ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರಿಗೆ ಸಮಸ್ಯೆಯೇ ಇಲ್ಲ ಎನ್ನುವುದು ಶುದ್ಧ ತಪ್ಪು. ನಾನಂತೂ ಸದಾ ನಿಮ್ಮ ಬೆಂಬಲಕ್ಕೆ ಇದ್ದೇನೆ. ನಮ್ಮ ಸಮುದಾಯದ ಬಡವರ ಸಮಸ್ಯೆ ಪರಿಹರಿಸಲು ಬದ್ಧನಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

Update: 2025-11-07 09:09 GMT

ದಿನೇಶ್ ಗುಂಡೂರಾವ್ ಅವರು ವಿಪ್ರ ಸಮುದಾಯದ ಸ್ವಂತ ಉದ್ಯಮ ನಡೆಸುವವರಿಗೆ ಕಿರು ಸಾಲಯೋಜನೆಯ ಫಲಾನುಭವಿಗಳಿಗೆ ಪತ್ರ ವಿತರಿಸಿದರು. 

Click the Play button to listen to article

ನಮ್ಮ ಸರ್ಕಾರವು ಬ್ರಾಹ್ಮಣ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ ಮತ್ತು ಮುಂದೆಯೂ ಸ್ಪಂದಿಸಲಿದೆ," ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಬೆಂಗಳೂರಿನ ಬೊಬ್ಬುರಕಮ್ಮೆ ಸಭಾಭವನದಲ್ಲಿ ಆಯೋಜಿಸಿದ್ದ ಆಚಾರ್ಯತ್ರಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯೋಜನೆಗಳಿಗೆ ಚಾಲನೆ ಮತ್ತು ಬೆಂಬಲ

ಕಾರ್ಯಕ್ರಮದಲ್ಲಿ, ಸಚಿವರು ವಿಪ್ರ ಸಮುದಾಯದ ಸ್ವಂತ ಉದ್ಯಮಶೀಲರಿಗೆ ನೀಡುವ 'ಕಿರು ಸಾಲ ಯೋಜನೆ'ಯ ಫಲಾನುಭವಿಗಳಿಗೆ ಪತ್ರಗಳನ್ನು ವಿತರಿಸಿದರು. ಜೊತೆಗೆ, 'ಚಾಣಕ್ಯ ಆಡಳಿತ ತರಬೇತಿ ಯೋಜನೆ'ಗೆ ಅಧಿಕೃತವಾಗಿ ಚಾಲನೆ ನೀಡಿದರು.

"ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದ್ದು ನಮ್ಮ ಸರ್ಕಾರ. ಈ ಸಮಾಜ ಅತ್ಯಂತ ಸ್ವಾಭಿಮಾನಿ. ಮುಂದುವರೆದ ಸಮಾಜ ಎಂಬ ಹಣೆಪಟ್ಟಿ ಇದ್ದರೂ, ಈ ಸಮುದಾಯದಲ್ಲೂ ಆರ್ಥಿಕವಾಗಿ ಹಿಂದುಳಿದವರು ಮತ್ತು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವವರು ಇದ್ದಾರೆ. ಅವರ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯ," ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಜಾತಿ ಗಣತಿಯ ಮಹತ್ವ

ಜಾತಿ ಗಣತಿಯ ಕುರಿತು ಮಾತನಾಡಿದ ಅವರು, "ಜಾತಿ ಗಣತಿಯನ್ನು ತಪ್ಪಾಗಿ ಭಾವಿಸಬಾರದು. ವೈಜ್ಞಾನಿಕ ಮಾಹಿತಿ ಲಭ್ಯವಾದಾಗ ಮಾತ್ರ ಸರ್ಕಾರವು ಎಲ್ಲ ಸಮುದಾಯಗಳಿಗೆ ಸಮರ್ಪಕ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಇದರಿಂದ ಬ್ರಾಹ್ಮಣ ಸಮುದಾಯದಲ್ಲಿರುವ ಬಡವರನ್ನು ಗುರುತಿಸಿ, ಅವರಿಗೆ ಹೊಸ ಯೋಜನೆಗಳನ್ನು ತಲುಪಿಸಲು ಅನುಕೂಲವಾಗುತ್ತದೆ," ಎಂದು ಅವರು ಸ್ಪಷ್ಟಪಡಿಸಿದರು.

ಮಂಡಳಿಗೆ ಹೆಚ್ಚಿನ ಅನುದಾನ

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಸಗೋಡು ಜಯಸಿಂಹ ಅವರ ಕಾರ್ಯವನ್ನು ಶ್ಲಾಘಿಸಿದ ಸಚಿವರು, ಮಂಡಳಿಗೆ ಹೆಚ್ಚಿನ ಅನುದಾನ ಒದಗಿಸಲು ಸರ್ಕಾರದ ಮಟ್ಟದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. "ನಾವೆಲ್ಲರೂ ಒಗ್ಗಟ್ಟಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸೋಣ," ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ನಿರ್ದೇಶಕರು ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಪ್ರ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು. 

Tags:    

Similar News