Language Policy Part 2 | ʼತ್ರಿಭಾಷಾ ಸೂತ್ರʼ: ರಾಜ್ಯದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಹಿಂದಿಯಲ್ಲಿ ಫೇಲ್‌..!

ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರದಿಂದಲೇ ಕರ್ನಾಟಕದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂಬ ತಮಿಳುನಾಡು ಶಿಕ್ಷಣ ಸಚಿವರ ಹೇಳಿಕೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತ್ರಿಭಾಷಾ ನೀತಿ ಬದಲು ದ್ವಿಭಾಷಾ ನೀತಿ ಅಳವಡಿಕೆಗೆ ಒತ್ತಾಯಗಳು ಕೇಳಿಬಂದಿವೆ.;

Update: 2025-07-08 01:30 GMT

ಕೇಂದ್ರದಿಂದ ಹಿಂದಿ ಭಾಷೆ ಹೇರಿಕೆಯಿಂದಾಗಿ ಕರ್ನಾಟಕ ರಾಜ್ಯ ಭಾಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಫೇಲ್‌ ಆಗಿದ್ದಾರೆ ಎಂದು ನೆರೆ ರಾಜ್ಯ ತಮಿಳುನಾಡಿನ ಶಿಕ್ಷಣ ಸಚಿವರ ಹೇಳಿಕೆಯು ಇದೀಗ ಸಂಚಲನವನ್ನುಂಟು ಮಾಡಿದೆ. ರಾಜ್ಯದಲ್ಲಿ ತ್ರಿಭಾಷಾ ಅಥವಾ ದ್ವಿಭಾಷಾ ಅಗತ್ಯವೇ ಎಂಬುದರ ಬಗ್ಗೆ ಚರ್ಚೆಗೆ ಗ್ರಾಸವಾಗಿವೆ.

ಈ ನಡುವೆ, ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿಯಲ್ಲಿ ಅನುತ್ತೀರ್ಣರಾದ ಮಕ್ಕಳ ಸಂಖ್ಯೆ 90 ಸಾವಿರ ಎಂಬ ಹೇಳಿಕೆ ನೀಡಿದ್ದರು. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ  ಅಂಕಿ-ಅಂಶಗಳನ್ನು ಪರಿಶೀಲಿಸಿದಾಗ ಅದಕ್ಕಿಂತ ಹೆಚ್ಚೂ ಮಕ್ಕಳು ಫೇಲ್‌ ಆಗಿದ್ದಾರೆ ಎಂಬ ಅಂಶ ಬಹಿರಂಗಗೊಂಡಿದೆ. 

ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ ಅನುತ್ತೀರ್ಣ ಮಕ್ಕಳ ಸಂಖ್ಯೆ 90 ಸಾವಿರ ಅಲ್ಲ, ಬದಲಿಗೆ 1.42 ಲಕ್ಷಕ್ಕೂ ಹೆಚ್ಚು ಎಂಬುದು ಬಹಿರಂಗವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯೇ ನೀಡಿರುವ ಅಧಿಕೃತ ಮಾಹಿತಿ ಇದಾಗಿದೆ. ಹಿಂದಿ ಭಾಷಾ ಪರೀಕ್ಷೆಯಲ್ಲಿ ಶೇ.19.72 ರಷ್ಟು ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಕಳೆದ ಮಾರ್ಚ್‌ ಏಪ್ರಿಲ್‌ನಲ್ಲಿ ನಡೆದ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ 7,21,72 ವಿದ್ಯಾರ್ಥಿಗಳು ತೃತೀಯ ಭಾಷೆ ಹಿಂದಿ ಪರೀಕ್ಷೆ ಬರೆದಿದ್ದರು. ಈ ಪೈಕಿ 5,79,382 ಮಕ್ಕಳು ಪಾಸಾಗಿದ್ದು, ಉಳಿದ 1,42,400 ವಿದ್ಯಾರ್ಥಿಗಳು ಫೇಲಾಗಿದ್ದಾರೆ.

