Brand Nandini | ಕೆಎಂಎಫ್‌ ಎಂಡಿ ವರ್ಗಾವಣೆಗೆ ರಾಜಕೀಯ ತಿರುವು: ಕೇರಳ ಲಾಬಿ ಕಾರಣ ಎಂದ ಬಿ ವೈ ವಿಜಯೇಂದ್ರ!

ಕೆಎಂಎಫ್‌ನಲ್ಲಿ ಆಗಿರುವ ವ್ಯತಿರಿಕ್ತ ಬೆಳವಣಿಗೆಗಳನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಇದೀಗ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧದ ತನ್ನ ವಾಗ್ದಾಳಿಗಳನ್ನು ಹರಿತಗೊಳಿಸಿದೆ.

Update: 2024-12-06 11:30 GMT
ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ
Click the Play button to listen to article

ಮುಡಾ, ವಕ್ಫ್‌, ಬಳ್ಳಾರಿ ಬಾಣಂತಿಯರ ಸಾವು ಪ್ರಕರಣಗಳ ಬಳಿಕ ಇದೀಗ ಕೆಎಂಎಫ್‌ನ ಜನಪ್ರಿಯ ʼನಂದಿನಿ ಬ್ರಾಂಡ್‌ʼ ಆಡಳಿತರೂಢ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಟೀಕಾಪ್ರಹಾರಕ್ಕೆ ಪ್ರತಿಪಕ್ಷಗಳಿಗೆ ಅಸ್ತ್ರವಾಗಿ ಒದಗಿಬಂದಿದೆ.

ಕನ್ನಡಿಗರ ಹೆಮ್ಮೆಯ ಬ್ರಾಂಡ್‌ ಆಗಿರುವ ನಂದಿನಿ ಹಾಲಿನ ಉತ್ಪನ್ನಗಳು ದೇಶದ ಅತ್ಯಂತ ವಿಶ್ವಾಸಾರ್ಹ ಹೈನೋತ್ಪನ್ನ ಬ್ರಾಂಡ್‌ ಆಗಿದೆ. ಕರ್ನಾಟಕವಷ್ಟೇ ಅಲ್ಲದೆ, ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕೂಡ ನಂದಿನಿ ತನ್ನದೇ ಆದ ಮಾರುಕಟ್ಟೆಯ ಪಾಲು ಹೊಂದಿದೆ. ಆದರೆ, ಅದೇ ವಿಶ್ವಾಸದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತನ್ನ ಮಾರುಕಟ್ಟೆ ವಿಸ್ತರಣೆಗಾಗಿ ಲಗ್ಗೆ ಇಟ್ಟಿರುವ ನಂದಿನಿ ಬ್ರಾಂಡಿಗೆ, ಅಲ್ಲಿನ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಸ್ಥಳೀಯ ಇತರೆ ಹಾಲಿನ ಉತ್ಪನ್ನಗಳ ಬ್ರಾಂಡ್‌ ಗಳ ಪೈಪೋಟಿ ಮತ್ತು ಮಾರುಕಟ್ಟೆ ತಂತ್ರಗಳಿಂದಾಗಿ ಕೆಲವು ಆರಂಭಿಕ ಸವಾಲುಗಳನ್ನು ಎದುರಿಸುತ್ತಿದೆ.

ಈ ನಡುವೆ, ನಂದಿನಿಯ ಬ್ರಾಂಡ್‌ ಮೌಲ್ಯವನ್ನೇ ಗುರಿಯಾಗಿಟ್ಟುಕೊಂಡು ಇಡ್ಲಿ ಮತ್ತು ದೋಸೆ ಹಿಟ್ಟಿನ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆಗೆ ಮುಂದಾಗಿದ್ದ ಕೆಎಂಎಫ್‌, ತನ್ನ ಹಿಟ್ಟು ಬಿಡುಗಡೆಯ ದಿನಾಂಕವನ್ನೂ ಘೋಷಿಸಿತ್ತು. ಆದರೆ, ಏಕಾಏಕಿ ಮಾರುಕಟ್ಟೆಗೆ ಹಿಟ್ಟು ಬಿಡುಗಡೆಯಾಗುವ ಕೊನೇ ಕ್ಷಣದಲ್ಲಿ ಸಂಪೂರ್ಣ ಆ ಯೋಜನೆಯನ್ನೇ ಕೈಬಿಟ್ಟಿರುವುದಾಗಿ ಕೆಎಂಎಫ್‌ ಘೋಷಿಸಿದೆ.

