Ground Report | ಇಡೀ ದೇಶದಲ್ಲಿ ಅತುಲ್ ಸಾವಿನದ್ದೇ ಸುದ್ದಿ... ಆತ ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಇಲ್ಲ ಸದ್ದು...
ವೈವಾಹಿಕ ದೌರ್ಜನ್ಯದಿಂದ ನೊಂದು ಸಾವಿಗೆ ಶರಣಾದ ಅತುಲ್ ಸುಭಾಷ್ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ʼದ ಫೆಡರಲ್ ಕರ್ನಾಟಕʼ ಶುಕ್ರವಾರ ಭೇಟಿ ನೀಡಿತು. ಆಗ ಕಂಡು ಬಂದದ್ದು ಬರಿಯ ಮೌನವೇ ಹೊರತು ಮಾತಿಲ್ಲ. ಅತುಲ್ ಬಗ್ಗೆ ಯಾರಿಗೂ ಹೆಚ್ಚು ಗೊತ್ತಿಲ್ಲ!;
ವೈವಾಹಿಕ ದೌರ್ಜನ್ಯದಿಂದ ನೊಂದು ಹತಾಶರಾಗಿ ಸಾವಿಗೆ ಶರಣಾದ ಖಾಸಗಿ ಕಂಪನಿ ಉದ್ಯೋಗಿ ಅತುಲ್ ಸುಭಾಷ್ ಪ್ರಕರಣ ಇಡೀ ದೇಶದಲ್ಲಿ ಸದ್ದು ಮಾಡುತ್ತಿದೆ. ಆದರೆ, ಆತ ವಾಸವಿದ್ದ ಬೆಂಗಳೂರಿನ ಮುನ್ನೇನಕೊಳಲು ಸಮೀಪದ ಮಂಜುನಾಥ ಲೇಔಟ್ ವಸತಿಗೃಹದಲ್ಲಿ ಮಾತ್ರ ಮೌನವೇ ಹೊರತು ಮಾತಿಲ್ಲ.
ಆದರೆ, ಅಪಾರ್ಟ್‌ಮೆಂಟ್‌ನಲ್ಲಿ ಆವರಿಸಿರುವುದು ಅತುಲ್ ಸಾವಿನ ನೀರವತೆ ಅಲ್ಲ. ಅಪಾರ್ಟ್‌ಮೆಂಟ್ ಸಂಸ್ಕೃತಿಯ ಮೌನ ಎಂಬುದು ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಅನ್ನಿಸುತ್ತದೆ. ಮಂಜುನಾಥ ಲೇಔಟ್‌ನ ಡಾಲ್ಫಿನಿಯಂ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ಅತುಲ್ ಸುಭಾಷ್ ಡಿ.9ರಂದು ರಾತ್ರಿ ಹತಾಶೆಯಿಂದಲೇ ಬದುಕಿನ ಪಯಣ ಮುಗಿಸಿದ್ದರು.
ʼದ ಫೆಡರಲ್ ಕರ್ನಾಟಕʼ ಶುಕ್ರವಾರ ಘಟನೆ ನಡೆದ ಡಾಲ್ಫಿನಿಯಂ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದಾಗ ಎಲ್ಲವೂ ಮಾಮೂಲಿಯಂತೆ ಇತ್ತು. ಸಾವಾಗಲಿ, ನೋವಾಗಲಿ ತಲೆ ಕೆಡಿಸಿಕೊಳ್ಳದ ಅಪಾರ್ಟ್‌ಮೆಂಟ್ ಸಂಸ್ಕೃತಿ ಎದ್ದು ಕಾಣುತ್ತಿತ್ತು.
ಭದ್ರತಾ ಸಿಬ್ಬಂದಿಯನ್ನು ಅತುಲ್ ಸಾವಿನ ಕುರಿತು ಕೇಳಿದಾಗ ಆರಂಭದಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿದರು. ಆದರೆ, ಅತುಲ್ ಪರ ಕನಿಕರ ಮಾತು ಆರಂಭಿಸಿದಾಗ ಡಿ.9 ರಂದು ನಡೆದ ಘಟನಾವಳಿಯನ್ನು ಮೆಲುಕು ಹಾಕಿದರು.
