ವೈರಲ್ ವಿಡಿಯೋ| ನಡುರಸ್ತೆಯಲ್ಲಿಯೇ ಮಹಿಳೆಯರಿಗೆ ಕಿರುಕುಳ: ಬೆಂಗಳೂರು ಎಷ್ಟು ಸೇಫ್?

Update: 2024-04-03 05:23 GMT

ಬೆಂಗಳೂರಿನ ಕೋರಮಂಗಲ-ಮಡಿವಾಳ ಮಾರ್ಗದಲ್ಲಿ ಭಾನುವಾರ ರಾತ್ರಿ ಮೂವರು ಕಾರು ಫಾಲೋ ಮಾಡಿ ಅದರಲ್ಲಿದ್ದ ಇಬ್ಬರು ಮಹಿಳೆಯರಿಗೆ ಕಿರುಕುಳ ನೀಡಿದ ಆಘಾತಕಾರಿ ಪ್ರಕರಣದ ವಿಡಿಯೋ ಸಾಮಾಜಿಕ ಜಾತಾಣದಲ್ಲಿ ಆಗುತ್ತಿದೆ.

ಈ ವಿಡಿಯೋ ನೋಡಿದ ಜನರಿಗೆ ಬೆಂಗಳೂರು ಮಹಿಳೆಯರಿಗೆ ಎಷ್ಟು ಸೇಫ್ ಎನ್ನುವ ಭಾವ ಮೂಡುವಂತೆ ಮಾಡಿದೆ. ಸದ್ಯ, ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಗಳ ಗುರುತು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತರನ್ನು ತೇಜಸ್, ಜಗನ್ನಾಥ್ ಮತ್ತು ಕಣ್ಣನ್ ಎಂದು ಗುರುತಿಸಲಾಗಿದೆ.

ಘಟನೆ ಹಿನ್ನೆಲೆ:

ಮಾರ್ಚ್ 31ರ ರಾತ್ರಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುವ ಇಬ್ಬರು ಮಹಿಳೆಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಮಯದಲ್ಲಿ, ಅವರು ತಮ್ಮ ಕಾರಿನ ಇಂಡಿಕೇಟರ್ ಆನ್ ಮಾಡಿದ್ದಾರೆ. ಆದರೆ ತಮ್ಮ ಕಾರನ್ನು ಸೂಚಕದ ವಿರುದ್ಧ ದಿಕ್ಕಿನಲ್ಲಿ ತಿರುಗಿಸಿದರು. ಈ ವಿಚಾರವಾಗಿ 2-3 ಬೈಕ್ಗಳಲ್ಲಿ ಬಂದ 4-5 ಬೈಕ್ ಸವಾರರು ಮಹಿಳೆಯರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ.

ಮಹಿಳೆಯರು ಕಾರು ಚಾಲನೆ ಮಾಡಿ ಅಲ್ಲಿಂದ ತೆರಳಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಯುವಕರು, ಕಾರನ್ನು ಫಾಲೋ ಮಾಡಿದ್ದಾರೆ. ಚಾಲನೆಯಲ್ಲಿರುವಾಗಲೇ ಕಾರಿನ ಬಾಗಿಲು ತೆರೆಯಲು ಯತ್ನಿಸಲಾಗಿದೆ. ಗಾಬರಿಗೊಂಡ ಮಹಿಳೆ ಕಿರುಚಿಕೊಂಡು ಕಾರನ್ನು ಇನ್ನಷ್ಟು ವೇಗವಾಗಿ ಚಲಾಯಿಸಿದ್ದಾರೆ. ಆರೋಪಿಗಳು ಕಾರನ್ನು ಸುತ್ತುವರಿದು ಬೆದರಿಸಿದ ಹಿನ್ನೆಲೆ ಕೂಡಲೇ ಮಹಿಳೆಯರು 112 ಗೆ ಕರೆ ಮಾಡಿ ದೂರು ನೀಡಿದ್ದು, ತಾವು ಹೋಗುತ್ತಿರುವ ರಸ್ತೆಯ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೆ, ಆರೋಪಿಗಳಿದ್ದ ಬೈಕ್ನ ನಂಬರ್ ಹೇಳಿದ್ದಾರೆ.

ಆ ಮಹಿಳೆಯರ ಕರೆಗೆ ಸ್ಪಂದಿಸಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆಗ ಕೂಡಲೇ ಬೈಕ್ ಸವಾರರು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಮಡಿವಾಳ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ʻದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಕೋರಮಂಗಲ ಠಾಣಾ ಪೊಲೀಸರು, ತುರ್ತು ಪರಿಸ್ಥಿತಿಯಲ್ಲಿ ಧೃತಿಗೆಡದೆ ಮಹಿಳೆಯರು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಈ ಬಗ್ಗೆ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಮತ್ತು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

Tags:    

Similar News