ಟ್ರೇಡಿಂಗ್ ವಂಚನೆ | ಆಕ್ಸಿಸ್‌ ಬ್ಯಾಂಕಿನ ನಾಲ್ವರು ಸೇರಿ ಎಂಟು ಮಂದಿ ಬಂಧನ

Update: 2024-10-16 06:30 GMT
ಆಕ್ಸಿಸ್ ಬ್ಯಾಂಕ್‌ನ ನಾಲ್ವರು ನೌಕರರೂ ಸೇರಿ ಎಂಟು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Click the Play button to listen to article

ಷೇರುಪೇಟೆ ವಹಿವಾಟಿನಲ್ಲಿ ಹಣ ಹೂಡಿದರೆ ದುಪ್ಪಟ್ಟು ವಾಪಸ್ ನೀಡುವುದಾಗಿ ಆಮಿಷವೊಡ್ಡಿ ವಂಚಿಸುತ್ತಿದ್ದ ಜಾಲವನ್ನು ಬೆಂಗಳೂರು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ. ಆಕ್ಸಿಸ್ ಬ್ಯಾಂಕ್‌ನ ನಾಲ್ವರು ನೌಕರರೂ ಸೇರಿ ಎಂಟು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಆಕ್ಸಿಸ್ ಬ್ಯಾಂಕ್‌ನ ನಾಗರಬಾವಿ ಶಾಖೆಯ ವ್ಯವಸ್ಥಾಪಕ ಕಿಶೋರ್ ಸಾಹು, ಮಾರಾಟ ವಿಭಾಗದ ವ್ಯವಸ್ಥಾಪಕ ಮನೋಹರ್, ಮಾರಾಟ ವಿಭಾಗದ ಪ್ರತಿನಿಧಿಗಳಾದ ಕಾರ್ತಿಕ್, ರಾಕೇಶ್ ಹಾಗೂ ಚಿಕ್ಕಮಗಳೂರಿನ ಲಕ್ಷ್ಮಿಕಾಂತ್, ರಘುರಾಜ್, ಕೆಂಗೇಗೌಡ, ಮಾಲಾ ಬಂಧಿತರು.  ಪ್ರಕರಣದ ಪ್ರಮುಖ ಆರೋಪಿ ಸೇರಿ ಒಂಬತ್ತು ಮಂದಿ ತಲೆಮರೆಸಿಕೊಂಡಿದ್ದು ಅವರಿಗೆ ಶೋಧ ನಡೆಸಲಾಗುತ್ತಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಕಮಿಷನ‌ರ್ ಬಿ.ದಯಾನಂದ, ಯಲಹಂಕದ ನಿವಾಸಿಯೊಬ್ಬರಿಗೆ ಆಮಿಷವೊಡ್ಡಿದ್ದ ಆರೋಪಿಗಳು 1.5 ಕೋಟಿ ರೂ ವಂಚಿಸಿದ್ದರು. 'ಹಣ ಕಳೆದುಕೊಂಡಿದ್ದ ವ್ಯಕ್ತಿ ನೀಡಿದ ದೂರು ಆಧರಿಸಿ, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳು ತೆರೆದಿದ್ದ ಬ್ಯಾಂಕ್ ಖಾತೆಗಳಲ್ಲಿದ್ದ  28 ಲಕ್ಷ ರೂ  ವಹಿವಾಟು ಸ್ಥಗಿತಗೊಳಿಸಲಾಗಿದೆ' ಎಂದು ಮಂಗಳವಾರ ತಿಳಿಸಿದ್ದಾರೆ. 

ಯಲಹಂಕದ ವ್ಯಕ್ತಿಗೆ ಆಮಿಷವೊಡ್ಡಿ ಅವರಿಂದ 50 ಸಾವಿರ ರೂ ಕಟ್ಟಿಸಿಕೊಂಡಿದ್ದರು. ಆರಂಭದಲ್ಲಿ ಆ ಹಣವನ್ನು ವಿಐಪಿ ಟ್ರೇಡಿಂಗ್ ಖಾತೆಗೆ ಜಮೆ ಮಾಡಲಾಗಿತ್ತು. ಕೆಲವು ದಿನಗಳ ಬಳಿಕ ಹಣ ದ್ವಿಗುಣ ಆಗಿರುವುದಾಗಿ ಸಂದೇಶ ಬಂದಿತ್ತು. ನಂತರ, ಪದೇ ಪದೇ ಕರೆ ಮಾಡುತ್ತಿದ್ದ ಆರೋಪಿಗಳು, ಮತ್ತಷ್ಟು ಹೂಡಿಕೆ ಮಾಡುವಂತೆ ಒತ್ತಡ ಹೇರುತ್ತಿದ್ದರು. ದೂರುದಾರ ಮಾರ್ಚ್‌ನಿಂದ ಜೂನ್‌ವರೆಗೆ ಒಟ್ಟು 1.5 ರೂ ಕೋಟಿ ಹೂಡಿಕೆ ಮಾಡಿದ್ದರು' ಎಂದು ಮಾಹಿತಿ ನೀಡಿದರು.

