Milk Price Hike | ರೈತರ ಹೆಸರಿನಲ್ಲಿ ಗ್ರಾಹಕರಿಂದ ಲೂಟಿ; ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ

ರಾಜ್ಯ ಸರ್ಕಾರ ದಿವಾಳಿಯಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಒಂದೇ ವರ್ಷದಲ್ಲಿ ಮೂರು ಬಾರಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ಗ್ರಾಹಕರಿಂದ ಹಣ ಲೂಟಿ ಮಾಡುತ್ತಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.;

Update: 2025-03-28 04:30 GMT

ರಾಜ್ಯ ಸರ್ಕಾರ ರೈತರ ಹೆಸರಿನಲ್ಲಿ ವರ್ಷದಲ್ಲಿ ಮೂರು ಬಾರಿ ಹಾಲಿನ ದರ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಬರೆ ಎಳೆದಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಒಂದೇ ವರ್ಷದಲ್ಲಿ ಮೂರು ಬಾರಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ಒಂದು ವರ್ಷದಲ್ಲಿ ಎರಡು ಬಾರಿ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಈಗ ಕೆಇಆರ್‌ಸಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಇನ್ನೊಂದು ಡಿಜಿಟಲ್ ಮೀಟರ್ ಅಳವಡಿಕೆಯ ಹಗರಣ ಮಾಡಿದ್ದಾರೆ. ಪ್ರತಿ ಮೀಟರ್ ನಿರ್ವಹಣೆಗೆ 5 ಸಾವಿರಕ್ಕಿಂತಲೂ ಹೆಚ್ಚಳ ಹೊರೆ ಹಾಕಿದ್ದಾರೆ. ಇದರಿಂದ ಪ್ರತಿಯೊಂದು ಕುಟುಂಬದ ನಿರ್ವಹಣಾ ವೆಚ್ಚ ಹೆಚ್ಚಾಗಿದೆ ಎಂದು ದೂರಿದ್ದಾರೆ.

ಕಳೆದ ವರ್ಷ ಬಜೆಟ್ ಹೊರತಾಗಿಯೂ ಸುಮಾರು 40 ಸಾವಿರ ಕೋಟಿ ರೂ. ಹೆಚ್ಚಿಗೆ ತೆರಿಗೆ ಹಾಕಿದ್ದರು. ತಮ್ಮ ಸರ್ಕಾರದ ಆರ್ಥಿಕ ದಿವಾಳಿತನ ಮರೆಮಾಚಲು ರಾಜ್ಯದ ಜನತೆಯ ಮೇಲೆ ಹೊರೆ ಹಾಕುತ್ತಿದ್ದಾರೆ. ರಾಜ್ಯದ ಜನರು ಬೆಲೆ ಏರಿಕೆಯನ್ನು ನಿಲ್ಲಿಸಿ ಎಂದು ಹೇಳಬೇಕಿದೆ. ಹಾಲಿನ ದರ ಹೆಚ್ಚಳ ಮಾಡಿರುವುದನ್ನು ರೈತರಿಗೆ ನೀಡಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಎಂದಿಗೂ ಹೆಚ್ಚಳ ಮಾಡಿರುವ ಹಾಲಿನ ಮೊತ್ತವನ್ನು ರೈತರಿಗೆ ನೀಡಿಲ್ಲ. ರೈತರ ಹೆಸರಿನಲ್ಲಿ ಗ್ರಾಹಕರಿಂದ ಲೂಟಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರ ಕೆಎಂಎಫ್‌ನಲ್ಲಿ ಆಗುತ್ತಿರುವ ಅನಗತ್ಯ ಸೋರಿಕೆಯನ್ನು ತಡೆಯುತ್ತಿಲ್ಲ. ಅಲ್ಲದೇ ಕೆಎಂಎಫ್ ಮೇಲಿಂದ ಮೇಲೆ ಹಾಲಿನ ದರ ಏರಿಕೆ ಮಾಡುತ್ತಿರುವುದರಿಂದ ಖಾಸಗಿ ಕಂಪನಿಗಳು ಪ್ರವೇಶ ಮಾಡಲು ಅವಕಾಶವಾಗುತ್ತಿದೆ. ಇದರಿಂದ ಪರೋಕ್ಷವಾಗಿ ಖಾಸಗಿಯವರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತಿದೆ. ಕಾಂಗ್ರೆಸ್‌ನಿಂದ ಡಬಲ್ ದೋಖಾ ಆಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಾಲು, ವಿದ್ಯುತ್ ದರದ ಜೊತೆಗೆ ಮೆಟ್ರೊ, ಬಸ್‌ದರ ಎಲ್ಲವೂ ಹೆಚ್ಚಳ ಮಾಡಿದ್ದಾರೆ. ಪ್ರತಿ ದಿನ ಜನರ ಮೇಲೆ ತೆರಿಗೆ ಮೇಲೆ ತೆರಿಗೆ ಹೆಚ್ಚಳ ಮಾಡುತ್ತಿರುವ ಸುದ್ದಿ ಕೇಳುತ್ತಿದ್ದೇವೆ. ಗ್ರಾಮೀಣ ಜನರಿಗೆ ಈ ಸರ್ಕಾರ ಒಂದು ಶಾಪವಾಗಿ ಪರಿಣಮಿಸಿದೆ. ಪ್ರತಿ ದಿನ ಬಡವರು ಬೆಳಿಗ್ಗೆ ಎದ್ದ ತಕ್ಷಣ ಯಾವ ತೆರಿಗೆ ಹೆಚ್ಚಳವಾಗಿದೆ ಎಂದು ನೋಡುವ ಪರಿಸ್ಥಿತಿ ಬಂದಿದೆ ಎಂದು ಕಿಡಿಕಾರಿದ್ದಾರೆ.

ರಾಷ್ಟ್ರೀಯ ಹಣದುಬ್ಬರಕ್ಕಿಂತ ಕರ್ನಾಟಕದ ಹಣದುಬ್ಬರ ಹೆಚ್ಚಳವಿದೆ. ಇದೆಲ್ಲಾ ಗ್ಯಾರೆಂಟಿ ಕಾರಣದಿಂದ ಆಗುತ್ತಿದೆ. 1.5 ಲಕ್ಷ ಕೋಟಿ ರೂ. ಗ್ಯಾರಂಟಿ ಗೆ ನೀಡುತ್ತಿದ್ದಾರೆ. ಇದರಿಂದ ಸರ್ಕಾರವೂ ಮುಳುಗುತ್ತಿದ್ದು, ಜನರನ್ನೂ ಮುಳುಗಿಸುತ್ತಿದೆ. ಮೂರು ಬಜೆಟ್‌ನಲ್ಲಿ ಸಿದ್ದರಾಮಯ್ಯ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅವರು ಅಸಮರ್ಥ ಮುಖ್ಯಮಂತ್ರಿಯಾಗಿದ್ದು, ಈ ಸರ್ಕಾರ ಅತ್ಯಂತ ಭ್ರಷ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Similar News