ಜಾತ್ಯಾತೀತ ತತ್ವಾದರ್ಶಕ್ಕೆ ತಿಲಾಂಜಲಿ; ಹಿಂದುತ್ವದತ್ತ ಕುಮಾರಸ್ವಾಮಿಯ ಅವಕಾಶವಾದಿ ನಡೆ
ಹಸಿರು ಶಾಲಿನ ಸ್ಥಾನ ಆಕ್ರಮಿಸಿದ ಕೇಸರಿ ಶಾಲು;
ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗಿನ ಮೈತ್ರಿಯ ಬೆನ್ನಲ್ಲೇ ಹಸಿರು ಶಾಲನ್ನು ಕಿತ್ತೊಗೆದು ಕೇಸರಿ ಶಾಲು ಧರಿಸಿಕೊಂಡು ನೀಡುತ್ತಿರುವ ಹೇಳಿಕೆಗಳು ರಾಜಕೀಯ ಪಡಸಾಲೆ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿವೆ.
ರೈತ, ಪ್ರಗತಿಪರ ಹೋರಾಟದ ಹಿನ್ನೆಲೆಯನ್ನು ಹೊಂದಿರುವ ಮಂಡ್ಯದಲ್ಲೇ ಕುಮಾರಸ್ವಾಮಿ ತೊಟ್ಟಿರುವ ಕೇಸರಿ ದಿರಿಸು ಹಾಗೂ ನಡೆ ನುಡಿಗಳು ಪರ ಮತ್ತು ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ. ಜಾತ್ಯಾತೀತ ಜನತಾದಳದ ನಾಯಕ ಕುಮಾರಸ್ವಾಮಿ ಅವರು ಇದೀಗ ಅತಿರೇಕ ಎನ್ನುವಂತೆ ಹಿಂದುತ್ವವನ್ನು ಅಪ್ಪಿಕೊಂಡಿರುವುದು ಸ್ವತಃ ತಮ್ಮದೇ ಪಕ್ಷದ ನಾಯಕರನ್ನು ವಿಚಲಿತರನ್ನಾಗಿಸಿದೆ. ಏಕೆಂದರೆ ಈ ಹಿಂದೆ ಅವರು ಆರ್ ಎಸ್ ಎಸ್ ಹಾಗೂ ಸಂಘ ಪರಿವಾರದ ವಿರುದ್ಧ ಹಲವು ಬಾರಿ ಸಮರ ಸಾರಿದ್ದರು. ಬಿಜೆಪಿಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ‘ಪೇಶ್ವೆ’ ಎನ್ನುವ ಪಟ್ಟ ನೀಡಿ, ಅವರಿಂದ ಕರ್ನಾಟಕ ಹಾಳಾಗುತ್ತಿದೆ ಎಂದೂ ಹೇಳಿಕೆ ನೀಡಿ ಸಾಕಷ್ಟು ಸದ್ದು ಮಾಡಿದ್ದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಕುಮಾರಸ್ವಾಮಿ ತಮ್ಮ ಪಕ್ಷದ ಸಾಂಪ್ರದಾಯಿಕ ಬಣ್ಣ ರೈತರ ಹಸಿರನ್ನು ತೊರೆದು ಹಿಂದುತ್ವದ ಕೇಸರಿಯ ಮೊರೆ ಹೋಗಿದ್ದಾರೆ. ಆದರೆ, ಕುಮಾರಸ್ವಾಮಿಯವರ ತಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ರಾಜಕೀಯ ತಂತ್ರ-ಕುತಂತ್ರಗಳೇ ಬೇರೆ ರೀತಿಯದ್ದು.
ದೇವೇಗೌಡರು ತಾಲೂಕು ಬೋರ್ಡ್ ಮೆಂಬರ್ ಆಗುವ ಮೂಲಕ ರಾಜಕಾರಣಕ್ಕೆ ಧುಮುಕಿ ಏಳು-ಬೀಳುಗಳನ್ನು, ಸೋಲು-ಗೆಲುವುಗಳನ್ನು ಕಂಡವರು. ಕಷ್ಟಪಟ್ಟು ಅಧಿಕಾರಕ್ಕೆ ಏರಿದವರು. ಹಳ್ಳಿಯ ಹೈದನೊಬ್ಬ ಪ್ರಧಾನಿ ಪಟ್ಟದಂತಹ ಉನ್ನತ ಹುದ್ದೆ ಏರಿ, ಪ್ರಜಾಪ್ರಭುತ್ವದ ಸೊಗಸನ್ನು ಸಾರಿದವರು. ತಮ್ಮ ಅರವತ್ತು ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಅವರು ಹೊಂದಾಣಿಕೆ ಮಾಡಿಕೊಂಡಿರಬಹುದು, ಪಕ್ಷಾಂತರ ಮಾಡಿರಬಹುದು, ಭ್ರಷ್ಟರಾಗಿರಬಹುದು, ದ್ವೇಷಾಸೂಯೆಗಳ ಮೂಟೆ ಎನಿಸಿಕೊಂಡಿರಬಹುದು, ವಿರೋಧಿಗಳನ್ನು ಹಣಿಯಲು ತಂತ್ರ-ಕುತಂತ್ರಗಳಿಗೆ ಕೈ ಹಾಕಿರಬಹುದು. ಆದರೆ ತಾವು ನಂಬಿದ ತತ್ವ-ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟವರಲ್ಲ. ಅಧಿಕಾರಕ್ಕಾಗಿ-ಹಣಕ್ಕಾಗಿ ರಾಜಕಾರಣವನ್ನು ಕುಲಗೆಡಿಸಿದವರಲ್ಲ.
