HMT Land Issue | ಮಾಜಿ ಸ್ಪೀಕರ್ ಅರಣ್ಯ ಒತ್ತುವರಿ ವಿರುದ್ಧ ಕ್ರಮ ಏಕ್ಕಿಲ್ಲ: ಎಚ್‌ಡಿಕೆ

Update: 2024-10-26 10:09 GMT

ಬೆಂಗಳೂರಿನ ಜಾಲಹಳ್ಳಿಯಲ್ಲಿ ಎಚ್‌ಎಂ‌ಟಿ ಕಂಪನಿಗೆ ಸೇರಿದ ಐದು ಎಕರೆ ಜಾಗವನ್ನು ಅರಣ್ಯ ಇಲಾಖೆಯ ವಶಕ್ಕೆ ತೆಗೆದುಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಚ್‌ಎಂ‌ಟಿ ಜಮೀನು ವಶಪಡಿಸಿಕೊಂಡಿರುವ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ಇದರಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನೆಡೆ ಆಗುವುದು ಖಚಿತ ಎಂದರು.

ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ಒಬ್ಬರು ನೂರಾರು ಎಕರೆ ಅರಣ್ಯ ಭೂಮಿ ಲೂಟಿ ಹೊಡೆದಿದ್ದಾರಲ್ಲ, ಮೊದಲು ಅದರ ಬಗ್ಗೆ ನೋಡಲಿ ಸಚಿವ ಈಶ್ವರ್ ಖಂಡ್ರೆ ಅವರು. ಇದರ ಬಗ್ಗೆ ನ್ಯಾಯಾಲಯ ಕೊಟ್ಟಿರುವ ತೀರ್ಪನ್ನು ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದಾರೆ. ಮೊದಲು ಇದನ್ನು ನೋಡಲಿ. ಎಷ್ಟು ಎಕರೆ ಲೂಟಿ ಆಗಿದೆ ಅಲ್ಲಿ ನೋಡಲಿ. ನಿನ್ನೆ ಐದು ಎಕರೆಗೆ ಬಲವಂತವಾಗಿ ಹೋಗಿ ಫೆನ್ಸಿಂಗ್ ಹಾಕಿಕೊಂಡಿದ್ದಾರೆ. ಕೋರ್ಟ್ ಆದೇಶಗಳಿಗೆ ಎಚ್‌ಎಂಟಿ ಹಾಗೂ ಅಧಿಕಾರಿಗಳು ತಲೆ ಬಾಗಬೇಕಾಗುತ್ತದೆ ಎಂದು ಹೇಳಿದರು.

ಕೇತಗಾನಹಳ್ಳಿ ಭೂ ಒತ್ತುವರಿ ವಿವಾದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಒತ್ತುವರಿ ವಿವಾದ ನಲವತ್ತು ವರ್ಷಗಳಿಂದ ನಡೆಯುತ್ತಿದೆ. ಹೈಕೋರ್ಟ್ ಆದೇಶಗಳ ದಾಖಲೆ ನೋಡಿ, ಸರ್ವೆ ಮಾಡಿ ಅಧಿಕಾರಿಗಳು ಸುಸ್ತಾಗಿದ್ದಾರೆ. ಕೇತಗಾನಹಳ್ಳಿಯಲ್ಲಿ ಒತ್ತುವರಿ ಆಗಿದ್ದರೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ, ನಮ್ಮ ಆಕ್ಷೇಪವೇನಿಲ್ಲ. 1980 ರಿಂದಲೂ ಈ ಕಥೆ ಇನ್ನೂ ಮುಗಿದಿಲ್ಲ. ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿದ ಆಸ್ತಿಯ ಬಗ್ಗೆ ತನಿಖೆ ನಡೆಸಲು ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದರು.

ಇನ್ನೊಬ್ಬರ ಥರ ಕಳ್ಳ ಬೇಲಿ ಹಾಕಿಕೊಂಡು ಪಡೆದ ಆಸ್ತಿ ಇದಲ್ಲ. ಸರ್ಕಾರ ಯಾವ ರೀತಿಯಾದರೂ ತನಿಖೆ ಮಾಡಲಿ, ನಾನು ಸಿದ್ಧನಿದ್ದೇನೆ ಎಂದರು.

ಎಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಎಚ್ಎಂಟಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಎಚ್‌ಎಂಟಿ ಕಂಪನಿಗೆ ಗುತ್ತಿಗೆ ನೀಡಲಾಗಿದ್ದ ಭೂಮಿಯನ್ನು ವಾಪಸ್‌ ಅರಣ್ಯ ಇಲಾಖೆಗೆ ಹಿಂಪಡೆದುಕೊಳ್ಳುವ ವಿಷಯದಲ್ಲಿ ಕೇಂದ್ರ ಸಚಿವರು ಮತ್ತು ರಾಜ್ಯ ಅರಣ್ಯ ಸಚಿವರ ನಡುವೆ ವಾಗ್ವಾದ ಭುಗಿಲೆದ್ದಿತ್ತು.

Tags:    

Similar News