ಬೀದರ್ ಗುತ್ತಿಗೆದಾರ ಆತ್ಮಹತ್ಯೆ | ದೂರು ಪಡೆಯಲು ನಿರ್ಲಕ್ಷಿಸಿದ ಇಬ್ಬರು ಹೆಡ್‌ ಕಾನ್‌ಸ್ಟೇಬಲ್‌ ಅಮಾನತು

ಯುವ ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಡೆತ್ ನೋಟ್ ಗಮನಿಸಿ ಕುಟುಂಬಸ್ಥರು ಗಾಂಧಿ ಗಂಜ್ ಠಾಣೆಗೆ ಬಂದು ದೂರು ನೀಡಿದ್ದರು. ಆದರೆ, ಕಟ್ಟಿತೂಂಗಾವ್‌ ಗ್ರಾಮದ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಪೊಲೀಸರು ಕರ್ತವ್ಯಲೋಪ ಎಸಗಿದ್ದರು.

Update: 2024-12-27 11:44 GMT
ಗುತ್ತಿಗೆದಾರ ಸಚಿನ್‌ ಮಾನಪ್ಪ ಪಾಂಚಾಲ್‌

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಸೇರಿ ಎಂಟು ಮಂದಿ ಜೀವ ಬೆದರಿಕೆ ಹಾಕಿರುವ ಕುರಿತು ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ಜಿಲ್ಲೆ ಭಾಲ್ಕಿ ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆಯ ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಹೆಡ್ ಕಾನ್ ಸ್ಟೆಬಲ್‌ಗಳಾದ ರಾಜೇಶ್ ಚೆಲ್ವಾ ಹಾಗೂ ಶ್ಯಾಮಲಾ ಅಮಾನತಾದವರು. ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ್ ಗ್ರಾಮದ ಯುವ ಗುತ್ತಿಗೆದಾರ ಸಚಿನ್ ಮಾನಪ್ಪ ಪಾಂಚಾಳ್ ಗುರುವಾರ ಬೆಳಿಗ್ಗೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದನ್ನು ಗಮನಿಸಿದ್ದ ಸಚಿನ್ ಕುಟುಂಬಸ್ಥರು ತಕ್ಷಣವೇ ಗಾಂಧಿ ಗಂಜ್ ಠಾಣೆಗೆ ತೆರಳಿ ಸಚಿನ್ ಹುಡುಕಿಕೊಡುವಂತೆ ದೂರು ನೀಡಿದ್ದರು.

ಆಗ ಠಾಣೆಯಲ್ಲಿದ್ದ ಹೆಡ್ ಕಾನ್‌ಸ್ಟೇಬಲ್‌ಗಳಾದ ರಾಜೇಶ್ ಚೆಲ್ವಾ ಮತ್ತು ಶ್ಯಾಮಲಾ, ಕಟ್ಟಿತೂಂಗಾವ್ ಗ್ರಾಮ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಧನ್ನೂರ ಪೊಲೀಸ್ ಠಾಣೆಗೆ ಹೋಗಿ ಎಂದು ಅಲ್ಲಿಂದ ಕುಟುಂಬದವರನ್ನು ಸಾಗಹಾಕಿದ್ದರು. ಇದಾದ ಕೆಲ ಸಮಯದ ಬಳಿಕ ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ದೂರು ಸ್ವೀಕರಿಸದೇ ಕರ್ತವ್ಯಲೋಪ ಎಸಗಿದ ಕಾರಣ ಗಾಂಧಿ ಗಂಜ್ ಠಾಣೆಯ ಈ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ತಿಳಿಸಿದ್ದಾರೆ.

ಸಚಿನ್ ಕುಟುಂಬ ಸದಸ್ಯರು ಗುರುವಾರ ಗಾಂಧಿ ಗಂಜ್ ಠಾಣೆಗೆ ದೂರು ಕೊಡಲು ಹೋಗಿದ್ದರು. ಈ ವೇಳೆ ಪ್ರಕರಣದ ತನಿಖೆಗಾಗಿ ಠಾಣೆಯ ಇನ್ಸ್‌ಪೆಕ್ಟರ್‌ ಬೇರೆ ಸ್ಥಳಕ್ಕೆ ಹೋಗಿದ್ದರು. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಆದರೆ, ಕರ್ತವ್ಯದಲ್ಲಿದ್ದ ರಾಜೇಶ್ ಚೆಲ್ವಾ ಮತ್ತು ಶಾಮಲಾ ದೂರು ಪಡೆಯದೇ ಕರ್ತವ್ಯಲೋಪ ಎಸಗಿದ್ದಾರೆ. ಹಾಗಾಗಿ ಈ ಇಬ್ಬರನ್ನೂ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.

ಕುಟುಂಬಸ್ಥರ ಧರಣಿ

ಯುವ ಗುತ್ತಿಗೆದಾರನ ಮೃತದೇಹ ರೈಲ್ವೆ ಹಳಿಯ ಮೇಲೆ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬ ಸದಸ್ಯರು ಸ್ಥಳಕ್ಕೆ ದೌಡಾಯಿಸಿ ಧರಣಿ ನಡೆಸಿದರು. ಪೊಲೀಸರ ನಿರ್ಲಕ್ಷ್ಯ ಹಾಗೂ ಬೆದರಿಕೆ ಹಾಕಿದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ, ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಲು ಅಡ್ಡಿಪಡಿಸಿದರು. ಆಗ ಪೊಲೀಸರು ಸಚಿನ್ ಕುಟುಂಬಸ್ಥರನ್ನು ಸಮಾಧಾನಪಡಿಸಿ ಶವವನ್ನು ಬ್ರಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದರು.

ಸಚಿನ್ ಸಹೋದರಿ ಸವಿತಾ ನೀಡಿದ ದೂರು ಆಧರಿಸಿ ರಾಜು ಕಪನೂರ ಸೇರಿ ಒಂಬತ್ತು ಜನರ ವಿರುದ್ಧ ದನ್ನೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಾದ ಕಲಬುರಗಿ ಕಾಂಗ್ರೆಸ್ ಮುಖಂಡ ರಾಜು ಕಪನೂರ, ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಂದಕುಮಾರ ನಾಗಭುಜಂಗೆ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಗೋರಖನಾಥ ಸಜ್ಜನ್, ಪ್ರತಾಪ್ ಧೀರ ಪಾಟೀಲ (ಪಪ್ಪು ಪಾಟೀಲ), ಸೊಲ್ಲಾಪುರದ ಕಾರ್ಪೊರೇಟರ್ ಮನೋಜ್ ಸೆಜವಾಲ್, ಬೆಂಗಳೂರಿನ ಯುನಿಟಿ ಇನ್ಫಾಬಿಲ್ಡ್ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಎಚ್.ಎಂ., ಯೋಜನಾ ವ್ಯವಸ್ಥಾಪಕ ವಿನಯ್ ಟಿ.ಪಿ., ಕಲಬುರಗಿಯ ಪ್ರಥಮ ದರ್ಜೆ ಗುತ್ತಿಗೆದಾರ ರಾಮನಗೌಡ ಪಾಟೀಲ ಹಾಗೂ ರಾಜು ಕಪನೂರ ಅವರನ್ನು ಪರಿಚಯ ಮಾಡಿಕೊಟ್ಟಿದ್ದ ಸತೀಶ ರತ್ನಾಕರ ವಿರುದ್ಧ ಸಚಿನ್ ಸೋದರಿ ದೂರು ನೀಡಿದ್ದು, ಎಲ್ಲರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Tags:    

Similar News