅಧ್ಯಕ್ಷ ಚುನಾವಣೆ: ಡಿಕೆಶಿ ಬೆಂಬಲಿತರ ಆಯ್ಕೆ; ಎಚ್‌ಡಿಕೆ ತಂಡಕ್ಕೆ ಹಿನ್ನಡೆ

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಡಿಕೆಶಿ ಬೆಂಬಲಿತ ಬಿ. ಕೆಂಚಪ್ಪ ಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಎಚ್‌ಡಿಕೆ ಬೆಂಬಲಿತ ಡಾ. ಅಂಜಿನಪ್ಪ ಸೋಲನುಭವಿಸಿದ್ದಾರೆ.

Update: 2024-12-15 13:22 GMT

ಹಳೇ ಮೈಸೂರು ಭಾಗದ ಒಕ್ಕಲಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ರಾಜ್ಯ ಒಕ್ಕಲಿಗರ ಸಂಘದ  ಅಧ್ಯಕ್ಷ ಚುನಾವಣೆ ಭಾನುವಾರ ನಡೆದಿದ್ದು, ಉಪಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್‌ ಅವರ ಬೆಂಬಲಿತರು  ಅವರ ಬದ್ಧ ವಿರೋಧಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬೆಂಬಲಿತರ ಮುಂದೆ ಜಯ ಸಾಧಿಸಿದ್ದಾರೆ. ಆ ಮೂಲಕ ಕುಮಾರಸ್ವಾಮಿ ಬೆಂಬಲಿತ ಅಭ್ಯರ್ಥಿಗಳಿಗೆ ಭಾರೀ ಹಿನ್ನಡೆಯಾಗಿದೆ.

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಡಿಕೆಶಿ ಬೆಂಬಲಿತ ಕೆಂಚಪ್ಪಗೌಡ ಆಯ್ಕೆಯಾಗಿದ್ದಾರೆ. ಅವರು ಎಚ್ ಡಿ ಕುಮಾರಸ್ವಾಮಿ ಬೆಂಬಲದೊಂದಿಗೆ  ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಡಾ. ಅಂಜಿನಪ್ಪ ಅವರನ್ನು ಸೋಲಿಸಿದ್ದಾರೆ. ಡಿಕೆ ಶಿವಕುಮಾರ್ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಕೆಂಚಪ್ಪಗೌಡಗೆ 21 ಸದಸ್ಯರ ಬೆಂಬಲ ಹಾಗೂ ಕುಮಾರಸ್ವಾಮಿ ಬೆಂಬಲಿತ ಆಂಜಿನಪ್ಪ ಅವರು  14 ಸದಸ್ಯರ ಬೆಂಬಲ ಪಡೆದು ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ.


ಇತ್ತೀಚೆಗೆ ಒಕ್ಕಲಿಗ ಸಂಘದ ಅಧ್ಯಕ್ಷರಾಗಿದ್ದ ಶ್ರವಣಬೆಳಗೊಳ ಶಾಸಕ ಸಿ.ಎನ್‌. ಬಾಲಕೃಷ್ಣ ಅವರನ್ನು ಅವಿಶ್ವಾಸ ನಿರ್ಣಯ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಅವರು ಎಚ್‌.ಡಿ. ದೇವೇಗೌಡರ ಅಳಿಯ  ಹಾಗೂ ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್‌ ಅವರ ಸೋದರ ಡಿ.ಕೆ.ಸುರೇಶ್‌ ಅವರನ್ನು ಸೋಲಿಸಿದ್ದ ಡಾ. ಸಿ.ಎನ್‌.ಮಂಜುನಾಥ್‌ ಅವರ ಸೋದರ. ಡಿಕೆಶಿ ಬೆಂಬಲಿತರು ಬಾಲಕೃಷ್ಣ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಯುವಂತೆ ಮಾಡಿತ್ತು. ಈಗ ಡಿಕೆಶಿ ಬೆಂಬಲಿತರು ಅಧಿಕಾರಕ್ಕೆ ಬಂದಿದ್ದಾರೆ.