2006ರಲ್ಲಿ ಬಿಜೆಪಿ ಜೊತೆ ಸೇರಿ 20-20 ಸರ್ಕಾರ ಮಾಡಿದಾಗಲೇ ಜಾತ್ಯಾತೀತ ತತ್ವಕ್ಕೆ ಕುಮಾರಸ್ವಾಮಿ ಎಳ್ಳು ನೀರು ಬಿಟ್ಟಿದ್ದರು. ಆಗ ದೇವೇಗೌಡರು ಪುತ್ರನ ವರ್ತನೆಗೆ ಕಣ್ಣೀರಿಟ್ಟಿದ್ದರು. ಆನಂತರ ಅದು ರಾಜಕೀಯ ತಂತ್ರ ಎಂದು ಪುತ್ರನ ಬೆನ್ನುತಟ್ಟಿದ್ದರು.
2018 ರ ವಿಧಾನಸಭೆ ಚುನಾವಣೆಯಲ್ಲಿ 37 ಸ್ಥಾನಗಳನ್ನು ಗಳಿಸಿಕೊಂಡು ಮೈತ್ರಿ ಸರ್ಕಾರ ರಚನೆಗೆ ಕಾರಣವಾಗಿದ್ದ ಜೆಡಿಎಸ್ 2023 ರ ಚುನಾವಣೆಯಲ್ಲಿ ಹೀನಾಯ ಸೋಲನ್ನು ಕಂಡಿತ್ತು. ಕೇವಲ 19 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಪಕ್ಷದ ಈ ಹೀನಾಯ ಸ್ಥಿತಿಯಿಂದ ದಳಪತಿಗಳು ಕಂಗೆಟ್ಟಿದ್ದರು. ಈ ನಡುವೆ ಕೆಲವು ಶಾಸಕರು ಕಾಂಗ್ರೆಸ್ ಆಪರೇಷನ್‌ಗೆ ಒಳಗಾಗುವ ಸುದ್ದಿಯೂ ದಳಪತಿಗಳ ಆತಂಕಕ್ಕೆ ಕಾರಣವಾಗಿತ್ತು.
ಈ ನಡುವೆ 2023 ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಬಿಂಬಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಈ ಕಾರಣಕ್ಕಾಗಿಯೇ ಮುಸ್ಲಿಂ ಮತಗಳು ಜೆಡಿಎಸ್ ಕಡೆಗೆ ವಾಲದೆ ಪೂರ್ತಿಯಾಗಿ ಕಾಂಗ್ರೆಸ್ ಪಾಲಾದವು. ಜೆಡಿಎಸ್ ಬುಟ್ಟಿಯಲ್ಲಿ ಖಾಯಂ ಆಗಿ ಉಳಿಯುತ್ತಿದ್ದ ಒಕ್ಕಲಿಗ ಹಾಗೂ ಮುಸ್ಲಿಂ ಸಮುದಾಯದ ಮತಗಳಲ್ಲಿ, ಮುಸ್ಲಿಂ ಮತಗಳು ಕಾಂಗ್ರೆಸ್ ನತ್ತ ವಾಲಿದವು. ಇದಾದ ಬಳಿಕ, ಕುಮಾರಸ್ವಾಮಿ ಅವರು, "ನಾವು ಮುಸ್ಲಿಮರನ್ನು ನಂಬಿಕೊಂಡು ರಾಜಕಾರಣ ಮಾಡುತ್ತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಆ ಸಮುದಾಯದ ಕಣ್ಣು ಕೆಂಪಗಾಗಿಸಿದರು. ಜೆಡಿಎಸ್ ನಲ್ಲಿದ್ದ ಬಹುತೇಕ ಮುಸ್ಲಿಂ ನಾಯಕರು ಜೆಡಿಎಸ್ ತೊರೆದರು. ಪಕ್ಷದ ಅಸ್ತಿತ್ವವೇ ಅಳಿದುಹೋಗುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಅನಿವಾರ್ಯ ಎನ್ನುವ ನಿರ್ಧಾರಕ್ಕೆ ಸ್ವತಃ ದೇವೇಗೌಡರು ಬಂದಿಳಿದರು.
