ವಿರಾಟ್ ಕೊಹ್ಲಿ ಒಡೆತನದ ಪಬ್‌ಗೆ ಹೊಸ ವರ್ಷಕ್ಕೂ ಮುನ್ನವೇ ಸಂಕಷ್ಟ; ನೋಟಿಸ್ ಜಾರಿ ಮಾಡಿದ ಬಿಬಿಎಂಪಿ
ಅಗ್ನಿಶಾಮಕ ದಳದಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆಯದ ಆರೋಪದ ಮೇಲೆ ವಿರಾಟ್ ಕೊಹ್ಲಿ ಒಡೆತನದ ಒನ್ 8 ಕಮ್ಯೂನ್ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಿದ್ದು, ವಾರದಲ್ಲಿ ಉತ್ತರಿಸುವಂತೆ ಸೂಚಿಸಿದ್ದಾರೆ.;
ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಿರುವ 'ಒನ್ 8 ಕಮ್ಯೂನ್' ಪಬ್‌ಗೆ ಸಂಕಷ್ಟವೊಂದು ಎದುರಾಗಿದೆ.
ಅಗ್ನಿ ಸುರಕ್ಷತಾ ನಿಯಮ ಪಾಲಿಸದ ಹಾಗೂ ಅಗ್ನಿಶಾಮಕ ದಳದಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆಯದ ಆರೋಪದ ಮೇಲೆ ಒನ್ 8 ಕಮ್ಯೂನ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಹೊಸ ವರ್ಷಾಚರಣೆಗೆ ಸಿದ್ಧತೆ ನಡೆದಿರುವಾಗಲೇ ಪ್ರಖ್ಯಾತ ಪಬ್‌ಗೆ ಹಿನ್ನಡೆ ಉಂಟಾಗಿದೆ.
ಪಬ್ ವಿರುದ್ಧ ನೀಡಿದ ದೂರೇನು?
ಒನ್ 8 ಕಮ್ಯೂನ್ ಪಬ್‌ನಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಎಂಬುವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಶಾಂತಿನಗರದ ವಿಭಾಗದ ಪಾಲಿಕೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಏಳು ದಿನಗಳಲ್ಲಿ ಉತ್ತರಿಸದಿದ್ದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ಸಹ ನೀಡಿದ್ದಾರೆ.
ಒನ್ 8 ಕಮ್ಯೂನ್ ಪಬ್‌ಗೆ ಈ ಹಿಂದೆ ಕೂಡ ಸುರಕ್ಷತಾ ನಿಯಮ ಉಲ್ಲಂಘಿಸಿದ್ದರಿಂದ ನೋಟಿಸ್ ನೀಡಲಾಗಿತ್ತು. ಆದರೆ, ಪಬ್ ಮಾಲಿಕರು, ವ್ಯವಸ್ಥಾಪಕರು ನೋಟಿಸ್‌ಗೆ ಯಾವುದೇ ಉತ್ತರ ನೀಡದೇ ನಿರ್ಲಕ್ಷ್ಯ ವಹಿಸಿದ್ದರು. ಈಗ ನೀಡಿರುವ ನೋಟಿಸ್‌ಗೆ ಕಡ್ಡಾಯವಾಗಿ ವಾರದೊಳಗೆ ಉತ್ತರಿಸಬೇಕು ಎಂದು ಸೂಚಿಸಲಾಗಿದೆ.
