ನಕಲಿ ಕೀ ಬಳಸಿ ಬೈಕ್ ಕದಿಯುತ್ತಿದ್ದ ಇಬ್ಬರು ಖದೀಮರ ಬಂಧನ, 37.5 ಲಕ್ಷ ರೂ. ಮೌಲ್ಯದ ವಾಹನಗಳು ವಶ

ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರಿಗೆ, ಮಹತ್ವದ ಮಾಹಿತಿ ಲಭ್ಯವಾಗಿತ್ತು. ಅದನ್ನು ಆಧರಿಸಿ, ನವೆಂಬರ್ 4 ರಂದು ಟಿ.ಸಿ. ಪಾಳ್ಯ ಮುಖ್ಯರಸ್ತೆಯಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಯಿತು.

Update: 2025-11-18 10:34 GMT
Click the Play button to listen to article

ನಕಲಿ ಕೀ ಬಳಸಿ ನಗರದಾದ್ಯಂತ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಮಹದೇವಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 37.5 ಲಕ್ಷ ರೂಪಾಯಿ ಮೌಲ್ಯದ ಒಟ್ಟು 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಕ್ಟೋಬರ್ 17 ರಂದು ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡಿಯ ಬಸವಣ್ಣ ನಗರದ ನಿವಾಸಿಯೊಬ್ಬರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಮಹದೇವಪುರ ಪೊಲೀಸರು, ಇನ್ಸ್‌ಪೆಕ್ಟರ್ ಜಿ. ಪ್ರವೀಣ್ ಬಾಬು ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದರು.

ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರಿಗೆ, ಮಹತ್ವದ ಮಾಹಿತಿ ಲಭ್ಯವಾಗಿತ್ತು. ಅದನ್ನು ಆಧರಿಸಿ, ನವೆಂಬರ್ 4 ರಂದು ಟಿ.ಸಿ. ಪಾಳ್ಯ ಮುಖ್ಯರಸ್ತೆಯಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ವಿಚಾರಣೆಯ ವೇಳೆ, ಆರೋಪಿಗಳು ದೂರುದಾರರ ವಾಹನ ಸೇರಿದಂತೆ ಬೆಂಗಳೂರಿನ ಹಲವೆಡೆ ಬೈಕ್ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

11 ಪ್ರಕರಣಗಳು ಬಯಲಿಗೆ

ಆರೋಪಿಗಳನ್ನು ನವೆಂಬರ್ 5 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಯಿತು. ಸುದೀರ್ಘ ವಿಚಾರಣೆ ವೇಳೆ, ಆರೋಪಿಗಳು ಕದ್ದ ವಾಹನಗಳನ್ನು ಶಿಕಾರಿಪುರ, ಕಾಡುಗೋಡಿ, ಹರಿಹರದಲ್ಲಿರುವ ತಮ್ಮ ಸ್ನೇಹಿತರಿಗೆ ಮಾರಾಟ ಮಾಡಿರುವುದು ಮತ್ತು ಉಳಿದ ವಾಹನಗಳನ್ನು ಮಾರಾಟ ಮಾಡಲು ಕಾಮಧೇನು ಲೇಔಟ್‌ನ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ, ನವೆಂಬರ್ 8 ರಿಂದ 12ರ ಅವಧಿಯಲ್ಲಿ ಸ್ನೇಹಿತರಿಂದ 9 ಬೈಕ್‌ಗಳನ್ನು ಮತ್ತು ಖಾಲಿ ಜಾಗದಲ್ಲಿ ನಿಲ್ಲಿಸಿದ್ದ 11 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಿಂದ ಮಹದೇವಪುರ ಠಾಣೆಯ 7, ಹೆಚ್.ಎ.ಎಲ್ ಠಾಣೆಯ 2, ವೈಟ್‌ಫೀಲ್ಡ್ ಮತ್ತು ರಾಮಮೂರ್ತಿ ನಗರ ಠಾಣೆಗಳ ತಲಾ 1 ಪ್ರಕರಣ ಸೇರಿದಂತೆ ಒಟ್ಟು 11 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಉಳಿದ 9 ವಾಹನಗಳ ಮಾಲೀಕರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

ವೈಟ್‌ಫೀಲ್ಡ್ ಉಪ ವಿಭಾಗದ ಡಿಸಿಪಿ ಕೆ. ಪರಶುರಾಮ್ ಮತ್ತು ಎಸಿಪಿ ರೀನಾ ಸುವರ್ಣ ಅವರ ಮಾರ್ಗದರ್ಶನದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tags:    

Similar News