ಅದೇ ಹೊತ್ತಿಗೆ, ನಂದಿನಿ ಉತ್ಪನ್ನಗಳ ಬ್ರಾಂಡಿಂಗ್‌ ಮತ್ತು ಮಾರುಕಟ್ಟೆ ವಿಸ್ತರಣೆಯಲ್ಲಿ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂಬ ಸದಾಭಿಪ್ರಾಯದ ಹೊರತಾಗಿಯೂ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಜಗದೀಶ್‌ ಅವರನ್ನು ಸರ್ಕಾರ ಏಕಾಏಕಿ ವರ್ಗಾವಣೆ ಮಾಡಿದೆ. ವಾಸ್ತವವಾಗಿ ನಂದಿನಿ ಹಿಟ್ಟಿನ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ರಾಜ್ಯದಲ್ಲಿ ಹಿಟ್ಟು ಉತ್ಪನ್ನಗಳಿಗೆ ಇರುವ ಮಾರುಕಟ್ಟೆಯನ್ನು ವಶಕ್ಕೆ ಪಡೆಯುವ ಹಾಗೂ ಆ ಮೂಲಕ ಕೆಎಂಎಫ್‌ ಆದಾಯವನ್ನು ಇನ್ನಷ್ಟು ವೃದ್ಧಿಸುವ ಯೋಜನೆಯ ಹಿಂದೆ ಜಗದೀಶ್‌ ಅವರ ಶ್ರಮವೂ ಇತ್ತು ಎನ್ನಲಾಗುತ್ತಿದೆ.

ಆದಾಗ್ಯೂ, ಕೆಎಂಎಫ್‌ನ ಲಾಭಾಂಶ ಹೆಚ್ಚಳದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಜಗದೀಶ್‌ ಅವರನ್ನು ಏಕಾಏಕಿ ಸರ್ಕಾರ ವರ್ಗಾವಣೆ ಮಾಡಿರುವುದಕ್ಕೂ, ಅದೇ ಹೊತ್ತಿಗೆ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟು ಉತ್ಪನ್ನಗಳು ಮಾರುಕಟ್ಟೆ ಪ್ರವೇಶಕ್ಕೆ ಕೊನೇ ಕ್ಷಣದಲ್ಲಿ ದಿಢೀರನೇ ಹಿಂತೆಗೆದುಕೊಂಡಿರುವುದಕ್ಕೂ ನಿಕಟ ನಂಟಿದೆ ಎಂಬ ಮಾತೂ ಕೆಎಂಎಫ್‌ ಕಡೆಯಿಂದಲೇ ಕೇಳಿಬರುತ್ತಿದೆ.

ಈ ನಡುವೆ, ಕೆಎಂಎಫ್‌ನಲ್ಲಿ ಆಗಿರುವ ಈ ವ್ಯತಿರಿಕ್ತ ಬೆಳವಣಿಗೆಗಳನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಇದೀಗ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧದ ತನ್ನ ವಾಗ್ದಾಳಿಗಳನ್ನು ಹರಿತಗೊಳಿಸಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಈ ಬಗ್ಗೆ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, ಕೇರಳ ಲಾಬಿಗೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಂದಿನಿ ಬ್ರಾಂಡನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಿ ಖಾಸಗಿ ಬ್ರಾಂಡ್‌ಗಳನ್ನು ಪೊರೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ. 

'ನಂದಿನಿಯನ್ನು ಅಮುಲ್ ಜೊತೆ ವಿಲೀನ ಮಾಡಲಾಗುತ್ತದೆ ಎಂದು ಸುಳ್ಳು ಹರಡಿದ ಕಾಂಗ್ರೆಸ್, ಇದೀಗ ಅಧಿಕಾರಕ್ಕೆ ಬಂದ ಬಳಿಕ ನಂದಿನಿಯನ್ನು ಹಾಳುಗೆಡವುತ್ತಿದೆ' ಎಂದು ಆರೋಪಿಸಿದ್ದಾರೆ. ಕೆ.ಎಂ.ಎಫ್.ನ ಎಂ.ಡಿ. ಆಗಿದ್ದ ಜಗದೀಶ್ ಅವರನ್ನು ವರ್ಗಾಯಿಸಿದ್ದನ್ನು ಹಾಗೂ ನಂದಿನಿಯ ಬಹುನಿರೀಕ್ಷಿತ ಇಡ್ಲಿ- ದೋಸೆ ಹಿಟ್ಟು ಮಾರುಕಟ್ಟೆಗೆ ಬಿಡದೇ ತಡೆ ಹಿಡಿದಿರುವ ಕುರಿತ ವರದಿಯನ್ನು ಉಲ್ಲೇಖಿಸಿ ಅವರು ಈ ರೀತಿ ಬರೆದುಕೊಂಡಿದ್ದಾರೆ.

