Honey Trap | ಸಚಿವರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ; ಸತೀಶ್ ಜಾರಕಿಹೊಳಿ ಗಂಭೀರ ಆರೋಪ
ಸರ್ಕಾರದ ಸಚಿವರೊಬ್ಬರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿದೆ. ಹನಿಟ್ರ್ಯಾಪ್ ನಲ್ಲಿ ನಮ್ಮವರಷ್ಟೇ ಅಲ್ಲದೇ ಬೇರೆ ಪಕ್ಷದ ನಾಯಕರು ಸಿಲುಕಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.;

ವಿಧಾನಸಭೆ ಅಧಿವೇಶನದಲ್ಲಿ ಹನಿಟ್ರ್ಯಾಪ್ ಸದ್ದು ಪ್ರತಿಧ್ವನಿಸಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿತ್ತು ಎಂಬ ವದಂತಿ ನಿಜವೆಂದು ಸ್ವತಃ ಸಚಿವರೇ ಒಪ್ಪಿಕೊಂಡ ನಂತರ ಪ್ರಕರಣ ಬಿರುಗಾಳಿಯನ್ನೇ ಎಬ್ಬಿಸಿದೆ.
ವಿಧಾನಸಭೆ ಅಧಿವೇಶನದಲ್ಲಿ ಹನಿಟ್ರ್ಯಾಪ್ ವಿಚಾರವಾಗಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಸಚಿವರೊಬ್ಬರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿದೆ. ಹನಿಟ್ರ್ಯಾಪ್ ನಲ್ಲಿ ನಮ್ಮವರಷ್ಟೇ ಅಲ್ಲದೇ ಬೇರೆ ಪಕ್ಷದ ನಾಯಕರು ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಬಿಜೆಪಿ ಅವಧಿಯ ಸರ್ಕಾರದಲ್ಲಿ ಹನಿಟ್ರ್ಯಾಪ್‌ನಲ್ಲಿ ಸಿಕ್ಕಿಬಿದ್ದಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸೋದರ ಸತೀಶ್ ಜಾರಕಿಹೊಳಿ ಈ ಗಂಭೀರ ಆರೋಪ ಮಾಡಿದ್ದಾರೆ.
ಕೆಲವರು ಹನಿಟ್ರ್ಯಾಪ್ ಮಾಡುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಸಚಿವ ರಾಜಣ್ಣ ಅವರ ಮೇಲೆ ನಡೆದಿರುವ ಹನಿಟ್ರ್ಯಾಪ್ ಯತ್ನಕ್ಕೆ ಸಂಬಂಧಿಸಿ ದೂರು ನೀಡಲು ಹೇಳಿದ್ದೇನೆ. ಇಂತಹ ಕೃತ್ಯಗಳಿಗೆ ಕಡಿವಾಣ ಬೀಳಬೇಕು. ನಮ್ಮಲ್ಲಿ ಒಬ್ಬ ಸಚಿವರ ವಿಕೆಟ್ ಬೀಳಿಸಲು ಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಹನಿಟ್ರ್ಯಾಪ್ ಯತ್ನದ ಸಂಬಂಧ ಗೃಹ ಸಚಿವರೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದಿದ್ದಾರೆ.
ವಿಷಯ ತಿಳಿದುಕೊಳ್ಳದೇ ಮಾತನಾಡುವುದು ಸಲ್ಲದು
ಹನಿಟ್ರ್ಯಾಪ್ ವಿಚಾರದ ಕುರಿತು ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ಹನಿಟ್ರ್ಯಾಪ್ ವಿಚಾರವನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೇ ಮಾತನಾಡುವುದು ಸರಿಯಲ್ಲ. ಇದು ಬಹಳ ಸೂಕ್ಷ್ಮ ವಿಚಾರ. ವೈಯಕ್ತಿಕವಾಗಿ ಯಾರಿಗೂ ಧಕ್ಕೆ ಆಗುವಂತೆ ನಡೆದುಕೊಳ್ಳಬಾದರು. ರಾಜಕೀಯ ಜೀವನದಲ್ಲಿ ತುಂಬಾ ಹುಷಾರಾಗಿ ಇರಬೇಕು. ರಾಜಕಾರಣದಲ್ಲಿ ಇರುವವರು ಬಾಯಿ ಹಾಗೂ ಕಚ್ಛೆ ಎರಡನ್ನೂ ಶುದ್ಧವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ಹನಿಟ್ರ್ಯಾಪ್ ಪ್ರಯತ್ನ ನಡೆದಿದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು. ವೃಥಾ ಬೇರೆಯವರನ್ನು ತೇಜೋವಧೆ ಮಾಡುವುದು ಒಳ್ಳೆಯದಲ್ಲ. ಗೌರವಯುತವಾಗಿ ಇದ್ದರೆ ಯಾರು ಟಾರ್ಗೆಟ್ ಆಗಲ್ಲ. ಯಾವುದೇ ದಾಖಲೆ ಇಲ್ಲದ ಚರ್ಚೆಗೆ ಮಾನ್ಯತೆ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದು ಕಾಂಗ್ರೆಸ್ ಪಕ್ಷದಲ್ಲಿ ಗುಸು ಗುಸು ಆರಂಭವಾಗಿದೆ.