ಹಾಗೆಯೇ ಅತುಲ್ ವಾಸವಿದ್ದ ಫ್ಲಾಟ್‌ನತ್ತ ಹೆಜ್ಜೆ ಸಾಗಿತು. ಮೂರನೇ ಮಹಡಿಯ ಮೂಲೆಯಲ್ಲಿದ್ದ ಅತುಲ್ ಫ್ಲಾಟ್, ಒಂಟಿತನವನ್ನು ಪ್ರೇರೇಪಿಸುವಂತಿತ್ತು. 2022ರಲ್ಲಿ ಕೌಟುಂಬಿಕ ಜಗಳದಿಂದ ಪತ್ನಿ ನಿಖಿತಾ ಸಿಂಘಾನಿಯಾ ತವರಿಗೆ ಹೋದಂದಿನಿಂದ ಇದೇ ಮನೆಯಲ್ಲಿ ಅತುಲ್ ಒಬ್ಬಂಟಿಯಾಗಿ ವಾಸವಿದ್ದರು. ಅತುಲ್ ಆತ್ಮಹತ್ಯೆ ಕುರಿತು ಪಕ್ಕದ ಫ್ಲಾಟ್‌ನ ಮನೆಯ ಬಾಗಿಲು ಬಡಿದು ವಿಷಯ ಪ್ರಸ್ತಾಪಿಸುತ್ತಲೇ ʼಮುಜೇ ಮಾಲೂಮ್ ನಹಿʼ ಎಂಬ ಸಿದ್ಧ ಉತ್ತರ ಬಂತು. ಬಳಿಕ ಕಾರಿಡಾರ್ ಹೊಕ್ಕಾಗ ಎಲ್ಲ ಮನೆಗಳು ಬಾಗಿಲು ಹಾಕಿದ್ದವು. ಈ ಕುರಿತು ಭದ್ರತಾ ಸಿಬ್ಬಂದಿಯನ್ನು ವಿಚಾರಿಸಿದಾಗ ಎಲ್ಲರೂ ಕೆಲಸಗಳಿಗೆ ಹೋಗಿರುತ್ತಾರೆ. ಯಾರೂ ಕೂಡ ಅತುಲ್ ಸಾವಿನ ಕುರಿತು ಮಾತನಾಡುವುದಿಲ್ಲ ಎಂದು ಹೇಳಿದಾಗ ಅಪಾರ್ಟ್‌ಮೆಂಟ್‌ನಲ್ಲಿ ಅತುಲ್ ಒಬ್ಬಂಟಿ ಜೀವನದಲ್ಲಿ ಎದುರಿಸಿದ ಕಷ್ಟಗಳನ್ನು ನೆನಪಿಸುವಂತಿತ್ತು.
ಮಹಡಿಯಿಂದ ಕೆಳಗೆ ಬರುತ್ತಲೇ ಬೆಸ್ಕಾಂ ಸಿಬ್ಬಂದಿ, ನೀರು ಬಾಟಲಿ ಹಾಕುವ ಸಿಬ್ಬಂದಿ ಎದುರಾದರು. ಅವರು ಕೂಡ ಆಶ್ಚರ್ಯಚಕಿತರಾಗಿ ಇದೇ ಬಿಲ್ಡಿಂಗ್‌ನಲ್ಲಿ ಅತುಲ್ ಆತ್ಮಹತ್ಯೆ ಮಾಡಿಕೊಂಡರಾ ಎಂದು ಭದ್ರತಾ ಸಿಬ್ಬಂದಿ ಗಣೇಶ ಅವರನ್ನು ಪ್ರಶ್ನಿಸಿ ಕನಿಕರ ವ್ಯಕ್ತಪಡಿಸಿದರು.
