ಹೋರಾಟಗಾರರು ರೈತರಲ್ಲ ಎಂದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ವಿರುದ್ಧ ಆಕ್ರೋಶ
ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯು ಕಬ್ಬಿನ ದರವನ್ನು ಘೋಷಿಸದೆ ಕಬ್ಬು ನುರಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಆರೋಪಿಸಿ ರೈತರು ಕಾರ್ಖಾನೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು.
ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್
ಕಬ್ಬಿಗೆ ಪ್ರತಿ ಟನ್‌ಗೆ 3,500 ರೂಪಾಯಿ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟ ತಾರಕಕ್ಕೇರಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮರಗೂರ ಬಳಿಯ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಎದುರು ಧರಣಿ ನಿರತ ರೈತರ ಮೇಲೆ, ಕಾರ್ಖಾನೆಯ ಅಧ್ಯಕ್ಷರೂ ಆಗಿರುವ ಸ್ಥಳೀಯ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಅವಮಾನ ಮಾಡಿದ ಘಟನೆ ನಡೆದಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯು ಕಬ್ಬಿನ ದರವನ್ನು ಘೋಷಿಸದೆ ಕಬ್ಬು ನುರಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಆರೋಪಿಸಿ ರೈತರು ಕಾರ್ಖಾನೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ದರ ನಿಗದಿಯಾಗುವವರೆಗೂ ಕಾರ್ಖಾನೆ ಆರಂಭಿಸಬಾರದು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಯಶವಂತರಾಯಗೌಡ ಪಾಟೀಲ್ ಮತ್ತು ಪ್ರತಿಭಟನಾನಿರತ ರೈತರ ನಡುವೆ ತೀವ್ರ ವಾಗ್ವಾದ ನಡೆದಿದೆ.
ಶಾಸಕರ ತಪ್ಪು ಮಾತು
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ್, "ಧರಣಿ ಮಾಡುತ್ತಿರುವವರು ನಿಜವಾದ ರೈತರಲ್ಲ, ಯಾರು ರೈತರು, ಯಾರು ರೈತರಲ್ಲ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ನಾನೊಮ್ಮೆ ಮಾತು ಕೊಟ್ಟರೆ, ಅದಕ್ಕೆ ಕಿಮ್ಮತ್ತು ಕೊಟ್ಟು ನಡೆದುಕೊಳ್ಳುವವನು. ಧರಣಿ ನಿರತರನ್ನು ಹೇಗೆ ಎಬ್ಬಿಸಬೇಕು ಎಂಬುದು ನನಗೆ ಗೊತ್ತಿದೆ," ಎಂದು ಆಕ್ರೋಶಭರಿತರಾಗಿ ನುಡಿದಿದ್ದಾರೆ. ಅವರ ಈ ಮಾತುಗಳು ರೈತರನ್ನು ಕೆರಳಿಸಿದವು.
ಶಾಸಕರ ಮಾತಿನಿಂದ ಆಕ್ರೋಶಗೊಂಡ ರೈತರು, "ಶಾಸಕರು ನಮ್ಮನ್ನು ಕೊಲೆ ಮಾಡಿಸುತ್ತಾರೆ ಎಂಬಂತಿದೆ ಅವರ ಮಾತುಗಳು," ಎಂದು ಆರೋಪಿಸಿದರು. ಈ ವೇಳೆ ಶಾಸಕರು "ಯಾರು? ಯಾರು ಹಾಗೆಂದಿದ್ದು?" ಎಂದು ಮರುಪ್ರಶ್ನಿಸಿದಾಗ ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ದರ ಘೋಷಣೆಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಯಶವಂತರಾಯಗೌಡ ಪಾಟೀಲ್ ಅವರು ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಸಕ್ಕರೆ ಕಾರ್ಖಾನೆಯನ್ನು 2018ರಲ್ಲಿ ಪುನರಾರಂಭಗೊಳಿಸಿದ್ದರು.