ಥಿನ್ ವೈಟ್ ಟಾಪಿಂಗ್ ವಿನ್ಯಾಸ | ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪ್ರತಿಷ್ಠಿತ ICI-ಅಲ್ಟ್ರಾಟೆಕ್ ಪ್ರಶಸ್ತಿ
ಬೆಂಗಳೂರು ನಗರದ ಕೋರಮಂಗಲ 1ನೇ ಕ್ರಾಸ್ ಎಂಪೈರ್ ರಸ್ತೆ ಮತ್ತು 7ನೇ ಕ್ರಾಸ್ ರಸ್ತೆಗಳಲ್ಲಿ ಅನುಷ್ಠಾನಗೊಳಿಸಿರುವ ಥಿನ್ ವೈಟ್ ಟಾಪಿಂಗ್ (TWT) ಕಾಮಗಾರಿ ವಿನ್ಯಾಸ ಮತ್ತು ಅನುಷ್ಠಾನಕ್ಕೆ ಈ ಗೌರವ ಸಂದಿದೆ.
ಜಿಬಿಎ ಎಂಜಿನಿಯರ್ ಗಳ ತಂಡವು ಥಿನ್ ವೈಟ್ ಟಾಪಿಂಗ್ ವಿನ್ಯಾಸಕ್ಕೆ ಪ್ರಶಸ್ತಿ ಪಡೆದಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರವು "ಭಾರತೀಯ ಕಾಂಕ್ರೀಟ್ ಸಂಸ್ಥೆ(ICI) - ಅಲ್ಟ್ರಾಟೆಕ್ ಪ್ರಶಸ್ತಿ" ಗೆ ಭಾಜನವಾಗಿದೆ.
ಬೆಂಗಳೂರು ನಗರದ ಕೋರಮಂಗಲ 1ನೇ ಕ್ರಾಸ್ ಎಂಪೈರ್ ರಸ್ತೆ ಮತ್ತು 7ನೇ ಕ್ರಾಸ್ ರಸ್ತೆಗಳಲ್ಲಿ ಅನುಷ್ಠಾನಗೊಳಿಸಿರುವ ಥಿನ್ ವೈಟ್ ಟಾಪಿಂಗ್ (TWT) ಕಾಮಗಾರಿ ವಿನ್ಯಾಸ ಮತ್ತು ಅನುಷ್ಠಾನಕ್ಕೆ ಈ ಗೌರವ ಸಂದಿದೆ.
ಕೋರಮಂಗಲ ಪ್ರದೇಶದ ಒಳ ವರ್ತುಲ ರಸ್ತೆ (IRR)ಯ 1ನೇ ಕ್ರಾಸ್ ಎಂಪೈರ್ ರಸ್ತೆಯಿಂದ ಗಣಪತಿ ದೇವಸ್ಥಾನದ ವರೆಗೆ 1.1 ಕಿ.ಮೀ ಹಾಗೂ ಕೋರಮಂಗಲ 7ನೇ ಕ್ರಾಸ್ ಬಿಡಿಎ ಕಾಂಪ್ಲೆಕ್ಸ್ ನಿಂದ ವಿಪ್ರೋ ಪಾರ್ಕ್ ಸಿಗ್ನಲ್ ವರೆಗೆ 1.17 ಕಿ.ಮೀ ಉದ್ದದ ರಸ್ತೆಗೆ ಹೊಸ ವಿನ್ಯಾಸದಲ್ಲಿ 125 ಮಿ.ಮೀ ದಪ್ಪದ ವೈಟ್ ಟಾಪಿಂಗ್ ಅನ್ನು 2023 ರಲ್ಲಿ ಅನುಷ್ಠಾನಗೊಳಿಸಲಾಗಿತ್ತು.
ಟಿಡಬ್ಲ್ಯುಟಿ ವಿಶೇಷತೆ ಏನು?
ಸಾಮಾನ್ಯವಾಗಿ ಬೆಂಗಳೂರು ನಗರದಲ್ಲಿ ವೈಟ್ ಟಾಪಿಂಗ್ ರಸ್ತೆಗಳಿಗೆ 180 ಎಂ.ಎಂ ದಪ್ಪವಿರುವ ವಿನ್ಯಾಸದಲ್ಲಿ ಕಾಂಕ್ರೀಟ್ ಬಳಸಲಾಗುತ್ತಿತ್ತು. ಇದೀಗ ಹೊಸ ಯೋಜನೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎಂಜಿನಿಯರ್ ಗಳ ತಂಡವು 125 ಮಿ.ಮೀ ದಪ್ಪದ ಹೊಸ ವಿನ್ಯಾಸವನ್ನು ಯಶಸ್ವಿಯಾಗಿ ರೂಪಿಸಿ ಜಾರಿಗೊಳಿಸಿದೆ.
