ಸುರಂಗ ಮಾರ್ಗ ಯೋಜನೆ: ಟೆಂಡರ್ ಪ್ರಶ್ನಿಸಿ ಪ್ರಕಾಶ್ ಬೆಳವಾಡಿ ಅರ್ಜಿ, ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ವಾದದ ವೇಳೆ, ಉದ್ದೇಶಿತ ಸುರಂಗ ಮಾರ್ಗಕ್ಕಾಗಿ ನಗರದ ಶ್ವಾಸಕೋಶದಂತಿರುವ ಲಾಲ್‌ಬಾಗ್‌ನ 6.5 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ ಎಂದು ತೇಜಸ್ವಿ ಸೂರ್ಯ ಪೀಠದ ಗಮನಕ್ಕೆ ತಂದರು.

Update: 2025-10-26 06:23 GMT
Click the Play button to listen to article

ನಗರದ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ ಸುರಂಗ ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹೊರಡಿಸಿರುವ ಟೆಂಡರ್ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಕೋರಿ ಚಲನಚಿತ್ರ ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಬೆಳವಾಡಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (PIL) ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ನೋಟಿಸ್ ಜಾರಿ ಮಾಡಿದೆ.

ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠವು ಶುಕ್ರವಾರ ನಡೆಸಿತು. ಅರ್ಜಿದಾರರ ಪರವಾಗಿ ವಕೀಲ ಹಾಗೂ ಸಂಸದ ತೇಜಸ್ವಿ ಸೂರ್ಯ ವಾದ ಮಂಡಿಸಿದರು.

ವಾದದ ವೇಳೆ, ಉದ್ದೇಶಿತ ಸುರಂಗ ಮಾರ್ಗಕ್ಕಾಗಿ ನಗರದ ಶ್ವಾಸಕೋಶದಂತಿರುವ ಲಾಲ್‌ಬಾಗ್‌ನ 6.5 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ ಎಂದು ತೇಜಸ್ವಿ ಸೂರ್ಯ ಪೀಠದ ಗಮನಕ್ಕೆ ತಂದರು. ಈ ಕಾರಣಕ್ಕಾಗಿಯೇ ಲಾಲ್‌ಬಾಗ್‌ನ ಆ ಭಾಗದಲ್ಲಿ ಈಗಾಗಲೇ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅವರು ವಿವರಿಸಿದರು.

ಇದೇ ವೇಳೆ, ಈ ಹಿಂದೆ ಡಾ. ಆದಿಕೇಶವಲು ಮತ್ತಿತರರು ಸಲ್ಲಿಸಿದ್ದ ಮತ್ತೊಂದು ಅರ್ಜಿಗೆ ಸಂಬಂಧಿಸಿದಂತೆ ವಕೀಲರು ವಾದ ಮಂಡಿಸಿ, ನಗರದ ಐತಿಹಾಸಿಕ ಕೇಂದ್ರವಾಗಿರುವ ಲಾಲ್‌ಬಾಗ್‌ನ 6 ಎಕರೆ ಜಮೀನನ್ನು ಯೋಜನೆಗೆ ಬಳಸಿಕೊಳ್ಳಲು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಮರಗಳು ಅಪಾಯದಂಚಿನಲ್ಲಿರುವಾಗ, ನ್ಯಾಯಾಲಯದ ಅನುಮತಿಯಿಲ್ಲದೆ ಮರಗಳನ್ನು ಕಡಿಯದಂತೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದಿನ ಮಂಗಳವಾರಕ್ಕೆ ಮುಂದೂಡಿದೆ. 

Tags:    

Similar News