ತಗ್ಗು ಪ್ರದೇಶಗಳಲ್ಲಿ ಅಂಡರ್‌ಗ್ರೌಂಡ್ ಪಾರ್ಕಿಂಗ್ ನಿರ್ಮಾಣಕ್ಕೆ ತಡೆ: ಡಿಸಿಎಂ ಡಿ.ಕೆ. ಶಿವಕುಮಾರ್
ತಗ್ಗು ಪ್ರದೇಶಗಳಲ್ಲಿ ಅಂಡರ್‌ಗ್ರೌಂಡ್ ವಾಹನ ನಿಲ್ದಾಣಗಳ ಬದಲಿಗೆ ನೆಲಮಹಡಿಯಲ್ಲಿ ವಾಹನ ನಿಲುಗಡೆಗೆ ಯೋಜನೆ ರೂಪಿಸಲಾಗುವುದು. ಜನರು ತಮ್ಮ ಮನೆಗಳನ್ನು ಮೇಲಿನ ಮಹಡಿಗಳಲ್ಲಿ ನಿರ್ಮಾಣ ಮಾಡಿಕೊಳ್ಳಬಹುದು ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.;
ಕೆರೆಗಳ ಸಮೀಪ ಹಾಗೂ ತಗ್ಗು ಪ್ರದೇಶಗಳಲ್ಲಿ ಅಂಡರ್‌ಗ್ರೌಂಡ್ ವಾಹನ ನಿಲ್ದಾಣಗಳ ನಿರ್ಮಾಣಕ್ಕೆ ಭವಿಷ್ಯದಲ್ಲಿ ಅವಕಾಶ ನೀಡದಂತೆ ಕಾನೂನು ಜಾರಿಗೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಹೇಳಿದ್ದಾರೆ. ಮಳೆ ಕಡಿಮೆಯಾದ ನಂತರ ಈ ಕುರಿತು ಕಾರ್ಯಸೂಚಿ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ವಿದ್ಯುತ್ ಅವಘಡದಲ್ಲಿ ಬಿ.ಟಿ.ಎಂ. 2ನೇ ಹಂತದ ಡಾಲರ್ಸ್ ಕಾಲೋನಿ ಬಳಿಯ ಎಂ.ಎಸ್. ಪಾಳ್ಯದಲ್ಲಿ ಮನಮೋಹನ್ ಕಾಮತ್ ಮತ್ತು ದಿನೇಶ್ ಎಂಬಿಬ್ಬರು ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಅಧಿಕಾರಿಗಳ ಜೊತೆ ಭೇಟಿ ನೀಡಿದ ಡಿಸಿಎಂ ಶಿವಕುಮಾರ್, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಳೆಯಿಂದ ಉಂಟಾದ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ನೀಡಲಾಗುವುದು ಎಂದು ಘೋಷಿಸಿದರು. ಜಾನುವಾರುಗಳು ಮೃತಪಟ್ಟಿದ್ದರೆ ಅವುಗಳಿಗೂ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಅಧಿಕಾರಿಗಳಿಗೆ ದಿನವಿಡೀ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಅಂಡರ್‌ಗ್ರೌಂಡ್ ಪಾರ್ಕಿಂಗ್‌ಗೆ ಪರ್ಯಾಯ
ತಗ್ಗು ಪ್ರದೇಶಗಳಲ್ಲಿ ಅಂಡರ್‌ಗ್ರೌಂಡ್ ವಾಹನ ನಿಲ್ದಾಣಗಳ ಬದಲಿಗೆ ನೆಲಮಹಡಿಯಲ್ಲಿ ವಾಹನ ನಿಲುಗಡೆಗೆ ಯೋಜನೆ ರೂಪಿಸಲಾಗುವುದು. ಜನರು ತಮ್ಮ ಮನೆಗಳನ್ನು ಮೇಲಿನ ಮಹಡಿಗಳಲ್ಲಿ ನಿರ್ಮಾಣ ಮಾಡಿಕೊಳ್ಳಬಹುದು ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು. ವಿದ್ಯುತ್ ಆಘಾತದಿಂದ ದುರಂತ ಸಂಭವಿಸಿದ ಕುರಿತು ಮಾತನಾಡಿದ ಅವರು, ಅಂಡರ್‌ಗ್ರೌಂಡ್‌ನಲ್ಲಿ ಸಂಗ್ರಹವಾಗಿದ್ದ ನೀರನ್ನು ಪಂಪ್ ಮೂಲಕ ತೆಗೆಯುವಾಗ ಅಧಿಕಾರಿಗಳು, ಪೊಲೀಸರು ಮತ್ತು ಸಹಾಯಕ್ಕೆ ಬಂದವರಿಗೂ ವಿದ್ಯುತ್ ಆಘಾತವಾಗಿದೆ ಎಂದು ವಿವರಿಸಿದರು.