ಪರವಾನಗಿ ರದ್ದತಿಗೆ ಆಗ್ರಹ
ಅಗ್ನಿ ಸುರಕ್ಷತಾ ಕ್ರಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಒನ್ 8 ಕಮ್ಯೂನ್ ಪಬ್‌ಗೆ ನೀಡಿರುವ ಲೈಸನ್ಸ್ ರದ್ದು ಮಾಡುವಂತೆ ದೂರುದಾರರಾದ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಒತ್ತಾಯಿಸಿದ್ದಾರೆ. ಬೆಂಗಳೂರು ನಗರದಲ್ಲಿರುವ ಬಹುತೇಕ ರೆಸ್ಟೋರೆಂಟ್, ಬಾರ್ ಹಾಗೂ ಪಬ್‌ಗಳು ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಹೊಸ ವರ್ಷಾಚರಣೆಯ ಗುಂಗಿನಲ್ಲಿ ಅವಘಡಗಳು ಸಂಭವಿಸಿದರೆ ಕೇಳುವವರೇ ಇಲ್ಲದಂತಾಗಿದೆ. ಈ ಹಿಂದೆ ಬೆಂಗಳೂರಿನ ಕಾರ್ಲ್ಟನ್ ಭವನದಲ್ಲಿ ಶಾರ್ಟ್ ಸರ್ಕೀಟ್ ನಿಂದ ಅಗ್ನಿ ಅವಘಡ ಸಂಭವಿಸಿ ಸಾವು ನೋವು ಸಂಭವಿಸಿತ್ತು. ಹಾಗಾಗಿ ಹೋಟೆಲ್, ಪಬ್, ಕ್ಲಬ್ ಹಾಗೂ ಬಾರ್‌ಗಳಲ್ಲಿ ಕಡ್ಡಾಯವಾಗಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಬೇಕು. ನಿರ್ಲಕ್ಷ್ಯ ವಹಿಸುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಗ್ನಿಸುರಕ್ಷತಾ ಕ್ರಮ ಕೈಗೊಳ್ಳದ ಕಟ್ಟಡಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಎಂ.ಜಿ. ರಸ್ತೆಯ ರತ್ನ ಕಾಂಪ್ಲೆಕ್ಸ್‌ನಲ್ಲಿರುವ ಬಹುಮಹಡಿ ರೆಸ್ಟೋರೆಂಟ್‌ನಲ್ಲೂ ಅಗ್ನಿಶಾಮಕ ದಳದ ನಿಯಮಗಳ ಪ್ರಕಾರ ಸುರಕ್ಷತಾ ಕ್ರಮ ತೆಗೆದುಕೊಂಡಿಲ್ಲ. ಈ ಕುರಿತು ಬಿಬಿಎಂಪಿ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.
ವಿರಾಟ್ ಒಡೆತನ ಪಬ್ ಮೇಲೆ ಎಫ್‌ಐಆರ್
ವಿರಾಟ್ ಕೊಹ್ಲಿ ಸಹ-ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ಮೇಲೆ ಕಳೆದ ಜುಲೈ ತಿಂಗಳಲ್ಲಿ ಎಫ್ಐಆರ್ ದಾಖಲಾಗಿತ್ತು. ಜುಲೈ 6 ರಂದು ಒನ್ 8 ಕಮ್ಯೂನ್ ಪಬ್ ಮಧ್ಯರಾತ್ರಿ 1.30ರವರೆಗೆ ಕಾರ್ಯ ನಿರ್ವಹಿಸಿತ್ತು. ಕಬ್ಬನ್ ಪಾರ್ಕ್ ಪೊಲೀಸರು ಈ ಸಂಬಂಧ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದರು.
ನಿಯಮಗಳೇನು?
ಬೆಂಗಳೂರಿನಲ್ಲಿ ಪಬ್‌ಗಳ ಸಂಖ್ಯೆ ಹೆಚ್ಚಾಗಿದೆ. ಅದಕ್ಕಾಗಿ ಬೆಂಗಳೂರು ಪೊಲೀಸರು ಮಧ್ಯರಾತ್ರಿ 1 ಗಂಟೆಯವರೆಗೆ ಪಬ್ ತೆರೆಯಲು ಅನುಮತಿ ನೀಡಿದ್ದಾರೆ. ಗಡುವಿನೊಳಗೆ ಮುಚ್ಚದಿದ್ದಲ್ಲಿ ಅಂತಹ ಪಬ್, ರೆಸ್ಟೋರೆಂಟ್ ಅಥವಾ ಕ್ಲಬ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.
ಕೊಹ್ಲಿ ಒಡೆತದ ಪಬ್‌ಗಳು ಎಲ್ಲೆಲ್ಲಿವೆ?
ಕ್ರಿಕೆಟಿಗ ವಿರಾಟ್ ಕೊಹ್ಲಿ ಒಡೆತನದ ಒನ್ 8 ಕಮ್ಯುನ್ ಪಬ್ ಹಾಗೂ ರೆಸ್ಟೋರೆಂಟ್ ಶಾಖೆಗಳು ದೆಹಲಿ, ಮುಂಬೈ, ಪುಣೆ, ಹಾಗೂ ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿವೆ. 2023 ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನ ಕಸ್ತೂರ ಬಾ ರಸ್ತೆಯಲ್ಲಿ ಹೊಸ ಶಾಖೆ ಆರಂಭಿಸಲಾಗಿತ್ತು.