ಪಕ್ಷ ಉಳಿಸಿಕೊಳ್ಳುವ ದೃಷ್ಟಿಯಿಂದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ನಿಲುವನ್ನು ಬದಲಾಯಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾದರು. ಈ ಕಾರಣಕ್ಕಾಗಿಯೇ ಬಿಜೆಪಿ ಜೊತೆಗೆ ದಳಪತಿಗಳ ಮೈತ್ರಿ ನಡೆಯಿತು.
ಆರಂಭದಲ್ಲಿ ಬಿಜೆಪಿಯ ಹಿಂದುತ್ವ ಅಜೆಂಡಾ ವಿಚಾರವಾಗಿ ಅಂತರ ಕಾಯ್ದುಕೊಂಡಿದ್ದ ಕುಮಾರಸ್ವಾಮಿ, ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶಾಲೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಅಚ್ಚರಿ ಹುಟ್ಟಿಸಿದ್ದರು. ಕುಮಾರಸ್ವಾಮಿ ಅವರು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಈ ಹಿಂದೆ ತೀವ್ರ ಸ್ವರೂಪದ ಟೀಕೆಗಳನ್ನು ಮಾಡಿದ್ದರು ಎಂಬುವುದು ಗಮನಾರ್ಹ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಮಾತನಾಡುತ್ತಾ, ‘ಈ ಮುಂಚೆ ಕಲ್ಲಡ್ಕ ಪ್ರಭಾಕರ ಭಟ್ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಕೆಲವರು ದಾರಿ ತಪ್ಪಿಸಿದ್ದರು. ಇಂದು ನನ್ನ ಕಣ್ಣು ತೆರೆದಿದೆ. ಮನಸ್ಸು ಪರಿವರ್ತನೆಯಾಗಿದೆ. ತಪ್ಪು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದರು.
ಈ ಎರಡೂ ಹೇಳಿಕೆಗಳಲ್ಲಿ ಒಂದು ಸಾಮ್ಯವಿದೆ. ಅದುವೇ ಅವಕಾಶವಾದಿತನ. ರಾಜಕಾರಣದಲ್ಲಿರುವವರಿಗೆ ಅದು ಅನಿವಾರ್ಯವಾಗಿರಬಹುದು. ಆದರೆ ಕುಮಾರಸ್ವಾಮಿಯವರ ಮಾತುಗಳು ಆ ಅನಿವಾರ್ಯತೆಯನ್ನೂ ಮೀರಿದ್ದು ಎಂದರೆ ತಪ್ಪಾಗಲಾರದು.
ಈ ಹಿಂದೆ 1994ರಲ್ಲಿ, ‘ಒಂದೇ ಒಂದು ಸಲ ಮುಖ್ಯಮಂತ್ರಿಯಾದರೆ ಸಾಕು, ಎನ್ನುವ ಹಂಬಲ ಇಟ್ಟುಕೊಂಡಿದ್ದರು. ಜನತೆಯ ಆಶೀರ್ವಾದದಿಂದ ಗೌಡರು ಮುಖ್ಯಮಂತ್ರಿಯಾದರು. ಆದರೆ ಮಗ ಕುಮಾರಸ್ವಾಮಿಯವರು, ಅಪ್ಪ ಮತ್ತು ಜನತೆಯ ಆಶೀರ್ವಾದವನ್ನು ಪಕ್ಕಕ್ಕಿಟ್ಟು, ಅವಕಾಶವಾದಿ ರಾಜಕಾರಣವನ್ನು ಅಪ್ಪಿಕೊಂಡು ಒಂದಲ್ಲ, ಎರಡು ಸಲ ಮುಖ್ಯಮಂತ್ರಿಯಾದರು. ಕುಮಾರಸ್ವಾಮಿಯವರ ಅನೈತಿಕ ರಾಜಕಾರಣ ಕಂಡು ಮೊದಲು ಮೂದಲಿಸಿದ್ದ ದೇವೇಗೌಡರು, ನಂತರ ಚಾಣಾಕ್ಷ ಎಂದರು. ಕೊನೆಗೆ ಕುಮಾರಸ್ವಾಮಿಯವರ ರಾಜಕಾರಣವೇ ಸರಿ ಎಂದು ಅವರ ದಾರಿಗೇ ಬಂದರು.
ಬಿಜೆಪಿಯೊಂದಿಗಿನ ಮೈತ್ರಿ ಜೆಡಿಎಸ್ ನ ಅಸ್ಥಿತ್ವಕ್ಕೆ ಮುಳುವಾಗುದೇ..?
