ಕಾಲ್ತುಳಿತ; ಸರ್ಕಾರದ ನಿರ್ಲಕ್ಷ್ಯದಿಂದಲೇ ದುರಂತ; ಅಶೋಕ್ ಗಂಭೀರ ಆರೋಪ
ಆರ್‌ಸಿಬಿ ವಿಜಯೋತ್ಸವದಲ್ಲಿ ಸರ್ಕಾರದ ಪಾತ್ರವಿದೆ. ಗ್ರ್ಯಾಂಡ್ ಸ್ಟೆಪ್ಸ್‌ನಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಡಿಸಿಪಿ ಹಾಗೂ ಆಯುಕ್ತರಿಗೆ ಬರೆದಿರುವ ಪತ್ರವನ್ನು ಅಶೋಕ್ ಪ್ರದರ್ಶಿಸಿದರು.;
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಂಭವಿಸಿದ ಕಾಲ್ತುಳಿತ ಘಟನೆ ಆಕಸ್ಮಿಕವಲ್ಲ, ಸರ್ಕಾರದ ನಿರ್ಲಕ್ಷ್ಯದಿಂದ ನಡೆದ ದುರಂತ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.
ವಿಧಾನಸಭೆ ಕಲಾಪದಲ್ಲಿ ನಿಯಮ 69 ಅಡಿ ಚರ್ಚೆ ಆರಂಭಿಸಿದ ಅವರು, “ಇದು ಅಪಘಾತವಲ್ಲ, ಸರ್ಕಾರದ ನಿರ್ಲಕ್ಷ್ಯದ ಕಾರಣದಿಂದ 11 ಮಂದಿ ಪ್ರಾಣ ಕಳೆದುಕೊಂಡರು. ಮುಂದೆ ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಎಸ್‌ಒಪಿ ಯಾರು ತಯಾರಿಸಿದರು?, ಸಂಚಾರ ದಟ್ಟಣೆ ನಿಯಂತ್ರಣ ಯಾರ ಜವಾಬ್ದಾರಿ?, ಪ್ರವೇಶ–ನಿರ್ಗಮನ ದ್ವಾರದ ನಿರ್ವಹಣೆ ಯಾರು ನೋಡಿಕೊಂಡರು?, ತುರ್ತು ಸಂದರ್ಭಕ್ಕೆ ಅಂಬುಲೆನ್ಸ್ ಸೌಲಭ್ಯವಿತ್ತೇ? ಎಂದು ಅಶೋಕ್ ಸರಣಿ ಪ್ರಶ್ನೆಗಳನ್ನು ಸದನದ ಮುಂದಿಟ್ಟರು.
ಆರ್‌ಸಿಬಿ ಮತ್ತು ಕೆಎಸ್‌ಸಿಎ ಪರಸ್ಪರ ವಿರುದ್ಧ ಹೇಳಿಕೆ ನೀಡಿವೆ. ಸರ್ಕಾರದ ಆಹ್ವಾನದಿಂದ ಬಂದಿದ್ದೇವೆ ಎಂಬ ಆರ್‌ಸಿಬಿ ಹೇಳಿಕೆಯನ್ನು ಹೈಕೋರ್ಟ್ ಪ್ರಶ್ನಿಸಿದೆ. ಹೀಗಿರುವಾಗ ಸರ್ಕಾರದಲ್ಲಿ ನಾಯಕತ್ವದ ಕೊರತೆಯೇ ದುರಂತಕ್ಕೆ ಕಾರಣ. ಕಾರ್ಯಕ್ರಮವನ್ನು ಸಿಎಂ ಆಯೋಜಿಸಿದರಾ, ಡಿಸಿಎಂ ಆಯೋಜಿಸಿದರಾ?, ಇಬ್ಬರ ನಡುವೆ ತಕರಾರು ಇತ್ತೇ? ಎಂದು ಪ್ರಶ್ನಿಸಿದರು.
ಐಪಿಎಲ್ ಮತ್ತು ಬೆಟ್ಟಿಂಗ್ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಐಪಿಎಲ್ ಸಾಹುಕಾರರ ಆಟ, ಬಡವರು ಬೆಟ್ಟಿಂಗ್‌ನಲ್ಲಿ ನಾಶವಾಗುತ್ತಿದ್ದಾರೆ ಎಂದು ಹೇಳಿ ತಮ್ಮ ಮನೆಯ ಕಳ್ಳತನ ಘಟನೆಯನ್ನು ಉದಾಹರಣೆ ನೀಡಿದರು.
