ಸೈಬರ್ ವಂಚನೆ: 5 ಸ್ಟಾರ್‌ ರೇಟಿಂಗ್ ಆಸೆಗೆ 20 ಲಕ್ಷ ರೂಪಾಯಿ ಕಳೆದುಕೊಂಡ ವ್ಯಕ್ತಿ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಆನ್‌ಲೈನ್ ಜಾಹೀರಾತುಗಳಿಗೆ 'ಲೈಕ್' ಮಾಡಿ 5 ಸ್ಟಾರ್ ರೇಟಿಂಗ್ ನೀಡಿದರೆ ಕಮಿಷನ್ ನೀಡುವುದಾಗಿ ಹೇಳಿ ಮೋಸ ಮಾಡಲಾಗಿದೆ.;

Update: 2025-07-13 04:52 GMT

ಸಾಂದರ್ಭಿಕ ಚಿತ್ರ

ಆನ್‌ಲೈನ್‌ನಲ್ಲಿ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ 5 ಸ್ಟಾರ್ ರೇಟಿಂಗ್ ನೀಡಿದರೆ ಕಮಿಷನ್ ಸಿಗುತ್ತದೆ ಎಂಬ ಆಮಿಷಕ್ಕೆ ಒಳಗಾದ ವ್ಯಕ್ತಿಯೊಬ್ಬರು 20.62 ಲಕ್ಷ ರೂಪಾಯಿ ಕಳೆದುಕೊಂಡು ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಂತ್ರಸ್ತ ವ್ಯಕ್ತಿ ನೀಡಿದ ದೂರಿನ ಪ್ರಕಾರ, ಮೇ 6ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಮನೆಯಲ್ಲೇ ಮಾಡುವ ಅರೆಕಾಲಿಕ ಕೆಲಸದ ಜಾಹೀರಾತನ್ನು ನೋಡಿದ್ದಾರೆ. ಅದರಲ್ಲಿ ನೀಡಲಾಗಿದ್ದ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಸಂಪರ್ಕಿಸಿದಾಗ, ಅವರಿಗೆ ಮೂರು ಟೆಲಿಗ್ರಾಂ ಲಿಂಕ್‌ಗಳನ್ನು ಕಳುಹಿಸಲಾಗಿದೆ. ಈ ಲಿಂಕ್‌ಗಳಲ್ಲಿ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಆನ್‌ಲೈನ್ ಜಾಹೀರಾತುಗಳಿಗೆ 'ಲೈಕ್' ಮಾಡಿ 5 ಸ್ಟಾರ್ ರೇಟಿಂಗ್ ನೀಡಿದರೆ ಕಮಿಷನ್ ನೀಡುವುದಾಗಿ ತಿಳಿಸಲಾಗಿತ್ತು.

ನಂತರ, 'ಮೀನಾ ರೆಡ್ಡಿ' ಎಂಬುವವರು ಸಂತ್ರಸ್ತರನ್ನು ಸಂಪರ್ಕಿಸಿ ಅವರ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡಿದ್ದಾರೆ. ಆರಂಭದಲ್ಲಿ, ಈ ಕೆಲಸಕ್ಕೆ 120, 200 ರೂಪಾಯಿ ಹೀಗೆ ಸಣ್ಣ ಮೊತ್ತದ ಹಣವನ್ನು ಸಂತ್ರಸ್ತರಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಟ್ರೇಡಿಂಗ್ ಖಾತೆಯ ಟಾಸ್ಕ್ ಪೂರೈಸುವ ಮೂಲಕ ಹೆಚ್ಚು ಹಣ ಗಳಿಸಬಹುದು ಎಂದು ವಂಚಕರು ಆಮಿಷವೊಡ್ಡಿದ್ದಾರೆ. ಅವರ ಸೂಚನೆಯಂತೆ 'ರಾಜೇಶ್ ಶರ್ಮ' ಎಂಬುವವರನ್ನು ಸಂಪರ್ಕಿಸಿದಾಗ, 'ಲಕ್ಕಿ ಸಿಂಗ್' ಮತ್ತು 'ರವಿ ಪಾಟೇಲ್' ಎಂಬುವವರು ಪರಿಚಯವಾಗಿದ್ದಾರೆ. ಇವರು ನೀಡಿದ ಸೂಚನೆಯಂತೆ ಸಂತ್ರಸ್ತರು ಹಂತ ಹಂತವಾಗಿ ವಿವಿಧ ಬ್ಯಾಂಕ್‌ ಖಾತೆಗಳಿಗೆ ಒಟ್ಟು 20.62 ಲಕ್ಷ ರೂಪಾಯಿ ಹಣ ಪಾವತಿಸಿದ್ದಾರೆ. ತಾವು ಕಟ್ಟಿದ ಹಣವನ್ನು ಹಿಂತಿರುಗಿಸದೆ, ಯಾವುದೇ ಕಮಿಷನ್ ಕೂಡ ನೀಡದೆ ವಂಚಕರು ಮೋಸ ಮಾಡಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ಆರೋಪಿಸಿದ್ದಾರೆ. ಬಜಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Tags:    

Similar News