ಬೆಂಗಳೂರಿನ ಗೌರವಕ್ಕೆ ಧಕ್ಕೆ ತರಬೇಡಿ
ಬಿಬಿಎಂಪಿ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿ ಕಾರ್ಯಕ್ಷಮತೆಯ ಬಗ್ಗೆ ಸಾರ್ವಜನಿಕರಿಂದ ಕೇಳಿಬಂದ ದೂರುಗಳ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ಬೆಂಗಳೂರಿನ ಜನಸಂಖ್ಯೆ 1.4 ಕೋಟಿ ಇದ್ದು, ವಾರ್ ರೂಮ್‌ನಲ್ಲಿ ಕೆಲಸ ಹೇಗೆ ನಡೆಯುತ್ತದೆ ಎಂದು ಮಾಧ್ಯಮದವರು ಒಮ್ಮೆ ಭೇಟಿ ನೀಡಿ ನೋಡಬೇಕು, ಎಲ್ಲರೂ ತಂಡವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳಲ್ಲಿನ ಟೀಕೆಗಳ ಬಗ್ಗೆ ಕೇಳಿದಾಗ, ಇಂತಹ ಟೀಕೆಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರುವುದಿಲ್ಲ, ಬದಲಿಗೆ ಬೆಂಗಳೂರಿನ ಗೌರವವನ್ನೇ ಕೆಡಿಸುತ್ತವೆ ಎಂದು ತಿರುಗೇಟು ನೀಡಿದರು.
ಬಿಜೆಪಿಯವರು ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆ, "ಅವರಿಂದ ಇನ್ನೇನು ಮಾಡಲು ಸಾಧ್ಯ? ನಾವು ಎರಡು ವರ್ಷದ ಸಂಭ್ರಮ ಆಚರಿಸಿದ್ದೇವೆ. ಮೋದಿಯವರ ಸರ್ಕಾರಕ್ಕೆ 5 ವರ್ಷ ತುಂಬಿದಾಗ ಸಂಭ್ರಮ ಆಚರಿಸಿಲ್ಲವೇ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಆಚರಣೆಗೆ ನಮಗೆ ಹಕ್ಕಿಲ್ಲವೇ ಎಂದು ಪ್ರಶ್ನಿಸಿದರು. ಕಾರ್ಯಕ್ರಮವನ್ನು ಮೊದಲೇ ನಿಗದಿಪಡಿಸಲಾಗಿತ್ತು, ಈ ನಡುವೆ ಮಳೆ ಬಂದಿದೆ. ಈಗ ಉಂಟಾದ ಸಮಸ್ಯೆಗಳನ್ನು ಬಗೆಹರಿಸಲು ನಾವು ಕೆಲಸ ಮಾಡುತ್ತಿದ್ದೇವೆ" ಎಂದರು.
ಮುಂದಿನ 4-5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ನಾವು ಜಾಗೃತರಾಗಿದ್ದೇವೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು. ಮಳೆಯಿಂದ ಉಂಟಾದ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಅವರು ಭರವಸೆ ನೀಡಿದರು.