ಕರ್ನಾಟಕದಲ್ಲಿ ಹಿಂದಿ ಭಾಷೆ ಹೇರಿಕೆಯಿಂದಾಗಿ ಮಂಡಳಿಯ ಪರೀಕ್ಷೆಯಲ್ಲಿ 90 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ. ಇದು ಕೇಂದ್ರ ಸರ್ಕಾರದ ಭಾಷಾ ನೀತಿಯ ವಿಫಲತೆಗೆ ಸಾಕ್ಷಿಯಾಗಿದೆ ಎಂದು ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಆರೋಪಿಸಿದ್ದರು. ರಾಜ್ಯದ ವಿದ್ಯಾರ್ಥಿಗಳು ಹಿಂದಿಯಲ್ಲಿ ಫೇಲ್‌ ಆಗಿರುವುದು ಇದಕ್ಕೆ ಪುಷ್ಠಿ ನೀಡಿದಂತಾಗಿದೆ. 

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಮೂಲಗಳ ಪ್ರಕಾರ, ಪ್ರತಿ ವರ್ಷ ಸರಾಸರಿ ಇಷ್ಟೇ ಫಲಿತಾಂಶ ಇರಲಿದೆ. ಕನಿಷ್ಠ ಒಂದು ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದು ಸಾಮಾನ್ಯ. ಇದಕ್ಕೆ ನಾನಾ ಕಾರಣಗಳು ಇರಬಹುದು. ಇಲಾಖೆಯು ಸಹ ಈ ಬಗ್ಗೆ ಹೆಚ್ಚಿನ ಗಮನಹರಿಸಿಲ್ಲ ಎಂಬುದು ತಿಳಿದುಬಂದಿದೆ. 

ಹಿಂದಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ

ತಮಿಳುನಾಡಿನ ಸಚಿವರ ಹೇಳಿಕೆಯಿಂದಾಗಿ ರಾಜ್ಯದಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿಸುವುದನ್ನು ಹಿಂಪಡೆಯುವ ಕುರಿತ ಚರ್ಚೆಗಳು ಆರಂಭಗೊಂಡಿವೆ. ಅಲ್ಲದೇ, ಹಿಂದಿ ಭಾಷೆಯನ್ನು ಪೋಷಕರಾಗಲಿ, ಮಕ್ಕಳಾಗಲಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಪರೀಕ್ಷೆ ದೃಷ್ಟಿಯಿಂದ ಮಾತ್ರ ವಿದ್ಯಾಭ್ಯಾಸ ಮಾಡುವುದರಿಂದ ಇಂತಹ ಫಲಿತಾಂಶ ಬರಲು ಕಾರಣವಾಗಿರಬಹುದು. ಮಕ್ಕಳು ಭವಿಷ್ಯ ರೂಪಿಸುವಲ್ಲಿ ಇಂಗ್ಲೀಷ್‌ ಮಹತ್ವದ ಪಾತ್ರ ವಹಿಸುತ್ತದೆ. ವೃತಿ ಬದುಕು ಕಟ್ಟಿಕೊಳ್ಳಲು ಇಂಗ್ಲೀಷ್‌ ಅನಿವಾರ್ಯ. ಹೀಗಾಗಿ ಪೋಷಕರು ಇಂಗ್ಲೀಷ್‌ಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಕನ್ನಡ ಮಾತೃಭಾಷೆಯಾಗಿರುವುದರಿಂದ ಶಾಲೆಯಲ್ಲಿ ಒಂದು ಭಾಷೆಯಲ್ಲಿ ಕಲಿಕೆ ಮಾಡಲಾಗುತ್ತದೆ. ಇನ್ನು, ಹಿಂದಿ ಭಾಷೆಯನ್ನು ಕೇವಲ ಒಂದು ವಿಷಯವನ್ನಾಗಿ ಕಲಿಯಲಾಗುತ್ತದೆ. ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಿಂದಿ ಭಾಷೆಯನ್ನು ಕಲಿಸಲಾಗುತ್ತದೆ. ಇಲ್ಲವಾದಲ್ಲಿ ಹಿಂದಿಯ ಅಗತ್ಯ ಇರುವುದಿಲ್ಲ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ. 

