ಮದ್ಯ ಖರೀದಿಗೆ ವಾಲ್ಮೀಕಿ ನಿಗಮದ ಹಣ ಬಳಕೆ: ಇಡಿ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿಕೆಯೊಂದನ್ನು ನೀಡಿದ್ದು, ಈ ಹಣವನ್ನು ಲೋಕಸಭಾ ಚುನಾವಣೆ ವೇಳೆ ಅಪಾರ ಪ್ರಮಾಣದ ಮದ್ಯ ಖರೀದಿಸಲು ಬಳಸಿರುವುದು ಪತ್ತೆಯಾಗಿದೆ' ಎಂದು ಇಡಿ ಹೇಳಿದೆ.

Update: 2024-07-18 12:44 GMT
ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
Click the Play button to listen to article

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿಕೆಯೊಂದನ್ನು ನೀಡಿದ್ದು, ಈ ಹಣವನ್ನು ಲೋಕಸಭಾ ಚುನಾವಣೆ ವೇಳೆ ಅಪಾರ ಪ್ರಮಾಣದ ಮದ್ಯ ಖರೀದಿಸಲು ಬಳಸಿರುವುದು ಪತ್ತೆಯಾಗಿದೆ' ಎಂದು ಇಡಿ  ಹೇಳಿದೆ.

ನಿಗಮದ ಹಣ ದುರ್ಬಳಕೆ ಸಂಬಂಧ ಪೊಲೀಸರು ಮತ್ತು ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ಗಳ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ನಾಲ್ಕು ರಾಜ್ಯಗಳ 23 ಸ್ಥಳಗಳಲ್ಲಿ ಈಚೆಗೆ ಶೋಧಕಾರ್ಯ ನಡೆಸಲಾಗಿತ್ತು ಎಂದು ಇ.ಡಿ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.

'ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರಿಗೆ ಸೇರಿದ ಮನೆ/ಕಚೇರಿಗಳಲ್ಲಿ ಶೋಧ ನಡೆಸಲಾಗಿತ್ತು. ನಿಗಮದ ಖಾತೆಯಿಂದ ವರ್ಗಾವಣೆ ಮಾಡಿಕೊಂಡ ₹89.62 ಕೋಟಿಯಲ್ಲಿ ಅಪಾರ ಪ್ರಮಾಣದ ಮೊತ್ತವನ್ನು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿವಿಧೆಡೆಗೆ ವರ್ಗಾವಣೆ ಮಾಡಿರುವುದನ್ನು ದೃಢಪಡಿಸುವ ದಾಖಲೆಗಳು ಶೋಧದ ವೇಳೆ ಪತ್ತೆಯಾಗಿವೆ' ಎಂದು ಇ.ಡಿ ಹೇಳಿದೆ.

'ನಿಗಮದ ಹಣವನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ ಬ್ಯಾಂಕ್‌ಗಳ 18 ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳಲಾಗಿತ್ತು. ಆ ಖಾತೆಗಳಿಂದ ಹಲವು ಶೆಲ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗಿತ್ತು. ಹವಾಲಾ ಮೂಲಕ ನಗದು ಮತ್ತು ಚಿನ್ನದ ರೂಪದಲ್ಲೂ ಹಣ ಸಾಗಣೆ ಮಾಡಲಾಗಿದೆ. ಈ ಎಲ್ಲಾ ವರ್ಗಾವಣೆಗಳಿಗೆ ಸಂಬಂಧಿಸಿದ ದಾಖಲೆಗಳು ನಾಗೇಂದ್ರ ಮತ್ತು ಬಸನಗೌಡ ಅವರ ಮನೆ ಶೋಧದ ವೇಳೆ ಪತ್ತೆಯಾಗಿವೆ. ತನಿಖೆ ಮುಂದುವರೆದಿದೆ' ಎಂದು ಇ.ಡಿ ತಿಳಿಸಿದೆ.

 ಆರ್ ಅಶೋಕ್ ಆಕ್ರೋಶ

ಇನ್ನು  ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ವರ್ಗಾವಣೆಯಾಗಿದ್ದ ಹಣ ಲೋಕಸಭೆ ಚುನಾವಣೆ ಸಂದರ್ಭ ಹೆಂಡ, ಮದ್ಯ ಖರೀದಿಗೆ ಬಳಕೆಯಾಗಿತ್ತು ಎಂಬ ಜಾರಿ ನಿರ್ದೇಶನಾಲಯದ ಪ್ರಕಟಣೆಗೆ ಸಂಬಂಧಿಸಿದಂತೆ, ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದು,  ಇಡಿ ಬಿಡುಗಡೆ ಮಾಡಿರುವ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಆರ್ ಅಶೋಕ್ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ವಿನಿಯೋಗವಾಗಬೇಕಾಗಿದ್ದ ಹಣ ಕಳ್ಳ ಕಾಕರ ನಶೆ ಏರಿಸುವ ಹೆಂಡ, ಸಾರಾಯಿ ಪಾಲಾಗಿದೆ ಎಂದರೆ ತಮ್ಮ ಕರುಳು ಕಿತ್ತುಬರುವುದಿಲ್ಲವೇ ಸಿಎಂ ಸಿದ್ದರಾಮಯ್ಯನವರೇ? ಇದೇನಾ ತಾವು ಪ್ರತಿಪಾದಿಸುವ ಸಾಮಾಜಿಕ ನ್ಯಾಯ? ತಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ ಪರಿಶಿಷ್ಟ ಪಂಗಡಗಳ ಜನರ ಕ್ಷೇಮ ಕೇಳಿ. ರಾಜೀನಾಮೆ ಕೊಟ್ಟು ಪ್ರಾಯಶ್ಚಿತ ಮಾಡಿಕೊಳ್ಳಿ. ದಲಿತ ಸಮುದಾಯ ನಿಮ್ಮ ದ್ರೋಹವನ್ನ ಯಾವತ್ತಿಗೂ ಕ್ಷಮಿಸುವುದಿಲ್ಲ ಎಂದು ಅಶೋಕ್ ಉಲ್ಲೇಖಿಸಿದ್ದಾರೆ.