ಹಳೇ ಮೈಸೂರು ಭಾಗದ ಒಕ್ಕಲಿಗರ ನಾಯಕತ್ವದ ಪೈಪೋಟಿಯಲ್ಲಿರುವ ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬಣಗಳ ಜಟಾಪಟಿ ಸಾಮಾನ್ಯ. ಹಳೇ ಮೈಸೂರು ಭಾಗದ ಒಕ್ಕಲಿಗರ ಪ್ರಾಬಲ್ಯವನ್ನು ಸಂಪಾದಿಸಲು ಡಿಕೆಶಿ ಮತ್ತು ಎಚ್‌ಡಿಕೆ ಉಭಯ ಬಣಗಳು ಪ್ರಯತ್ನಿಸುತ್ತಲೇ ಇವೆ. ಈಗ ಒಕ್ಕಲಿಗರ ಸಂಘ ಡಿಕೆಶಿ ಕೈವಶವಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಂದರ್ಥದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಪಾರಮ್ಯ ಮೆರೆದಿದ್ದ ಹಳೇಮೈಸೂರು ಭಾಗದಲ್ಲಿ ದೇವೇಗೌಡ ಕುಟುಂಬದ ಪರಮ ವೈರಿ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ ಅವರು ಜೆಡಿಎಸ್‌ ಕಡಿಮೆ ಕ್ಷೇತ್ರಗಳನ್ನು ಗೆಲ್ಲುವಂತೆ ಮಾಡಿ  ʼಸಮ್ಮಿಶ್ರ ಸರ್ಕಾರ ರಚಿಸಿ ಅಧಿಕಾರಕ್ಕೆ ಬರುವʼ ಕುಮಾರಸ್ವಾಮಿ ಆಸೆಗೆ ತಣ್ಣೀರೆರಚಿದ್ದರು. ಬಳಿಕ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ತಂತ್ರಗಾರಿಕೆ ಫಲವಾಗಿ ದೇವಗೌಡರ ಅಳಿಯ ಡಾ. ಸಿ.ಎನ್‌. ಮಂಜುನಾಥ್‌ ಬೆಂಗಳೂರು ಗ್ರಾಮಾಂತರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಿಕೆಶಿ ಸೋದರ ಡಿ.ಕೆ. ಸುರೇಶ್‌ ಅವರನ್ನು ಸೋಲಿಸಿದ್ದರು. ಬಳಿಕ ಮತ್ತೆ ಜಿದ್ದು ತೋರಿಸಿದ ಡಿಕೆ ಶಿವಕುಮಾರ್‌, ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಸೋಲಿಗೆ ದಾಳ ಉರುಳಿಸಿ ಯಶಸ್ವಿಯಾಗಿದ್ದರು. 

ಸುಮಾರು ಎರಡು ದಶಕಗಳಿಂದ ಎರಡೂ ಬಣಗಳ ನಡುವೆ ಜಿದ್ದಾಜಿದ್ದಿ ನಡೆಯುತ್ತಲೇ ಇದೆ. ಇದು ಒಕ್ಕಲಿಗ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ʼರಾಜ್ಯ ಒಕ್ಕಲಿಗರ ಸಂಘʼದಲ್ಲೂ ಪ್ರತಿಫಲಿಸುತ್ತಲೇ ಇದೆ. ಈಗ ಸಂಘದ ಅಧಿಕಾರ ಹಿಡಿಯುವ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್‌ ಬೆಂಬಲಿತ ಕೆಂಚಪ್ಪಗೌಡ ತಂಡ ಆಯ್ಕೆಯಾಗಿದ್ದು, ಕುಮಾರಸ್ವಾಮಿ ಬೆಂಬಲಿತ ನಿರ್ದೇಶಕರಿಗೆ ಸೋಲಾಗಿದೆ. 

Tags:    

Similar News