ವಾಲ್ಮೀಕಿ ನಿಗಮ ಹಗರಣ: ಬಾರ್, ಐಟಿ ಕಂಪನಿಳಿಗೂ ಹಣ ವರ್ಗಾವಣೆ ಮಾಡಿದ್ದ ಆರೋಪಿಗಳು!
ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಅವರಿಗೆ ಸೇರಿದ ನಿವಾಸದಿಂದ 3.5 ಕೋಟಿ ರೂ. ಹಣವನ್ನು ಗುರುವಾರ ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.;
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಕಲ್ಯಾಣ ನಿಗಮದ ಕೋಟ್ಯಾಂಟರ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈದರಾಬಾದ್ ಮತ್ತು ಬೆಂಗಳೂರಿನ ಬಾರ್, ಹೋಟೆಲ್ ಮಾಲೀಕರು ಮತ್ತು ಐಟಿ ಕಂಪನಿಗಳಿಂದ ರೂ.11.7 ಕೋಟಿಯನ್ನು ಎಸ್‌ಐಟಿ ವಸೂಲಿ ಮಾಡಿದೆ.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಅವರಿಗೆ ಸೇರಿದ ನಿವಾಸದಿಂದ 3.5 ಕೋಟಿ ರೂ. ಹಣವನ್ನು ಗುರುವಾರ( ಜೂನ್ 13) ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹಣ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾದ ಹೈದರಾಬಾದ್‌ನ ಸಹಕಾರಿ ಬ್ಯಾಂಕ್‌ನಲ್ಲಿ ನಕಲಿ ಖಾತೆ ತೆರೆದಿದ್ದ ಇಬ್ಬರು ಆರೋಪಿಗಳನ್ನು ಎಸ್ಐಟಿ ಅಧಿಕಾರಿಗಳು ಬುಧವಾರ ( ಜೂನ್ 12) ಬಂಧಿಸಿದ್ದರು. ಆರೋಪಿಗಳನ್ನು ಚಂದ್ರಮೋಹನ್ ಮತ್ತು ಸತ್ಯನಾರಾಯಣ ವರ್ಮಾ ಎಂದು ಗುರುತಿಸಲಾಗಿದೆ. ಹೈದರಾಬಾದ್‌ನಲ್ಲಿರುವ ವರ್ಮಾ ಅವರ ಸಂಬಂಧಿಕರ ಮನೆಗಳಿಗೆ ತೆರಳಿದ ಎಸ್‌ಐಟಿ ಅಧಿಕಾರಿಗಳು, ನಾಲ್ಕು ಸೂಟ್ ಕೇಸ್ ಗಳ್ಲಲಿ ಪತ್ತೆಯಾದ ರೂ.8. 21 ಕೋಟಿ ನಗದನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ವರ್ಮಾ ಅವರಿಗೆ ಸೇರಿದ ಐಷಾರಾಮಿ (ಲಂಬೋರ್ಗಿನಿ) ಕಾರನ್ನು ಸಹ ಪೊಲೀಸರು ಸೀಜ್ ಮಾಡಿದ್ದಾರೆ.
ಇಬ್ಬರು ಆರೋಪಿಗಳು ತೆರೆದಿರುವ 18 ನಕಲಿ ಖಾತೆಗಳಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಹಣ ವರ್ಗಾವಣೆಯಾಗಿದ್ದು, ಹೈದರಾಬಾದ್ ಮತ್ತು ಬೆಂಗಳೂರಿನ ವೈನ್ ಶಾಪ್ ಬಾರ್‌ಗಳು, ಆಭರಣ ಮಳಿಗೆಗಳು ಮತ್ತು ಸಣ್ಣ ಐಟಿ ಕಂಪನಿಗಳು ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಸೇರಿದ 60ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಬ್ಯಾಂಕ್ ಖಾತೆಗಳಿಂದ ವಿತ್ ಡ್ರಾ ಮಾಡಲಾಗಿದ್ದ ಒಟ್ಟು 8.21 ಕೋಟಿ ರೂ ಹಣವನ್ನು ಈಗ ವಶಕ್ಕೆ ಪಡೆಯಲಾಗಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಎಂಟು ಜನರನ್ನು ಬಂಧಿಸಲಾಗಿದೆ. ಎಂಡಿ ಜೆಜಿ ಪದ್ಮನಾಭ, ಅಕೌಂಟ್ಸ್ ಅಧಿಕಾರಿ ಪರಶುರಾಮ್ ಜಿ, ಸಹಕಾರಿ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ, ನಾಗರಾಜ್, ನಾಗೇಶ್, ಜಗದೀಶ್, ಚಂದ್ರಮೋಹನ್ ಮತ್ತು ಸತ್ಯನಾರಾಯಣ ವರ್ಮಾ ಬಂಧಿತ ಆರೋಪಿಗಳಾಗಿದ್ದಾರೆ.