ಏನಿದು ಪ್ರಕರಣ

ಮೇ 21 ರಂದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಪಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅಕ್ರಮ ಹಣ ವರ್ಗಾವಣೆಯ ಹಗರಣ ಬೆಳಕಿಗೆ ಬಂದಿತ್ತು. ಸರ್ಕಾರಿ ಸ್ವಾಮ್ಯದ ನಿಗಮದ ಬ್ಯಾಂಕ್ ಖಾತೆಯಿಂದ 187 ಕೋಟಿ ರೂ.ಗಳನ್ನು ಅನಧಿಕೃತವಾಗಿ ವರ್ಗಾಯಿಸಲಾಗಿದೆ ಎಂದು ಚಂದ್ರಶೇಖರನ್ ಅವರ ಮರಣ ಪತ್ರದಲ್ಲಿ ಬರೆದಿದ್ದರು.

ಹಲವಾರು ಐಟಿ ಕಂಪನಿಗಳು ಮತ್ತು ಹೈದರಾಬಾದ್ ಮೂಲದ ಸಹಕಾರಿ ಬ್ಯಾಂಕಿನ ಖಾತೆಗಳಿಗೆ 88.62 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮಾಜಿ ಸಚಿವರಿಗೆ ಸೇರಿದ ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸಿತ್ತು. ನಿಗಮದ ಖಾತೆಗಳಿಂದ ಇತರ ಬ್ಯಾಂಕ್ ಖಾತೆಗಳಿಗೆ ಹಲವಾರು ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಚಂದ್ರಶೇಖರನ್ ಬರೆದಿರುವ ಮರಣ ಪತ್ರದಲ್ಲಿ ಆರೋಪಿಸಲಾಗಿದೆ. ನಂತರ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ಬಿ.ನಾಗೇಂದ್ರ ಅವರು ಜೂನ್ 6 ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಕಾಂಗ್ರೆಸ್ ಸರ್ಕಾರವು ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಇಡಿ ದಾಳಿ 

ಮಾಜಿ ಸಚಿವ ನಾಗೇಂದ್ರ ಅವರ ಮನೆ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮನೆಯ ಮೇಲೆ ಇಡಿ ಅಧಿಕಾರಿಗಳು ಕಳೆದ ವಾರ ದಾಳಿ ಮಾಡಿದ್ದರು.

ನಾಗೇಂದ್ರ ಅವರ ಆಪ್ತ ಸಹಾಯಕರನ್ನು ಕರೆದು ವಿಚಾರಣೆ ಮಾಡಿದ್ದರು. ಆಪ್ತ ಸಹಾಯಕರ ವಿಚಾರಣೆ ಮಾಡಿದ ಬೆನ್ನಲ್ಲೇ ಮಾಜಿ ಸಚಿವ ನಾಗೇಂದ್ರ ಅವರನ್ನೂ ವಶಕ್ಕೆ ಪಡೆಯಲಾಗಿತ್ತು.  ಪ್ರಕರಣದಲ್ಲಿ ನಾಗೇಂದ್ರ ಅವರನ್ನು ಐದು ದಿನಗಳವರೆಗೆ ಇ.ಡಿ ಕಸ್ಟಡಿಗೆ ಪಡೆದಿತ್ತು. ಕಸ್ಟಡಿ ಅವಧಿ ಗುರುವಾರ ಬೆಳಿಗ್ಗೆ (ಜುಲೈ 18) ಕೊನೆಯಾಗಲಿದೆ. ನಾಗೇಂದ್ರ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಎದುರು ಗುರುವಾರ ಬೆಳಿಗ್ಗೆ ಹಾಜರುಪಡಿಸಲಾಗುತ್ತದೆ.  ಬುಧವಾರ ಅವರ ಪತ್ನಿ ಮಂಜುಳಾ ಅವರನ್ನೂ ಇಡಿ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದಾರೆ.

ವಾಲ್ಮೀಕಿ ನಿಗಮ ಮಂಡಳಿಯಲ್ಲಿ ನಡೆದ 187 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಸೇರಿದಂತೆ ಪತ್ನಿ ಹಾಗೂ ಕುಟುಂಬಸ್ಥರ ಅಕೌಂಟ್ ಪರಿಶೀಲನೆ ಮಾಡಲಾಗಿದೆ. ಈ ವೇಳೆ ನಾಗೇಂದ್ರ ಪತ್ನಿಯ ಬ್ಯಾಂಕ್ ಖಾತೆಯಲ್ಲಿಯೂ ಹೆಚ್ಚುವರಿಯಾಗಿ ಹಣ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನಾಗೇಂದ್ರ ಪತ್ನಿ ಮಂಜುಳಾ ಅವರನ್ನು ಇಡಿ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. 

Tags:    

Similar News