ಅಳಿವಿನಂಚಿನಲ್ಲಿರುವ ಪಕ್ಷವನ್ನು ಜೀವಂತವಾಗಿರಿಸಿಕೊಳ್ಳಲು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಹೆಣಗಾಡುತ್ತಿದ್ದಾರೆ. ಪ್ರಬಲ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಪಕ್ಷವನ್ನು ಗಟ್ಟಿಗೊಳಿಸುವ ಹಂಬಲದಲ್ಲಿದ್ದಾರೆ. ಆದರೆ ಕುಮಾರಸ್ವಾಮಿ ಅವರ ಅತಿರೇಕದ ವರ್ತನೆಯು ಜೆಡಿಎಸ್ ಅಸ್ಥಿತ್ವಕ್ಕೆ ಮತ್ತಷ್ಟು ಮುಳುವಾಗುವ ಸಾಧ್ಯತೆ ಇದೆ.
ಜೆಡಿಎಸ್ ರಾಜ್ಯದ ಪ್ರಾದೇಶಿಕ ಪಕ್ಷವಾದರೂ ಕೂಡ ಸಧ್ಯ ಅದು ಹಳೆ ಮೈಸೂರು ಭಾಗದ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಇಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ, ಹೀಗಿದ್ದಾಗ ಅದರ ಸಂಪೂರ್ಣ ಲಾಭ ಪಡೆಯಬೇಕಿದ್ದ ಕುಮಾರಸ್ವಾಮಿ ಅವರು, ಬಿಜೆಪಿಗೆ ರೆಡ್ ಕಾರ್ಪೆಟ್ ಹಾಸುತ್ತಿದ್ದಾರೆ. ದೇಶದಲ್ಲಿ ಬಿಜೆಪಿಯು ಹಿಂದುತ್ವ ಎನ್ನುವ ಭಾವನಾತ್ಮಕ ವಿಚಾರ ಮುನ್ನಲೆಗೆ ಬಿಟ್ಟು ರಾಜಕೀಯದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಹಳೆ ಮೈಸೂರು ಭಾಗದ ಜನರು ಧರ್ಮಾಧಾರಿತ ರಾಜಕಾರಣದಿಂದ ದೂರವೇ ಇದ್ದಂತವರು, ಇದೀಗ ಆ ಜನರಿಗೆ ಧರ್ಮದ ಅಫೀಮು ನೀಡುವ ಮೂಲಕ ಬಿಜೆಪಿಗೆ ನೆಲೆ ಕಲ್ಪಿಸಿಕೊಡಲಾಗುತ್ತಿದೆ.
ಇತ್ತೀಚೆಗೆ ಕುಮಾರಸ್ವಾಮಿ ಅವರು ಕೇಸರಿ ಶಾಲು ಧರಿಸಿ, ಬಿಜೆಪಿ ನಾಯಕರಿಗಿಂತ ಒಂದು ಕೈ ಮೇಲು ಎನ್ನುವಂತೆ ಭಾಷಣ ಮಾಡುತ್ತಿದ್ದಾರೆ. ಹೀಗೆ ಮಾಡುವುದರಿಂದ ಮೈತ್ರಿಯಲ್ಲಿ ಐದು ಕ್ಷೇತ್ರಗಳಲ್ಲಿ ಟಿಕೆಟ್ ಪಡೆಯಬಹುದು ಎನ್ನುವುದು ಅವರ ಲೆಕ್ಕಾಚಾರ. ಆದರೆ 3-4 ಸ್ಥಾನಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಬಹುದು ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಮಂಡ್ಯ ಸೇರಿದಂತೆ ಈ ಭಾಗಗಳಲ್ಲಿ ಬಿಜೆಪಿಗೆ ಕೆಳಮಟ್ಟದ ಬೇರು ಗಟ್ಟಿಯಾಗಿಲ್ಲ, ಇದೀಗ ಕುಮಾರಸ್ವಾಮಿ ಅವರು ಹಿಂದುತ್ವ, ರಾಮ, ಭಾಗವಧ್ವಜ ಸೇರಿದಂತೆ ಇತರ ವಿಚಾರಗಳ ಕುರಿತು ಹೇಳಿಕೆ ನೀಡುವ ಮೂಲಕ ಕಮಲ ಅರಳಲು ಅನುವು ಮಾಡಿಕೊಡುತ್ತಿದ್ದಾರೆ. ಒಂದು ವೇಳೆ ಜಾತ್ಯಾತೀತ, ಧರ್ಮಾತೀತವಾದಂತಹ ಈ ನೆಲದಲ್ಲಿ ಧರ್ಮಾಧ ಬೀಜ ನೆಟ್ಟರೆ ಅದು ಜೆಡಿಎಸ್ ಗೆ ಮುಳುವಾಗಬಹುದು ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.