ಡಾಲ್ಫೀನಿಯಂ ಅಪಾರ್ಟ್ಮೆಂಟ್ ಮುಂದಿನ ಕೆಲ ಸ್ಥಳೀಯರನ್ನು ಘಟನೆ ಕುರಿತು ಕೇಳಿದಾಗ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿ, ಅತುಲ್ ಸುಭಾಷ್ ಕುರಿತು ಕನಿಕರದ ಮಾತುಗಳನ್ನಾಡಿದರು. ಪ್ರತಿಯೊಬ್ಬರ ಬಾಯಲ್ಲೂ ಹೀಗಾಗಬಾರದಿತ್ತು ಎಂಬ ಮಾತಿನ ಜೊತೆಗೆ ಅತುಲ್ ಪತ್ನಿಯ ವಿರುದ್ಧ ಸಿಟ್ಟು ತೋರಿಸಿದರು.
ಡಾಲ್ಫಿನಿಯಂ ಅಪಾರ್ಟ್‌ಮೆಂಟ್ ಎದುರಿನ ರಸ್ತೆಯ ತಿರುವಿನಲ್ಲಿ ಕೇಬಲ್ ಕೆಲಸ ಮಾಡಿಸುತ್ತಿದ್ದ ಮತ್ತೊಂದು ಅಪಾರ್ಟ್‌ಮೆಂಟ್ ನಿವಾಸಿ ಜಿ.ಎಂ. ಹಂಚಿನಾಳ ಎಂಬುವರನ್ನು ಅತುಲ್ ಆತ್ಮಹತ್ಯೆ ಕುರಿತು ಪ್ರಶ್ನಿಸುತ್ತಿದ್ದಂತೆ, ;ಇಂತಹ ದುರಂತ ಎಲ್ಲಿಯೂ ಆಗಬಾರದುʼ ಬೇಸರ ನೋವು ತೋಡಿಕೊಂಡರು. ನಾವು ಅತುಲ್ ಸುಭಾಷ್ ರನ್ನು ನೋಡಿಲ್ಲ. ಆದರೆ, ನಮ್ಮ ವಸತಿಗೃಹದ ಸಮೀಪವೇ ಇಂತದ್ದೊಂದು ಘಟನೆ ನಡೆದು ಹೋಗಿದೆ. ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿ ಪ್ರಾಣ ಕಳೆದುಕೊಂಡ ಅತುಲ್ ಪರಿಸ್ಥಿತಿ ಯಾರಿಗೂ ಬರಬಾರದು. ಆತ ಡೆತ್‌ನೋಟ್‌ನಲ್ಲಿ ದಾಖಲಿಸಿದ್ದ ಕಿರುಕುಳದ ವಿವರ ನೋಡಿ ತುಂಬಾ ಬೇಸರವಾಯಿತು" ಎಂದು ದ ಫೆಡರಲ್ ಕರ್ನಾಟಕದ ಬಳಿ ಹೇಳಿಕೊಂಡರು.
"ಸೋಮವಾರ ಬೆಳಿಗ್ಗೆ ಮನೆಯ ಮುಂದೆ ನಿಂತಿದ್ದಾಗ ಎರಡು ಪೊಲೀಸ್ ಜೀಪ್ ಬಂದು ಡಾಲ್ಫಿನಿಯಂ ಅಪಾರ್ಟ್‌ಮೆಂಟ್ ಬಗ್ಗೆ ವಿಚಾರಿಸಿದರು. ನಾನೇ ಖುದ್ದು ಹೋಗಿ ತೋರಿಸಿದೆ. ಪೊಲೀಸ್ ಜೀಪುಗಳ ಹಿಂದೆಯೇ ಫೊರೆನ್ಸಿಕ್ ವಾಹನ, ಶ್ವಾನದಳ, ಎರಡು ಅಂಬುಲೆನ್ಸ್ ಹಾಗೂ ಒಂದಷ್ಟು ಪೊಲೀಸರು ಬಂದರು. ಏನಾಗಿದೆ ಎಂದು ವಿಚಾರಿಸಿದಾಗ ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿಯಿತು. ಇದಾದ ಕೆಲ ಗಂಟೆಗಳ ಬಳಿಕ ಖಾಸಗಿ ಕಂಪನಿಯ ಉದ್ಯೋಗಿ ಕೌಟುಂಬಿಕ ಜಗಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂತು. ಮಾರನೇ ದಿನ ಡೆತ್‌ನೋಟ್, ವಿಡಿಯೋ ಮಾಡಿಟ್ಟಿರುವುದು ಮಾಧ್ಯಮಗಳಲ್ಲಿ ಪ್ರಸಾರವಾದ ಮೇಲೆ ಆಶ್ಚರ್ಯವಾಯಿತು," ಎಂದವರು ದ ಫೆಡರಲ್ ಕರ್ನಾಟಕಕ್ಕೆ ವಿವರಿಸಿದರು.