'ಐಡಿಯಂತಹ ಪ್ರತಿಸ್ಪರ್ಧಿ ಬ್ರಾಂಡ್‌ಗಳಿಗೆ ಸಡ್ಡು ಹೊಡೆದು ಇಡ್ಲಿ/ದೋಸೆ ಹಿಟ್ಟಿನಂತಹ ನವೀನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೊದಲೇ, ನಂದಿನಿಯ ಯಶಸ್ಸಿನ ಹಿಂದಿನ ಚಾಲನಾ ಶಕ್ತಿಯಾಗಿದ್ದ ಕೆ.ಎಂ.ಎಫ್. ಎಂ.ಡಿ. ಎಂ.ಕೆ. ಜಗದೀಶ್ ಅವರನ್ನು ಹಠಾತ್ ವರ್ಗಾವಣೆಗೊಳಿಸಲಾಗಿದೆ' ಎಂದು ಅವರು ಹೇಳಿದ್ದಾರೆ.

'ಅವರ(ಜಗದೀಶ್) ನಾಯಕತ್ವದಲ್ಲಿ ನಂದಿನಿ ಹೊಸ ಎತ್ತರಕ್ಕೆ ಏರಿತ್ತು. ಐಎಸ್ಎಲ್, ಪ್ರೊ ಕಬಡ್ಡಿ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿದ್ದಲ್ಲದೇ, ದೆಹಲಿ, ದುಬೈ ಮಾರುಕಟ್ಟೆಗೆ ವಿಸ್ತರಣೆಗೊಂಡಿತ್ತು. ತಿರುಪತಿ ಜೊತೆಗಿನ ಸಂಬಂಧ ಮತ್ತೆ ಸರಿಯಾಗಿತ್ತು' ಎಂದು ಹೇಳಿದ್ದಾರೆ.

ಆದರೆ, "ಈಗ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿ ಕೇರಳ ಲಾಬಿಗೆ ಮಣಿದು ಖಾಸಗಿ ಬ್ರಾಂಡ್‌ಗಳನ್ನು ರಕ್ಷಿಸಲು ನಂದಿನಿಯನ್ನು ಹಾಳುಗೆಡವುತ್ತಿದ್ದಾರೆ. ಸಮರ್ಪಣಾ ಮನೋಭಾವದ ಅಧಿಕಾರಿ ಒಳ್ಳೆಯ ಕೆಲಸ ಮಾಡಿದ್ದಕ್ಕೆ ವರ್ಗಾವಣೆ ಮಾಡಲಾಗಿದೆ. ಒಳ್ಳೆಯ ಕೆಲಸ ಮಾಡುವುದು ಈ ಸರ್ಕಾರದಲ್ಲಿ ಸ್ವೀಕಾರಾರ್ಹವಲ್ಲ" ಎಂದು ವಿಜಯೇಂದ್ರ ಟೀಕಿಸಿದ್ದಾರೆ. "ಈ ಸಂಚಿನ ಹಿಂದೆ ಯಾರಿದ್ದಾರೆ? ಕರ್ನಾಟಕದ ಜನತೆ ಉತ್ತರ ಬಯಸುತ್ತಿದ್ದಾರೆ" ಎಂದು ಕೇಳುವ ಮೂಲಕ ಕೆಎಂಎಫ್‌ ಎಂಡಿ ವರ್ಗಾವಣೆ ಮತ್ತು ನಂದಿನಿ ಹಿಟ್ಟಿನ ಉತ್ಪನ್ನಗಳ ಮಾರುಕಟ್ಟೆ ಪ್ರವೇಶವನ್ನು ಕೊನೆಯ ಕ್ಷಣದಲ್ಲಿ ತಡೆ ಹಿಡಿದಿರುವುದರ ಹಿಂದೆ ರಾಜ್ಯ ಸರ್ಕಾರದ ಪ್ರಭಾವಿಗಳ ಕೈವಾಡವಿದೆ ಎಂಬ ಗಂಭೀರ ಆರೋಪವನ್ನು ಕೂಡ ಮಾಡಿದ್ದಾರೆ.

Tags:    

Similar News