ಹಿಂದಿ ಶಿಕ್ಷಕರ ಕೊರತೆ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಬೋಧನೆ ಮಾಡಲು ಶಿಕ್ಷಕರ ಕೊರತೆ ಇದೆ. 5060 ಹುದ್ದೆಗಳಲ್ಲಿ 3532 ಹುದ್ದೆಗಳಲ್ಲಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 1528 ಹುದ್ದೆಗಳು ಖಾಲಿ ಇವೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ 5ರಿಂದ 10ನೇ ತರಗತಿವರೆಗೆ ಹಿಂದಿ ಕಲಿಕೆ ಕೂಡ ಗುಣಮಟ್ಟದಿಂದ ಕೂಡಿಲ್ಲ.  ರಾಜ್ಯಸರ್ಕಾರವು ಸಹ ಹಿಂದಿ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡುವಲ್ಲಿ ಹೆಚ್ಚಾಗಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಲಾಗಿದೆ. 

ಶಿಕ್ಷಕರ ಕೊರತೆಗೆ ಕಾರಣಗಳು ನಿಯಮಿತ ನೇಮಕಾತಿ ಇಲ್ಲದಿರುವುದು. ಇದು ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ. ರಾಜ್ಯ ಸರ್ಕಾರವು ಕಡಿಮೆ ವೆಚ್ಚದ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವುದು ಸಾಮಾನ್ಯ ಪ್ರವೃತ್ತಿಯಾಗಿದೆ. ಅರ್ಹ ವೃತ್ತಿಪರರೊಂದಿಗೆ ಶಾಶ್ವತ ಹುದ್ದೆಗಳನ್ನು ಭರ್ತಿ ಮಾಡುವುದಿಲ್ಲ. ಒಂದು ವರ್ಷದ ಅವಧಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತದೆ. ಅವರು ತಮ್ಮ ವಿದ್ಯಾರ್ಥಿಗಳ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಿದೆ. ಅಲ್ಲದೇ, ಅತಿಥಿ ಶಿಕ್ಷಕರು ಎಂದಿಗೂ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುವುದಿಲ್ಲ ಮತ್ತು ಆದ್ದರಿಂದ ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸುವಲ್ಲಿ ಹಿಂದೇಟುವಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. 

ದ್ವಿಭಾಷೆ ಬಳಕೆ ಮರಳಬೇಕು

ಹಿಂದಿ ಹೇರಿಕೆ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ, ಶಾಲಾ ಮಕ್ಕಳಿಗೆ ಕಲಿಕೆಯಲ್ಲಿ ಭಾಷೆ ಹೊರಯಾಗಬಾರದು. ರಾಜ್ಯದಲ್ಲಿ ತ್ರಿಭಾಷೆ ಕಾರ್ಯಸಾಧುವಲ್ಲ. ದ್ವಿಭಾಷೆ ನೀತಿ ಮರಳಬೇಕು. ಮಾತೃಭಾಷೆಯಲ್ಲಿ ಪ್ರಭುತ್ವ ಇರಬೇಕು ಎಂಬ ಕಾರಣಕ್ಕಾಗಿ ರಾಜ್ಯದಲ್ಲಿ ಕನ್ನಡ ಕಡ್ಡಾಯವಾಗಿದೆ. ಅನ್ಯ ರಾಜ್ಯದಲ್ಲಿ ಅವರ ಭಾಷೆಗೆ ಮೊದಲ ಆದ್ಯತೆ ನೀಡಲಾಗಿದೆ. ಇಂಗ್ಲೀಷ್‌ ಭಾಷೆ ಮಕ್ಕಳ ಭವಿಷ್ಯ ರೂಪಿಸಲು ಬೇಕಾಗುತ್ತದೆ. ಎರಡನೇ ಭಾಷೆಯಾಗಿ ಮಕ್ಕಳು ಅವರಿಗಿಷ್ಟವಾದ ಭಾಷೆಯನ್ನು ಕಲಿಯಲು ಅವಕಾಶ ನೀಡಲಾಗಿದೆ ಎಂದು ಹೇಳಿದರು. 