"ಆತುಲ್ ತನ್ನ ಮಗುವನ್ನು ನೋಡಬೇಕಾದರೆ ಪರಿಹಾರ ನೀಡಬೇಕೆಂಬ ಸಂಗತಿ ತಿಳಿದು ತೀವ್ರ ನೋವಾಯಿತು. ಹಳ್ಳಿಗಳಲ್ಲಿ ವರದಕ್ಷಿಣೆ ಕಿರುಕುಳ ಇತ್ಯಾದಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುವುದು ಸಾಮಾನ್ಯ. ಆದರೆ, ಬೆಂಗಳೂರಿನಲ್ಲಿ ಅತುಲ್ ಆತ್ಮಹತ್ಯೆಗೆ ಕಾರಣಗಳನ್ನು ನೋಡಿದಾಗ ಪುರುಷರ ಮೇಲೂ ದೌರ್ಜನ್ಯ ನಡೆದಿದೆ. ಒಬ್ಬ ತಂದೆಯಾದವರು ಕಷ್ಟ ಸುಖ ಎಲ್ಲವನ್ನೂ ಮರೆತು ಸಂಸಾರದ ಹೊಣೆ ಹೊತ್ತಿರುತ್ತಾರೆ. ಈ ರೀತಿಯಾದಾಗ ಏನು ಮಾಡಬೇಕು ಎಂಬುದು ತೋಚದು. ಹಳೆಯ ಕಾನೂನುಗಳನ್ನು ಸರ್ಕಾರ ಪರಿಷ್ಕರಿಸಬೇಕು," ಎಂದು ಹೆಸರು ಹೇಳಲಿಚ್ಛಿಸದ ಅಪಾರ್ಟ್‌ಮೆಂಟ್ ನಿವಾಸಿಯೊಬ್ಬರು ಅಭಿಪ್ರಾಯಪಟ್ಟರು..
ಒಳ್ಳೆಯ ಸ್ವಾಭಾವದ ವ್ಯಕ್ತಿ
ಐದು ವರ್ಷದಿಂದ ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದ ಅತುಲ್ ಸುಭಾಷ್ ಸುಸಂಸ್ಕೃತ ವ್ಯಕ್ತಿ. ತಾನಾಯಿತು, ಕೆಲಸವಾಯಿತು ಎಂಬಂತೆ ಜೀವನ ನಡೆಸುತ್ತಿದ್ದರು. ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಪ್ರತಿದಿನ ಕ್ಯಾಬ್ ಹತ್ತಿ ಕೆಲಸಕ್ಕೆ ಹೋಗುತ್ತಿದ್ದರು. ಬಂದು ಮನೆ ಸೇರಿಕೊಳ್ಳುತ್ತಿದ್ದರು ಎಂದು ಭದ್ರತಾ ಸಿಬ್ಬಂದಿ ಗಣೇಶ್ ʼದ ಫೆಡರಲ್ ಕರ್ನಾಟಕʼಕ್ಕೆ ವಿವರಿಸಿದರು.
