ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪಗೆ ಜೀವ ಬೆದರಿಕೆ: ರಕ್ಷಣೆಗಾಗಿ ಪಿಸ್ತೂಲ್!

ರಾಯಚೂರಿನಲ್ಲಿ ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಿ, ಸು-ಮೋಟೋ ಪ್ರಕರಣಗಳನ್ನು ದಾಖಲಿಸಿದ ನಂತರ ತಮಗೆ ಬೆದರಿಕೆಗಳು ಬರುತ್ತಿವೆ ಎಂದು ಅವರು ಬಹಿರಂಗಪಡಿಸಿದ್ದಾರೆ.;

Update: 2025-09-01 06:27 GMT
ಉಪ ಲೋಕಾಯುಕ್ತ ಬಿ. ವೀರಪ್ಪ

"ರಾಜ್ಯದಲ್ಲಿ ಅನ್ಯಾಯ ಸರಿಪಡಿಸುವ ಕೆಲಸ ಮಾಡುತ್ತಿರುವುದರಿಂದ ನನಗೆ ಜೀವ ಬೆದರಿಕೆ ಇದೆ, ಆದ್ದರಿಂದ ನನ್ನ ರಕ್ಷಣೆಗಾಗಿ ಪಿಸ್ತೂಲ್ ಇಟ್ಟುಕೊಂಡಿದ್ದೇನೆ" ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಹೇಳಿಕೆ ನೀಡಿದ್ದಾರೆ.

ರಾಯಚೂರಿನಲ್ಲಿ ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಿ, ಸು-ಮೋಟೋ ಪ್ರಕರಣಗಳನ್ನು ದಾಖಲಿಸಿದ ನಂತರ ತಮಗೆ ಬೆದರಿಕೆಗಳು ಬರುತ್ತಿವೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, "ನನಗೆ ಜೀವ ಬೆದರಿಕೆ ಇರುವುದರಿಂದ ಪಿಸ್ತೂಲ್ ತೆಗೆದುಕೊಂಡಿದ್ದೇನೆ ಮತ್ತು ಅದಕ್ಕೆ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದೇನೆ" ಎಂದು ಸ್ಪಷ್ಟಪಡಿಸಿದರು.

ತಮ್ಮ ಕಾರ್ಯದ ಬಗ್ಗೆ ವಿವರಿಸಿದ ಅವರು, "ನನಗೆ ಈಗ 65 ವರ್ಷ. ಭಗವಂತ ನನಗೆ ಒಂದು ಅವಕಾಶ ಕೊಟ್ಟಿದ್ದಾನೆ. ನಾನು ರಾಜ್ಯದಾದ್ಯಂತ ಸಂಚರಿಸಿ ಅನ್ಯಾಯವನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇನೆ. ದೇಶದ ಗಡಿಯಲ್ಲಿ ಸೈನಿಕರು ಪ್ರಾಣ ತೆರುತ್ತಾರೆ, ಅವರಂತೆ ನಾವು ಸತ್ತರೆ ಏನಾಗುತ್ತದೆ? ಹಾಗಾಗಿ ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ನಿರ್ಭೀತಿಯಿಂದ ನುಡಿದರು.

ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮಾಧ್ಯಮಗಳಿಗೂ ಬೆದರಿಕೆಗಳು ಬರುತ್ತವೆ ಎಂದು ಉಲ್ಲೇಖಿಸಿದ ನ್ಯಾ. ವೀರಪ್ಪ, "ಈ ಬೆದರಿಕೆ ನನಗೆ ಮಾತ್ರವಲ್ಲ, ಪ್ರಾಮಾಣಿಕವಾಗಿ ಬರೆಯುವ ಮಾಧ್ಯಮದವರಿಗೂ ಬರುತ್ತದೆ. ಆದರೆ, ನೀವು (ಮಾಧ್ಯಮದವರು) ನನ್ನ ಜೊತೆಗಿದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ" ಎಂದು ಮಾಧ್ಯಮಗಳ ಬೆಂಬಲವನ್ನು ಕೋರಿದರು.

Tags:    

Similar News