Bangalore Rain| ಬೆಂಗಳೂರಿನಲ್ಲಿ ಸಂಜೆ ಮಳೆ ಆರ್ಭಟ: ಟ್ರಾಫಿಕ್ ಜಾಮ್, ಪರದಾಡಿದ ಜನ
ರೇಸ್ ಕೋರ್ಸ್, ಆನಂದ್ ರಾವ್ ಸರ್ಕಲ್, ಮೈತ್ರಿ ಸರ್ಕಲ್, ವಿಧಾನಸೌಧ, ಶಿವಾನಂದ ಸರ್ಕಲ್, ಕೆಆರ್ ಸರ್ಕಲ್ ಸುತ್ತಮುತ್ತ ಸುರಿಯುತ್ತಿರುವ ಭಾರೀ ಮಳೆಗೆ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.;
ಬೆಂಗಳೂರಿನಲ್ಲಿ ಮಂಗಳವಾರವೂ ಭಾರೀ ಮಳೆಯಾಗಿದೆ.
ಮಂಗಳವಾರ ಸಂಜೆಯಾಗುತ್ತಿದ್ದಂತೆ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದ್ದು, ಕಚೇರಿಗಳಿಂದ ಮನೆಗೆ ತೆರಳುತ್ತಿದ್ದ ಉದ್ಯೋಗಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸಿದರು.
ನಗರದ ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ರೇಸ್ ಕೋರ್ಸ್, ಆನಂದ್ ರಾವ್ ಸರ್ಕಲ್, ಮೈತ್ರಿ ಸರ್ಕಲ್, ವಿಧಾನಸೌಧ, ಶಿವಾನಂದ ಸರ್ಕಲ್ ಮತ್ತು ಕೆ.ಆರ್. ಸರ್ಕಲ್ ಸುತ್ತಮುತ್ತ ಭಾರಿ ಮಳೆ ಸುರಿದ ಕಾರಣ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ಭಾರೀ ಮಳೆಯ ಪರಿಣಾಮವಾಗಿ ಮಾನ್ಯತಾ ಟೆಕ್ ಪಾರ್ಕ್ ಬಳಿ ಬಿಎಂಟಿಸಿ ಬಸ್‌ನೊಳಗೆ ಮಳೆ ನೀರು ನುಗ್ಗಿದ ಘಟನೆ ಸಂಭವಿಸಿದೆ. ರಸ್ತೆ ಜಲಾವೃತಗೊಂಡಿದ್ದರಿಂದ ನೀರು ಬಸ್‌ನ ಒಳಭಾಗಕ್ಕೆ ಹರಿದು ಬಂದಿತು.
ಜೋರು ಗಾಳಿ ಮತ್ತು ಮಳೆಯಿಂದಾಗಿ ವಿಂಡ್ಸನ್ ಮ್ಯಾನರ್ ಅಂಡರ್‌ಪಾಸ್‌ನಿಂದ ಅರಮನೆ ಮೈದಾನದ ಕಡೆಗೆ ಹೋಗುವ ಮಾರ್ಗದಲ್ಲಿ ಕಾವೇರಿ ಜಂಕ್ಷನ್ ಬಳಿ ಮರದ ಕೊಂಬೆಯೊಂದು ಮುರಿದು ಬಿದ್ದಿದೆ. ಮಲ್ಲೇಶ್ವರದ ಪಿ.ಯು.ಸಿ. ಬೋರ್ಡ್ ಕಟ್ಟಡದ ಬಳಿಯೂ ಮರವೊಂದು ಬಿದ್ದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಮಳೆಯಿಂದಾಗಿ ಮಾರತ್ತಹಳ್ಳಿ ಸೇತುವೆಯಿಂದ ಕಾರ್ತಿಕನಗರದ ಕಡೆಗೆ ಹೋಗುವ ರಸ್ತೆಯಲ್ಲಿ ವಾಹನ ಸಂಚಾರವು ನಿಧಾನಗತಿಯಲ್ಲಿತ್ತು. ಯಲಹಂಕದಿಂದ ಕೊಡಿಗೇಹಳ್ಳಿ ಮಾರ್ಗವಾಗಿಯೂ ವಾಹನ ಸಂಚಾರವು ಮಂದಗತಿಯಲ್ಲಿ ಸಾಗಿತ್ತು ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.