ಆರಂಭದಲ್ಲಿ ಪತ್ನಿ, ಪುತ್ರ ಸಮೇತ ವಾಸವಿದ್ದರು. ಎಂದಿಗೂ ಜಗಳವಾಡಿದ್ದು ನೋಡಿರಲಿಲ್ಲ, ಮಗುವಿನೊಂದಿಗೆ ಸಂತೋಷವಾಗಿದ್ದರು. ಆದರೆ, ಪತ್ನಿ ಊರಿಗೆ ಹೋದ ಮೇಲೆ ಅತುಲ್ ಸುಭಾಷ್ ಒಬ್ಬಂಟಿಯಾಗಿ ವಾಸವಾಗಿದ್ದರು. ಸೋಮವಾರ ಬೆಳಿಗ್ಗೆ ಮೂರನೇ ಮಹಡಿಯಲ್ಲಿ ಕ್ಲೀನಿಂಗ್ ಮಾಡುವ ವೇಳೆ ಬಾಗಿಲು ಬಡಿದರೂ ತೆರೆಯಲಿಲ್ಲ. ಆಗ ಕಿಟಕಿಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂತು. ಕೂಡಲೇ ಅಪಾರ್ಟ್‌ಮೆಂಟ್ ಮಾಲಿಕ ಪ್ರದೀಪ್ ಅವರಿಗೆ ವಿಷಯ ತಿಳಿಸಿದೆ. ಮಾಲೀಕರು ಪೊಲೀಸರಿಗೆ ವಿಷಯ ಮುಟ್ಟಿಸಿದರು. ಬೆಳಿಗ್ಗೆ ಆರು ಗಂಟೆಗೆ ಪೊಲೀಸರು ಬಂದು ಪರಿಶೀಲಿಸಿ ಹೋದರು, ಮತ್ತೆ 10ಗಂಟೆಗೆ ಬಂದು ಅತುಲ್ ಶವವನ್ನು ಇಳಿಸಿ ಅಂಬುಲೆನ್ಸ್‌ನಲ್ಲಿ ಕೊಂಡೊಯ್ದರು ಎಂದು ತಿಳಿಸಿದರು.
ಮತ್ತೊಬ್ಬ ಸ್ಥಳೀಯರಾದ ಜಗದೀಶ್ ಎಂಬುವರು ಪ್ರತಿಕ್ರಿಯಿಸಿ, ನಾವು ಇದೇ ಪ್ರದೇಶದಲ್ಲಿದ್ದೇವೆ. ಅತುಲ್ ಸುಭಾಷ್ ಎಂಬುವರ ಆತ್ಮಹತ್ಯೆ, ಅದರ ಹಿಂದಿನ ಕಾರಣಗಳು ತಿಳಿದು ಬೇಸರವಾಯಿತು. ಕುಟುಂಬದ ಯಜಮಾನನಿಗೆ ಸಾಕಷ್ಟು ಸಮಸ್ಯೆಗಳಿರುತ್ತವೆ. ಇಲ್ಲಿ ಕುಟುಂಬದ ಯಜಮಾನನಿಗೆ ಪತ್ನಿ ಕಿರುಕುಳ ನೀಡಿ ಅವರ ಸಾವಿಗೆ ಕಾರಣವಾಗಿರುವುದು ದುರಂತ. ನಮ್ಮ ಸಮಾಜದಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನ ನೀಡಿದ್ದೇವೆ. ಇಂತದ್ದರಲ್ಲಿ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಕಾನೂನುಗಳನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಗಂಡಿನ ಶೋಷಣೆ ಸಲ್ಲದು ಎಂದು ಹೇಳಿದರು.
ಒಟ್ಟಾರೆ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಸ್ಥಳೀಯರನ್ನೂ ನೋವಿಗೆ ದೂಡಿದೆ. ಪತ್ನಿಯ ಕಿರುಕುಳದಿಂದ ತಲ್ಲಣಿಸಿ ಆತ್ಮಹತ್ಯೆ ಮಾಡಿಕೊಂಡ ಅತುಲ್ ಸುಭಾಷ್ ಪ್ರಕರಣದಿಂದ ಮಹಿಳಾ ದೌರ್ಜನ್ಯ ತಡೆ ಕಾನೂನುಗಳ ದುರ್ಬಳಕೆ ವಿಚಾರವನ್ನು ಚರ್ಚೆಗೆ ತಂದು ಬಿಟ್ಟಿದೆ.