ಕಲ್ಯಾಣ ಕರ್ನಾಟಕದಲ್ಲಿ ವರುಣನ ಆರ್ಭಟ | ಉಕ್ಕಿ ಹರಿದ ನದಿಗಳು, ಗ್ರಾಮಗಳು ಜಲಾವೃತ; ಜನಜೀವನ ಅಸ್ತವ್ಯಸ್ತ

ಚಿತ್ತಾಪುರ ತಾಲೂಕಿನ ಕಡಬೂರ ಗ್ರಾಮವು ಉಕ್ಕಿ ಹರಿಯುತ್ತಿರುವ ಭೀಮಾ ನದಿಯ ಪ್ರವಾಹಕ್ಕೆ ಅಕ್ಷರಶಃ ನಲುಗಿಹೋಗಿದೆ. ಶುಕ್ರವಾರ ರಾತ್ರಿ ಮನೆಗಳಿಗೆ ನೀರು ನುಗ್ಗಿದ್ದು, ಇಡೀ ಗ್ರಾಮಸ್ಥರು ಜಾಗರಣೆ ಮಾಡಿದ್ದಾರೆ.

Update: 2025-09-27 05:16 GMT

ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ. 

Click the Play button to listen to article

ಕಲ್ಯಾಣ ಕರ್ನಾಟಕ ಭಾಗದಲ್ಲಿ, ವಿಶೇಷವಾಗಿ ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಾಗಿಣಾ, ಭೀಮಾ, ಬೆಣ್ಣೆತೊರಾ ಮತ್ತು ಮುಲ್ಲಾಮಾರಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಗ್ರಾಮಗಳು ಜಲಾವೃತಗೊಂಡಿವೆ ಮತ್ತು ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.

ಚಿತ್ತಾಪುರದಲ್ಲಿ ಪ್ರವಾಹದ ಭೀಕರತೆ, ದಂಡೋತಿ ಸೇತುವೆ ಮುಳುಗಡೆ

ಚಿತ್ತಾಪುರ ತಾಲೂಕಿನಲ್ಲಿ ಮಳೆಯ ಅಬ್ಬರಕ್ಕೆ ಕಾಗಿಣಾ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ದಂಡೋತಿ ಸಮೀಪದ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ಚಿತ್ತಾಪುರ-ಕಾಳಗಿ ತಾಲೂಕುಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಕಲಬುರಗಿ ಮತ್ತು ಸೇಡಂ ಪಟ್ಟಣಗಳಿಗೆ ಸಂಚರಿಸುವ ಬಸ್‌ಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಮುಡಬೂಳ, ಮುತ್ತಗಾ, ಶಂಕರವಾಡಿ, ಗೋಳಾ ಬಳಿಯ ಬಾಂದಾರು ಸೇತುವೆಗಳೂ ಜಲಾವೃತವಾಗಿವೆ. ನಾಗಾವಿ ಹಳ್ಳ ಮತ್ತು ಕಾಗಿಣಾ ನದಿಯ ಹಿನ್ನೀರಿನಿಂದಾಗಿ ಮುಡಬೂಳ ಗ್ರಾಮ ಸಂಪರ್ಕ ಕಳೆದುಕೊಂಡಿದೆ.

ಭೀಮಾ ನದಿ ಪ್ರವಾಹಕ್ಕೆ ಕಡಬೂರ ಗ್ರಾಮ ತತ್ತರ

ಚಿತ್ತಾಪುರ ತಾಲೂಕಿನ ಕಡಬೂರ ಗ್ರಾಮವು ಉಕ್ಕಿ ಹರಿಯುತ್ತಿರುವ ಭೀಮಾ ನದಿಯ ಪ್ರವಾಹಕ್ಕೆ ಅಕ್ಷರಶಃ ನಲುಗಿಹೋಗಿದೆ. ಶುಕ್ರವಾರ ರಾತ್ರಿ ಮನೆಗಳಿಗೆ ನೀರು ನುಗ್ಗಿದ್ದು, ಇಡೀ ಗ್ರಾಮಸ್ಥರು ಜಾಗರಣೆ ಮಾಡಿದ್ದಾರೆ. ಹಲವು ಮನೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಜನರು ತಮ್ಮ ಸಾಮಾನು ಸರಂಜಾಮುಗಳನ್ನು ಮೀನುಗಾರರ ತೆಪ್ಪ ಬಳಸಿ ಸುರಕ್ಷಿತ ಸ್ಥಳಗಳಿಗೆ ಸಾಗಿಸುತ್ತಿದ್ದಾರೆ. ಹಿಂದೆಂದೂ ಕಾಣದ ಪ್ರವಾಹ ಇದಾಗಿದ್ದು, ಗ್ರಾಮಸ್ಥರು ಈಶ್ವರ ದೇವಸ್ಥಾನ ಮತ್ತು ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ.

