ಕಡಿಮೆ ಬಡ್ಡಿ ಆಮಿಷ: ಅನಘ ಗೋಲ್ಡ್ ಹೆಸರಿನಲ್ಲಿ ನೂರಾರು ಜನರಿಗೆ ವಂಚನೆ - ಮೂವರ ಬಂಧನ

ಅನಘ ಗೋಲ್ಡ್ ಕಂಪನಿಯ ಮಾಲೀಕ ಪ್ರವೀಣ್, ಆತನ ಪತ್ನಿ ಲಕ್ಷ್ಮೀ, ಸಿಬ್ಬಂದಿ ಮಂಜುಳಾ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ವಂಚನೆ ಮಾಡಿರುವುದು ದೃಢವಾಗಿದೆ.;

Update: 2025-07-09 05:18 GMT

ಮಂಡ್ಯದಲ್ಲಿ 'ಅನಘಾ ಗೋಲ್ಡ್' ವಂಚನೆ ಗ್ಯಾಂಗ್ ಬಂಧನ ಮಾಡಲಾಗಿದೆ.  

ಮಂಡ್ಯ ಜಿಲ್ಲೆಯಲ್ಲಿ ಚಿನ್ನದ ಸಾಲ ನೀಡುವ ನೆಪದಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಗ್ಯಾಂಗ್‌  ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

'ಅನಘಾ ಗೋಲ್ಡ್' ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ಯಾಂಗ್‌ ನೂರಾರು ಅಮಾಯಕ ಜನರನ್ನು  ಗುರಿಯಾಗಿಸಿಕೊಂಡು ದೊಡ್ಡ ಮೊತ್ತದ ಹಣವನ್ನು ವಂಚಿಸಿತ್ತು ಎಂದು ಆರೋಪಿಸಲಾಗಿದೆ.

ಟೆಲಿಕಾಲರ್ ಮೂಲಕ ಸಂಪರ್ಕ

ಸರ್ಕಾರ ದೃಢೀಕರಣಗೊಳಿಸಿರುವ ಬ್ಯಾಂಕ್‌ಗಳಲ್ಲಿ ಚಿನ್ನಾಭರಣಗಳನ್ನು ಅಡಿವಿಟ್ಟ ಜನರನ್ನು ಈ ಗ್ಯಾಂಗ್ ಗುರಿಯಾಗಿಸಿಟ್ಟುಕೊಂಡು,  ಟೆಲಿಕಾಲರ್ ಮೂಲಕ ಸಂಪರ್ಕ ಮಾಡಿ, "ನೀವು ಅಡವಿಟ್ಟಿರುವ ಚಿನ್ನಾಭರಣಗಳನ್ನು ಬಿಡಿಸಿ ನಾವು ನಿಮಗೆ 40 ರಿಂದ 50 ಪೈಸೆ ಬಡ್ಡಿಗೆ ಹಣ ಕೊಡುತ್ತೇವೆ," ಎಂದು ನಂಬಿಸುತ್ತಾರೆ. ಇಂತಹ  ಮಾತುಗಳನ್ನು ನಂಬಿದ ಅಮಾಯಕ ಜನರು ಕಡಿಮೆ ಬಡ್ಡಿ ಆಸೆಗೆ ತಮ್ಮ ಒಡೆವೆಗಳನ್ನು ಬ್ಯಾಂಕ್‌ಗಳಲ್ಲಿ ಬಿಡಿಸಿ ಈ ಅನಘ ಗೋಲ್ಡ್‌ನಲ್ಲಿ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಾದ ಹಲವು ತಿಂಗಳ ಬಳಿಕ ನಿಮ್ಮ ಸಾಲ ತೀರಿಸುತ್ತೇವೆ ನಮ್ಮ ಒಡವೆಗಳನ್ನು ವಾಪಸ್ಸು ಕೊಡಿ ಎಂದು ಜನರು ಕೇಳಿದಾಗ ಇಂದು, ನಾಳೆ, ನಾಡಿದ್ದು ಎಂದು ನೆಪ ಹೇಳಿ ಹಲವು ತಿಂಗಳು ಈ ಅನಘ ಗೋಲ್ಡ್ ಕಂಪನಿ ಆಟವಾಡಿಸಿದೆ. ನಂತರ ಇವರು ವಂಚನೆ ಮಾಡುತ್ತಿದ್ದರೆನ್ನಲಾಗಿದೆ. ಈ ಸಂಬಂಧ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆ ವಂಚನೆ ಸಂಬಂಧ ದೂರು ನೀಡಲಾಗಿದೆ.

ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ವಿಚಾರಣೆ ಮಾಡಿದಾಗ  ವಂಚಕರು ಜಿಲ್ಲೆಯಾದ್ಯಂತ 70ಕ್ಕೂ ಹೆಚ್ಚು ಜನರಿಗೆ ವಂಚಿಸಿರುವುದು ತಿಳಿದುಬಂದಿದೆ. ಬಳಿಕ ಅನಘ ಗೋಲ್ಡ್ ಕಂಪನಿಯ ಮಾಲೀಕ ಪ್ರವೀಣ್, ಆತನ ಪತ್ನಿ ಲಕ್ಷ್ಮೀ, ಸಿಬ್ಬಂದಿ ಮಂಜುಳಾ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ವಂಚನೆ ಮಾಡಿರುವುದು ದೃಢವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಈ ಅನಘ ಗೋಲ್ಡ್ ಕಂಪನಿಯಿಂದ‌ ಮಂಡ್ಯ ಜಿಲ್ಲೆಯಲ್ಲಿ 70 ಕ್ಕೂ‌ಅಧಿಕ ಜನರು ವಂಚನೆಗೆ ಒಳಗಾಗಿದ್ದು, ಇವರಿಂದ ಮೂರು ಕೋಟಿ ರೂ ಮೌಲ್ಯದ 3 ಕೆಜಿ ಚಿನ್ನಾಭರಣಗಳನ್ನು ವಂಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಈ ಮೂವರನ್ನು‌ ಬಂಧಿಸಲಾಗಿದ್ದು, ಬಂಧಿತ ಆರೋಪಿಗಳಿಂದ 500 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ. 

Tags:    

Similar News