ಆರ್‌ಸಿಬಿ ವಿಜಯೋತ್ಸವದಲ್ಲಿ ಸರ್ಕಾರದ ಪಾತ್ರವಿದೆ ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್‌ನಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಪೊಲೀಸ್ ಆಯುಕ್ತರಿಂದ ಡಿಸಿಪಿವರೆಗೆ ಎಲ್ಲರಿಗೂ ಪತ್ರ ಬರೆದಿದ್ದಾರೆ. ಸಿಎಂ, ಡಿಸಿಎಂ ಬರುತ್ತಾರೆ ಎಂದು ಬರೆದಿದ್ದರೆ, ನಿಮ್ಮ ಗಮನಕ್ಕೆ ಬಂದೇ ಆಗಿರಬೇಕು ಎಂದು ಅಶೋಕ್ ಹೇಳಿದರು.
ಆರ್‌ಸಿಬಿ ತಂಡವನ್ನು 101.6ಯುಎಸ್ ಡಾಲರ್‌ಗೆ ಮಲ್ಯ ಅವರು ಖರೀದಿಸಿದ್ದರು. ನಂತರ ಅವರು ಇಲ್ಲಿಂದ ಓಡಿ ಹೋದರು. ಈಗ ಇಂಗ್ಲೆಂಡ್ ಮಧ್ಯದ ದೊರೆಯೊಬ್ಬ ತಂಡವನ್ನು ಖರೀದಿ ಮಾಡಿದ್ದಾರೆ. ಜೂನ್ 3 ರಂದು ಪಂಜಾಬ್, ಆರ್ ಸಿಬಿ ನಡುವಿನ ಫೈನಲ್ ಪಂದ್ಯದ ವೇಳೆ ಆರ್‌ಸಿಬಿ ಬರೋಬ್ಬರಿ ೧೮ ವರ್ಷಗಳ ಬಳಿಕ ಕಪ್ ಗೆದ್ದಿತು. ಅಂದು ರಾತ್ರಿ ಹೊಸ ವರ್ಷ, ದೀಪಾವಳಿ ಹಬ್ಬದಂತೆ ಸಂಭ್ರಮವಿತ್ತು. ಪರಿಸ್ಥಿತಿ ನಿಭಾಯಿಸಲು ಪೊಲೀಸರಿಗೆ ಇಡೀ ರಾತ್ರಿ ಶ್ರಮ ವಹಿಸುವಷ್ಟರಲ್ಲಿ ಚಳಿ ಜ್ವರ ಬಂದಿತ್ತು. ಇದನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೂ ನೋಡಿದ್ದರು. ಆಗಲೇ ಇದರ ಕ್ರೆಡಿಟ್ ಪಡೆಯಲು ನಿರ್ಧರಿಸಿ ಡಿಕೆ ಶಿವಕುಮಾರ್ ಅವರು ಯೋಜನೆ ರೂಪಿಸಿದ್ದರು. ಈ ವಿವಾರ ಸಿಎಂ ಅವರಿಗೂ ಗೊತ್ತಿರಲಿಲ್ಲ.
ಆರ್ ಸಿಬಿ ಗೆದ್ದರೆ ಪರೇಡ್ ಮಾಡುತ್ತೇವೆ ಎಂದು ಪೊಲೀಸ್ ಆಯುಕ್ತರು, ಡಿಸಿಪಿ, ಇನ್ಸ್ ಪೆಕ್ಟರ್, ಡಿಪಿಆರ್‌ಗೂ ಡಿ.ಕೆ. ಶಿವಕುಮಾರ್ ಅವರು ಪತ್ರ ಬರೆದಿದ್ದರು. ಶಾಸಕರು ಮುಖ್ಯಮಂತ್ರಿಗೆ ಆಹ್ವಾನ ನೀಡಿದ್ದರು. ನಿಮ್ಮ ಅನುಮತಿ ಇಲ್ಲದೆ ಹೇಗೆ ಹೆಸರು ಹಾಕುತ್ತಾರೆ, ಅನುಮತಿ ಕೊಡಿಸಿದ್ದು ಯಾರು ಎಂದು ಅಶೋಕ್ ಪ್ರಶ್ನಿಸಿದರು.