ಚಿಂಚೋಳಿ ತಾಲೂಕಿನಲ್ಲಿ ಜಲಪ್ರಳಯ, ಜಲಾಶಯಗಳಿಂದ ನೀರು ಬಿಡುಗಡೆ

ಚಿಂಚೋಳಿ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಚಂದ್ರಂಪಳ್ಳಿ ಜಲಾಶಯಕ್ಕೆ 7,500 ಕ್ಯೂಸೆಕ್‌ಗೂ ಅಧಿಕ ಒಳಹರಿವು ಬಂದಿದ್ದು, ಮೂರು ಗೇಟ್‌ಗಳನ್ನು ತೆರೆದು ನೀರು ಹೊರಬಿಡಲಾಗಿದೆ. ಇದರಿಂದ ಚಂದ್ರಂಪಳ್ಳಿ ಕೂಡು ಸೇತುವೆ ಮುಳುಗಡೆಯಾಗಿದೆ. ನಾಗರಾಳ ಜಲಾಶಯದಿಂದ 4,500 ಕ್ಯೂಸೆಕ್ ನೀರು ನದಿಗೆ ಬಿಟ್ಟಿದ್ದರಿಂದ ತಾಜಲಾಪುರ, ಗಾರಂಪಳ್ಳಿ ಸೇತುವೆಗಳು ಜಲಾವೃತಗೊಂಡಿವೆ. ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಹಲವು ಬ್ರಿಜ್ ಕಂ ಬ್ಯಾರೇಜುಗಳು ಮುಳುಗಿವೆ. ಚಂದಾಪುರ, ಗಾರಂಪಳ್ಳಿ, ಅಣವಾರ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ತತ್ತರಿಸಿದ್ದಾರೆ.

ರಾಯಚೂರು ಜಿಲ್ಲೆಯಲ್ಲೂ ಮಳೆ, ಮಸ್ಕಿ ಜಲಾಶಯದಿಂದ ನೀರು ಬಿಡುಗಡೆ

ರಾಯಚೂರು ಜಿಲ್ಲೆಯಾದ್ಯಂತ ಸಾಧಾರಣ ಮಳೆ ಮುಂದುವರೆದಿದ್ದು, ಮಸ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನಾಲ್ಕು ಗೇಟ್‌ಗಳ ಮೂಲಕ ಹಳ್ಳಕ್ಕೆ ನೀರು ಬಿಡಲಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ. ಹಳ್ಳದ ದಂಡೆಯ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ. ಮಸ್ಕಿಯ ಬಸವೇಶ್ವರ ನಗರ, ವಾಲ್ಮೀಕಿ ನಗರ ಸೇರಿದಂತೆ ತಗ್ಗು ಪ್ರದೇಶದ ಹಲವು ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿದೆ.

ಅಧಿಕಾರಿಗಳ ಹಗಲು-ರಾತ್ರಿ ಕಾರ್ಯಾಚರಣೆ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಮತ್ತು ಶಹಾಬಾದ್ ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳು ರಾತ್ರಿಯಿಡೀ ಸಂಚರಿಸಿ, ಜನರಿಗೆ ಮುನ್ನೆಚ್ಚರಿಕೆ ನೀಡುತ್ತಿದ್ದಾರೆ. ಜಲಾಶಯಗಳ ಬಳಿ ಅಧಿಕಾರಿಗಳು ಠಿಕಾಣಿ ಹೂಡಿ, ನೀರಿನ ಮಟ್ಟವನ್ನು ಅವಲೋಕಿಸುತ್ತಿದ್ದಾರೆ.

ಪ್ರವಾಹ ಭೀತಿ 

ಮಹಾರಾಷ್ಟ್ರದಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳು ತೀವ್ರವಾಗಿ ಜಲಾವೃತಗೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ 1,500ಕ್ಕೂ ಹೆಚ್ಚು ಜನರನ್ನು 36 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ತೊಗರಿ, ಹತ್ತಿ, ಸೂರ್ಯಕಾಂತಿ, ಹಣ್ಣು ಮತ್ತು ತರಕಾರಿ ಬೆಳೆಗಳು ನಾಶವಾಗಿವೆ. ಈ ವರ್ಷ ಸೆಪ್ಟೆಂಬರ್‌ನಲ್ಲಿ ಕಲಬುರಗಿ ಜಿಲ್ಲೆಯಲ್ಲಿ 250 ಮಿಮೀಗಿಂತ ಹೆಚ್ಚು ಮಳೆ ದಾಖಲಾಗಿದ್ದು, ಇದು ಐದು ದಶಕಗಳಲ್ಲಿಯೇ ಅತಿ ಹೆಚ್ಚು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಹಾರಾಷ್ಟ್ರದ ಉಜನಿ ಮತ್ತು ಸಿನಾ ಅಣೆಕಟ್ಟುಗಳಿಂದ 3.45 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, 94 ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ. ಯಾದಗಿರಿಯ ಹುಣಸಗಿ ಮತ್ತು ಗುರುಮಟ್ಕಲ್ ತಾಲ್ಲೂಕುಗಳು ತೀವ್ರವಾಗಿ ಬಾಧಿತವಾಗಿದ್ದು, ವಿಜಯಪುರದಲ್ಲಿ ಡೋಣಿ ನದಿ ಉಕ್ಕಿ ಹರಿದು ತಾಳಿಕೋಟೆ ಬಳಿಯ ಸೇತುವೆ ಮುಳುಗಿದೆ, ಇದರಿಂದ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮಣ್ಣೂರಿನ ಯೆಲ್ಲಮ್ಮ ದೇವಸ್ಥಾನವು ಜಲಾವೃತವಾಗಿದೆ. ರೈತರು ಈ ಪರಿಸ್ಥಿತಿಯನ್ನು 1972ರ ನಂತರದ ಅತ್ಯಂತ ಭೀಕರ ಬಿಕ್ಕಟ್ಟು ಎಂದು ಬಣ್ಣಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ತಕ್ಷಣ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ರಾಯಚೂರು, ಕೊಪ್ಪಳ, ಧಾರವಾಡ, ಚಿಕ್ಕಮಗಳೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲೂ ಭಾರಿ ಮಳೆಯಾಗಿದೆ ಎಂದು ವರದಿಯಾಗಿದೆ.

Tags:    

Similar News