ಈ ವಿನ್ಯಾಸವು ತಾಂತ್ರಿಕತೆಯಿಂದ ಕೂಡಿದೆಯಲ್ಲದೇ, ನಗರದ ಸರ್ವತೋಮುಖ ಬೆಳವಣಿಗೆಯಲ್ಲಿ ಹಲವು ಸವಾಲುಗಳಿಗೆ ಸಮರ್ಥವಾದ ಉತ್ತರವಾಗಿದೆ. ರಸ್ತೆಗಳ ಎತ್ತರ, ಮಳಿಗೆಗಳು, ನಿವಾಸಗಳ ಪ್ರವೇಶ ಮತ್ತು ಮಳೆಯ ನೀರಿನ ಹರಿವಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇದು ಪರಿಹಾರವಾಗಲಿದೆ. ಜೊತೆಗೆ ಈ ಯೋಜನೆ ಅನುಷ್ಠಾನದಿಂದ ಹಣದ ಉಳಿತಾಯವೂ ಆಗಲಿದೆ.
ಭಾರತೀಯ ಕಾಂಕ್ರೀಟ್ ಸಂಸ್ಥೆ(ICI) ನೀಡಿದ ಅಲ್ಟ್ರಾಟೆಕ್ ಪ್ರಶಸ್ತಿಯಿಂದ ನಗದಲ್ಲಿರುವ ಸವಾಲುಗಳನ್ನು ನವೀನ ರೀತಿ ಪರಿಹರಿಸುವಲ್ಲಿ ಜಿ.ಬಿ.ಎ ಯು ಯಶಸ್ವಿಯಾಗುವ ನಿರೀಕ್ಷೆ ಇದೆ.
ಈ ಪ್ರಶಸ್ತಿಯು ಬೆಂಗಳೂರಿನ ನಾಗರಿಕರಿಗೆ ಬಲಿಷ್ಠ, ಕಡಿಮೆ ಖರ್ಚಿನ, ನಾಗರೀಕ ಸ್ನೇಹಿ ರಸ್ತೆ ಹಾಗೂ ಉತ್ತಮ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಜಿಬಿಎ ಸದಾ ಬದ್ಧವಾಗಿದೆ.
ತಂತ್ರಜ್ಞಾನದ ನವೀನತೆಗೆ ಶ್ಲಾಘನೆ
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು, ಟಿಡಬ್ಲ್ಯುಟಿ ಯೋಜನೆ ಅನುಷ್ಠಾನಗೊಳಿಸಿದ ಎಂಜಿನಿಯರ್ ಗಳನ್ನು ಅಭಿನಂದಿಸಿ, ಅವರ ದೃಷ್ಟಿಕೋನ ಹಾಗೂ ತಂತ್ರಜ್ಞಾನದ ನವೀನತೆಯನ್ನು ಶ್ಲಾಘಿಸಿದರು.
ಎಂಜಿನಿಯರ್ ಗಳ ತಂಡದಲ್ಲಿ ಜಿಬಿಎ ಮುಖ್ಯ ಎಂಜಿನಿಯರ್ ಎಂ. ಲೋಕೇಶ್ ಅವರು ಥಿನ್ ವೈಟ್ ಟಾಪಿಂಗ್ ವಿನ್ಯಾಸದ ಮುಖ್ಯ ಶಿಲ್ಪಿಗಳಾಗಿದ್ದಾರೆ. ಅದೇ ರೀತಿ ಸೂಪರಿಂಟೆಂಡೆಂಟ್ ಎಂಜಿನಿಯರ್ ಹೇಮಲತಾ ಕೆ., ಕಾರ್ಯಪಾಲಕ ಎಂಜಿನಿಯರ್ (ಎಇ) ಸತ್ಯನಾರಾಯಣ ರಾಜು ಎ., ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೀಣಾ ಸಿ ಇದ್ದಾರೆ.