'ಟ್ವೀಟ್ ಮಾಡುವವರು ಚುನಾವಣೆಗೆ ನಿಲ್ಲಲಿ': ರಸ್ತೆ ಗುಂಡಿ ಟೀಕಿಸಿದವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸವಾಲು

ಯಾರೋ ನಾಲ್ಕು ಜನ ಟ್ವೀಟ್ ಮಾಡುತ್ತಾರೆ, ಇನ್ನು ಕೆಲವರು ರಾಜಕೀಯವಾಗಿ ಹೆಸರು ಮಾಡಲು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಾರೆ. ಇದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Update: 2025-09-18 14:45 GMT

ಡಿಸಿಎಂ ಡಿ.ಕೆ. ಶಿವಕುಮಾರ್‌

Click the Play button to listen to article

ನಗರದ ರಸ್ತೆ ಗುಂಡಿಗಳ ಸಮಸ್ಯೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ತೀವ್ರ ಆಕ್ರೋಶಕ್ಕೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, "ಟ್ವೀಟ್ ಮಾಡಿ ಅಸಮಾಧಾನ ಹೊರಹಾಕುವ ಬದಲು, ಅವರು ಚುನಾವಣೆಗೆ ನಿಂತು ರಾಜಕೀಯಕ್ಕೆ ಬರಲಿ, ಆಗ ವಾಸ್ತವ ಸ್ಥಿತಿ ಗೊತ್ತಾಗುತ್ತದೆ" ಎಂದು ಸವಾಲು ಹಾಕಿದ್ದಾರೆ.

ಉದ್ಯಮಿಗಳು ಮತ್ತು ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಟೀಕೆಗಳ ಬಗ್ಗೆ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೇವಲ ಟೀಕೆಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಖಾರವಾಗಿ ನುಡಿದರು.

"ಬೆಂಗಳೂರು ಗುಂಡಿಗಳು ಮಾತ್ರ ಯಾಕೆ ಚರ್ಚೆ?"

"ಯಾರೋ ನಾಲ್ಕು ಜನ ಟ್ವೀಟ್ ಮಾಡುತ್ತಾರೆ, ಇನ್ನು ಕೆಲವರು ರಾಜಕೀಯವಾಗಿ ಹೆಸರು ಮಾಡಲು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಾರೆ. ಇದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮಹಾರಾಷ್ಟ್ರ, ದೆಹಲಿಯಲ್ಲಿರುವ ರಸ್ತೆ ಗುಂಡಿಗಳನ್ನು ನಾನು ತೋರಿಸುತ್ತೇನೆ, ಬನ್ನಿ. ಬೇರೆ ನಗರಗಳ ಗುಂಡಿಗಳ ಬಗ್ಗೆ ಚರ್ಚೆಯಾಗುವುದಿಲ್ಲ, ಆದರೆ ಬೆಂಗಳೂರಿನ ವಿಚಾರದಲ್ಲಿ ಮಾತ್ರ ಯಾಕೆ ಇಷ್ಟೊಂದು ಚರ್ಚೆಯಾಗುತ್ತಿದೆ?" ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

"ಗುಂಡಿ ಮುಚ್ಚಲು ಗಡುವು ನೀಡಿದ್ದೇನೆ"

ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಕುರಿತು ಮಾತನಾಡಿದ ಅವರು, "ನಾನು ಈಗಾಗಲೇ ಅಧಿಕಾರಿಗಳಿಗೆ ಗುಂಡಿ ಮುಚ್ಚಲು ಗಡುವು ನೀಡಿದ್ದೇನೆ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸಿದ್ದೇನೆ. ಆದರೆ, ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ವಿಧಾನಸೌಧದ ಸುತ್ತಮುತ್ತಲೇ ಹತ್ತಾರು ಹೊಸ ಗುಂಡಿಗಳು ಬಿದ್ದಿವೆ. ಇದು ಪ್ರಕೃತಿ ವಿಕೋಪ. ಅದಕ್ಕೆ ತಕ್ಕಂತೆ ನಾವು ಕೆಲಸ ಮಾಡುತ್ತೇವೆ," ಎಂದು ಸಮರ್ಥಿಸಿಕೊಂಡರು.

"ಕೇವಲ ರಾಜಕೀಯ ಲಾಭಕ್ಕಾಗಿ ಟೀಕೆ ಮಾಡುವುದನ್ನು ಬಿಟ್ಟು, ರಚನಾತ್ಮಕವಾಗಿ ಸಲಹೆಗಳನ್ನು ನೀಡಿದರೆ ಅದನ್ನು ಸ್ವೀಕರಿಸಲು ನಾವು ಸಿದ್ಧ. ಆದರೆ, ಸುಮ್ಮನೆ ಆರೋಪ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ," ಎಂದು ಅವರು ಟೀಕಾಕಾರರಿಗೆ ತಿರುಗೇಟು ನೀಡಿದರು.

Tags:    

Similar News