ತ್ರಿಭಾಷೆ ಸೂತ್ರ ಅಳವಡಿಕೆಯಾದ ಬಳಿಕ ಉತ್ತರ ಭಾರತದಲ್ಲಿಯೂ ದಕ್ಷಿಣ ಭಾರತದ ಯಾವುದಾದರೂ ಭಾಷೆಯನ್ನು ಅಳವಡಿಸಿಕೊಳ್ಳಬೇಕಿತ್ತು. ಆದರೆ,  ಆ ರೀತಿ ಆಗಲಿಲ್ಲ. ದಕ್ಷಿಣ ಭಾರತದಲ್ಲಿ ಭಾರತ ತ್ರಿಭಾಷೆ ಅಳವಡಿಕೆ ಮಾಡಿಕೊಳ್ಳಲಾಯಿತು. ಆದರೆ, ಈಗ ಇದರ ಅಗತ್ಯ ಇಲ್ಲ. ಹಿಂದಿ ಭಾಷೆ ಜಾರಿಗಿಂತ ಹೇರಿಕೆಯಾಗಿದೆ. ತ್ರಿಭಾಷೆ ಸೂತ್ರವನ್ನು ದೇಶದಲ್ಲಿ ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಾವು ತ್ರಿಭಾಷೆ ನೀತಿಯಿಂದ ದ್ವಿಭಾಷಾ ನೀತಿಗೆ ಮರಳಬೇಕಾಗಿದೆ ಎಂದು ತಿಳಿಸಿದರು. 

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಕನ್ನಡ ಭಾಷಾಭಿವೃದ್ಧಿ ಮತ್ತು ಕನ್ನಡಿಗರಿಗೆ ಉದ್ಯೋಗದ ಅವಕಾಶ ಹೆಚ್ಚಿಸಲು ಕರ್ನಾಟಕಕ್ಕೆ ದ್ವಿಭಾಷಾ ಸೂತ್ರದ ಅಗತ್ಯ ಇದೆ. ಹೊರಗಿನ ಪ್ರಪಂಚದೊಂದಿಗೆ ವ್ಯವಹರಿಸಲು ಇಂಗ್ಲೀಷ್‌ ಬೇಕು. ಅದು ದೇಶ ಮತ್ತು ವಿದೇಶದಲ್ಲಿ ವ್ಯವಹರಿಸಲು ಉಪಯುಕ್ತವಾಗಲಿದೆ. ಇತ್ತೀಚೆಗಿನ ವರ್ಷದಲ್ಲಿ ಹಿಂದಿ ಹೇರಿಕೆ ಹೆಚ್ಚಾಗುತ್ತಿದೆ. ನಮ್ಮ ಭಾಷೆ ನಶಿಸಿಹೋಗದ ರೀತಿಯಲ್ಲಿ ಎಚ್ಚರಿಕೆಯನ್ನು ಸಹ ನಾವು ಮಾಡಬೇಕಾಗಿದೆ. ತ್ರಿಭಾಷಾ ಸೂತ್ರದ ಮೂಲಕ ಹಿಂದಿಯೇತರ ಭಾಷಿಕರ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನಗಳು ಮುಂದುವರಿದಿವೆ. ಆದರೆ, ಕನ್ನಡ ಭಾಷೆಯ ಅಭಿವೃದ್ಧಿ ಮತ್ತು ಕನ್ನಡಿಗರಿಗೆ ಉದ್ಯೋಗದ ಅವಕಾಶ ಹೆಚ್ಚಿಸಲು ದ್ವಿಭಾಷಾ ಸೂತ್ರವೇ ಅನುಕೂಲ. ದ್ವಿಭಾಷಾ ಸೂತ್ರದಿಂದ ರಾಷ್ಟ್ರೀಯ ಏಕತೆ ಮತ್ತು ಬಹುಭಾಷಿಕರ ಗುರುತುಗಳ ಸಮತೋಲನವೂ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. 

Tags:    

Similar News