 'ವಿಐಪಿ ಟ್ರೇಡಿಂಗ್ ಖಾತೆಯಲ್ಲಿ ಹೂಡಿಕೆ ಮಾಡಿದ್ದ ಹಣವು 28 ಕೋಟಿಗೆ ಏರಿಕೆ ಆಗಿದೆ ಎಂಬುದಾಗಿ ವಾಟ್ಸ್ಆ್ಯಪ್‌ನಲ್ಲಿ ಆರೋಪಿಗಳು ತೋರಿಸಿದ್ದರು. ಆ ಹಣವನ್ನು ವಾಪಸ್ ಪಡೆಯಲು ನಿರ್ವಹಣೆ ಶುಲ್ಕವಾಗಿ 75 ಲಕ್ಷ ರೂ ಪಾವತಿಸಬೇಕು. ಅಷ್ಟು ಹಣ ನೀಡಿದರಷ್ಟೇ 28 ಕೋಟಿ ರೂ ವಾಪಸ್ ಪಡೆದುಕೊಳ್ಳಬಹುದು ಎಂದು ಆರೋಪಿಗಳು ತಾಕೀತು ಮಾಡಿದ್ದರು. ಆರೋಪಿಗಳ ಆಮಿಷದ ಬಗ್ಗೆ ಅನುಮಾನಗೊಂಡ ವ್ಯಕ್ತಿ ದೂರು ನೀಡಿದ್ದರು' ಎಂದು ಹೇಳಿದರು.

'ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, ದೂರುದಾರರು ಹೂಡಿಕೆ ಮಾಡಿದ್ದ ಖಾತೆಗಳ ವಿವರವನ್ನು ಪಡೆದುಕೊಂಡಿದ್ದರು. ಅದರಲ್ಲಿ ಎರಡು ಖಾತೆಗಳು ನಾಗರಬಾವಿ ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲಿದ್ದವು. ಚಿಕ್ಕಮಗಳೂರಿನ ವ್ಯಕ್ತಿಗಳ ಹೆಸರಿನಲ್ಲಿ ಆ ಖಾತೆಗಳಿದ್ದವು. ಬ್ಯಾಂಕ್ ವ್ಯವಸ್ಥಾಪಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಯಾವುದೇ ದಾಖಲೆ ಪಡೆಯದೇ ಖಾತೆಗಳನ್ನು ಮಾಡಿಕೊಟ್ಟಿರುವುದು ಗೊತ್ತಾಗಿತ್ತು. ಆರೋಪಿಗಳು ಸ್ಥಳೀಯರು ಅಲ್ಲ ಎಂಬುದೂ ದೃಢಪಟ್ಟಿತ್ತು. ತನಿಖೆ ಮುಂದುವರಿಸಿದಾಗ ಅದೇ ರೀತಿ ಇನ್ನೂ ನಾಲ್ಕು ಖಾತೆಗಳನ್ನು ತೆರೆದಿರುವುದು ಗೊತ್ತಾಯಿತು. ಇದೇ ಬ್ಯಾಂಕ್‌ನಲ್ಲಿ ಆರು ಖಾತೆಗಳಲ್ಲಿ ಒಟ್ಟು ₹97 ಕೋಟಿ ವಹಿವಾಟು ನಡೆಸಿರುವುದು ಪತ್ತೆಯಾಗಿದೆ. ಇದರಲ್ಲಿ ಎಷ್ಟು ವಂಚನೆ ನಡೆದಿದೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ' ಎಂದು ದಯಾನಂದ ಮಾಹಿತಿ ನೀಡಿದರು.

'ಈ ಅಕ್ರಮದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಸೇರಿದಂತೆ ನಾಲ್ವರು ಶಾಮೀಲಾಗಿರುವುದು ತನಿಖೆಯಿಂದ ದೃಢಪಟ್ಟಿದೆ. ಬ್ಯಾಂಕ್‌ನ ನಾಲ್ವರು ನೌಕರರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ' ಎಂದು ತಿಳಿಸಿದರು.

254 ಪ್ರಕರಣ ದಾಖಲು

'ಬಂಧಿತರಾಗಿರುವ ಚಿಕ್ಕಮಗಳೂರಿನ ನಾಲ್ವರು ಆರೋಪಿಗಳಿಗೆ ತಲೆಮರೆಸಿಕೊಂಡಿರುವ ಒಬ್ಬ ಆರೋಪಿ ನಾಗರಬಾವಿ ಬ್ಯಾಂಕ್ ಶಾಖೆಯಲ್ಲಿ ಖಾತೆ ಮಾಡಿಸಿಕೊಟ್ಟಿದ್ದ. ವಂಚನೆ ಕೃತ್ಯದಲ್ಲಿ ತೊಡಗಿಸಿಕೊಂಡರೆ ಕಮಿಷನ್ ನೀಡುವುದಾಗಿ ಆಮಿಷವೊಡ್ಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆರೋಪಿತರ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಎನ್‌ಸಿಆ‌ರ್ ಪೋರ್ಟಲ್‌ನಲ್ಲಿ ವಂಚಕರ ವಿರುದ್ಧ 254 ಪ್ರಕರಣ ದಾಖಲಾಗಿದ್ದು, ಕೋಟ್ಯಂತರ ವ್ಯವಹಾರ ನಡೆಸಿರುವುದು ಗೊತ್ತಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಆರೋಪಿಗಳು ಈ ಜಾಲವನ್ನು ವಿಸ್ತರಿಸಿಕೊಂಡಿದ್ದರು' ಎಂದು ಕಮಿಷನರ್‌ ಮಾಹಿತಿ ನೀಡಿದ್ದಾರೆ.

Tags:    

Similar News