ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಸಲು ಡಿಕೆಶಿ ಆದೇಶದಂತೆ ವಿಜಯೇಂದ್ರ ಪಾದಯಾತ್ರೆ: ಯತ್ನಾಳ್ ಟೀಕೆ
ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಬಿ ವೈ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದಾರೆ.;
ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಬಿ ವೈ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಆದೇಶದಂತೆ ಬಿಜಿಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಪಾದಯಾತ್ರೆಯಲ್ಲಿ ಹೊಂದಾಣಿಕೆ ರಾಜಕಾರಣ ಇದೆ. ಡಿ.ಕೆ. ಶಿವಕುಮಾರ್ ಅವರ ಉಪಕಾರ ತೀರಿಸಲಿಕ್ಕೆ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆ ಮೂಲಕ ಮುಡಾ ಹಗರಣದ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಅವರದೇ ಪಕ್ಷದ ಹಿರಿಯ ನಾಯಕರಿಂದಲೇ ಅಪಸ್ವರ ಕೇಳಿಬಂದಿದೆ.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್ ಬಿಜೆಪಿಯಲ್ಲೇ ಇದ್ದಾಗ ಈ ಹಗರಣ ನಡೆದಿದೆ. ಈಗ ಅವರು ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಯಾಕೆ ಸೇರಿದ್ದಾರೆ ಅಂದರೆ ಇದೆಲ್ಲ ಮುಚ್ಚಿ ಹಾಕಲು. ರಾಜೀವ್ ಯಾರ ನಿರ್ದೇಶನದ ಮೇಲೆ ಕಾಂಗ್ರೆಸ್ ಸೇರಿದ ಅನ್ನೋದು ಎಲ್ಲರಿಗೂ ಗೊತ್ತಿದೆ. ಮುಡಾ ವಿಚಾರವಾಗಿ ಬಿವೈ ವಿಜಯೇಂದ್ರ ನಡೆಸುತ್ತಿರುವ ಹೋರಾಟದಲ್ಲಿ ಡಿಕೆ ಶಿವಕುಮಾರ್ ಕೈವಾಡವಿದೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ವಾಲ್ಮೀಕಿ ನಿಗಮದ ವಿಚಾರದ ಕುರಿತು ಪಾದಯಾತ್ರೆ ಮಾಡುತ್ತಿರುವ ಸಂಬಂಧ ಮಾತನಾಡಿರುವ ಯತ್ನಾಳ್, ನಾವು ಮತ್ತು ರಮೇಶ್ ಜಾರಕಿಹೊಳಿ ಕೇಂದ್ರದಿಂದ ಒಪ್ಪಿಗೆ ಪಡೆದು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ ಎಲ್ಲಿಂದ ಪ್ರತಿಭಟನೆ ಮಾಡಬೇಕೆಂದು ನಿರ್ಣಯವಾಗಿಲ್ಲ. ಬಿಜೆಪಿಯಲ್ಲಿ ಎರಡು ಬಣ ಇಲ್ಲ. ಮಹರ್ಷಿ ವಾಲ್ಮೀಕಿ ನಿಗಮದಲ್ಲಾದದ್ದೂ ದೊಡ್ಡ ಹಗರಣ. ಒಂದು ಸಮುದಾಯದಕ್ಕೆ ಹೋಗಬೇಕಾದ ಹಣ ಪೂರ್ತಿ ನುಂಗಿ ಹಾಕಿದ್ದಾರೆ. ಇನ್ನೊಂದು ಕಡೆ ಮುಡಾದಲ್ಲಿ ಒಬ್ಬ ದಲಿತನ ಜಮೀನು ಪೂರ್ತಿ ನುಂಗಿ ಹಾಕಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ದ ಯಾವುದೇ ಒಳ ಒಪ್ಪಂದ ಇಲ್ಲದೇ ನಾವು ಹೋರಾಟ ಮಾಡುತ್ತಿದ್ದೇವೆ. ನಾವು ಮಾಡುವ ಹೋರಾಟ ಭ್ರಷ್ಟರ ವಿರುದ್ದ ಎಂದರು.