ಗದಗದಲ್ಲಿ ಭೀಕರ ಅಪಘಾತ; ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಸೇರಿ ಮೂವರು ಸಾವು

ಕಾರಿನಲ್ಲಿದ್ದ ಪೊಲೀಸ್​ ಕಾನ್‌ಸ್ಟೆಬಲ್‌ಗಳಾದ ಅರ್ಜುನ್ ನೆಲ್ಲೂರ (29), ವೀರೇಶ್ ಉಪ್ಪಾರ (31) ಹಾಗೂ ರವಿ ನೆಲ್ಲೂರ(43) ಮೃತಪಟ್ಟರು.

Update: 2025-09-19 07:10 GMT

ಅಪಘಾತದಿಂದಾಗಿ ನಜ್ಜುಗುಜ್ಜಾದ ಕಾರು 

Click the Play button to listen to article

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್​ಗೆ ಡಿಕ್ಕಿ ಹೊಡೆದು ಬಸ್​ಗೆ ಅಪ್ಪಳಿಸಿದ ಪರಿಣಾಮ ಇಬ್ಬರು ಕಾನ್‌ಸ್ಟೆಬಲ್‌ಗಳು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಗದಗ ತಾಲೂಕಿನ ಹರ್ಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ-67ರಲ್ಲಿ ನಡೆದಿದೆ.

ಕಾರಿನಲ್ಲಿದ್ದ ಪೊಲೀಸ್​ ಕಾನ್‌ಸ್ಟೆಬಲ್‌ಗಳಾದ ಅರ್ಜುನ್ ನೆಲ್ಲೂರ (29), ವೀರೇಶ್ ಉಪ್ಪಾರ (31) ಹಾಗೂ ಅರ್ಜುನ್ ಅವರ ಚಿಕ್ಕಪ್ಪ ರವಿ ನೆಲ್ಲೂರ (43) ಮೃತರು. ಕಾರು ಕೊಪ್ಪಳದಿಂದ ಗದಗಿಗೆ ತೆರಳುತ್ತಿತ್ತು. ಈ ವೇಳೆ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದ ಬಳಿಕ ಮತ್ತೊಂದು ಬದಿಯಲ್ಲಿ ಬರುತ್ತಿದ್ದ ಗೋವಾದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಬಸ್ ಚಾಲಕನಿಗೂ ಗಾಯಗಳಾಗಿವೆ. ಕಾರು ಚಾಲಕನ ಅತಿಯಾದ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.

ಬಸ್ ಮುಂಭಾಗ ಹಾಗೂ ಕಾರು ಸಂಪೂರ್ಣ ನಜ್ಜುಗುಜ್ಜಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.  

ಮೃತ ಕಾನ್​ಸ್ಟೇಬಲ್​ಗಳಾದ ಅರ್ಜುನ್ ನೆಲ್ಲೂರು ಮತ್ತು ವೀರೇಶ್ ಉಪ್ಪಾರ ಇಟಗಿ ಗ್ರಾಮದವರಾಗಿದ್ದು, ಇಬ್ಬರಿಗೂ ಮದುವೆ ನಿಶ್ಚಿಯವಾಗಿತ್ತು. ಇಬ್ಬರೂ ಕೂಡ ಪೊಲೀಸ್ ಇಲಾಖೆಗೆ ಸೇರಿ ಏಳು ವರ್ಷಗಳಾಗಿತ್ತು. ವೀರೇಶ್ ಉಪ್ಪಾರ ಅವರು ಕೊಪ್ಪಳ ಜಿಲ್ಲಾ ಪೊಲೀಸ್ ವೈರ್‌ಲೆಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಅರ್ಜುನ್ ನೆಲ್ಲೂರು ಹಾವೇರಿ ಜಿಲ್ಲಾ ಪೊಲೀಸ್ ವೈರ್‌ಲೆಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

Tags:    

Similar News