Tiger Census | ಕರ್ನಾಟಕದ 5 ಅಭಯಾರಣ್ಯಗಳಲ್ಲಿರುವ ಹುಲಿಗಳ ಸಂಖ್ಯೆ 393!

ಬಂಡೀಪುರದಲ್ಲಿ 154 ಹುಲಿಗಳಿದ್ದರೆ, ನಾಗರಹೊಳೆಯಲ್ಲಿ 149 ಹುಲಿಗಳಿವೆ. ಬಿಆರ್‌ಟಿ, ಭದ್ರಾ ಮತ್ತು ಕಾಳಿ ಮೀಸಲುಗಳಲ್ಲಿ ಕ್ರಮವಾಗಿ 39, 29 ಮತ್ತು 22 ಹುಲಿಗಳಿವೆ ಎಂದು ವರದಿ ಹೇಳಿದೆ.;

Update: 2025-03-29 10:14 GMT

ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗಿದೆ. 

ರಾಜ್ಯದ ಐದು ಅಭಯಾರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಸತತ ಮೂರನೇ ವರ್ಷವೂ ಇಳಿಮುಖವಾಗಿದ್ದು, 2024 ರಲ್ಲಿ ರಾಜ್ಯದಲ್ಲಿ ಒಟ್ಟು 393 ಹುಲಿಗಳಿವೆ ಎಂದು ಕಳೆದ ವರ್ಷ ರಾಜ್ಯ ಸರ್ಕಾರ ನಡೆಸಿದ ನಾಲ್ಕನೇ ಹಂತದ ಮೇಲ್ವಿಚಾರಣಾ ಸಮೀಕ್ಷೆಯಿಂದ ತಿಳಿದುಬಂದಿದೆ.

ಪ್ರಸ್ತುತ ಹುಲಿಗಳ ಸಂಖ್ಯೆ

ಕರ್ನಾಟಕದ ಐದು ಹುಲಿ ಮೀಸಲು ಪ್ರದೇಶಗಳಲ್ಲಿ ಬಂಡೀಪುರ, ನಾಗರಹೊಳೆ, ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ (ಬಿಆರ್‌ಟಿ), ಭದ್ರಾ ಮತ್ತು ಕಾಳಿ ಸೇರಿವೆ. ಆ ಪೈಕಿ ಬಂಡೀಪುರದಲ್ಲಿ 154 ಹುಲಿಗಳಿದ್ದರೆ, ನಾಗರಹೊಳೆಯಲ್ಲಿ 149 ಹುಲಿಗಳಿವೆ. ಬಿಆರ್‌ಟಿ, ಭದ್ರಾ ಮತ್ತು ಕಾಳಿ ಮೀಸಲುಗಳಲ್ಲಿ ಕ್ರಮವಾಗಿ 39, 29 ಮತ್ತು 22 ಹುಲಿಗಳಿವೆ ಎಂದು ವರದಿ ಹೇಳಿದೆ.

ದೇಶದ ಹುಲಿ ಮೀಸಲು ಪ್ರದೇಶಗಳಲ್ಲಿ ನಡೆಸುವ ವಾರ್ಷಿಕ ಮೇಲ್ವಿಚಾರಣಾ ಸಮೀಕ್ಷೆಯ ಭಾಗವಾಗಿ, ನವೆಂಬರ್ 2023 ರಿಂದ ಫೆಬ್ರವರಿ 2024 ರವರೆಗೆ ಈ ಅಭಯಾರಣ್ಯಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. 

ಎಲ್ಲಾ ಹುಲಿ ಮೀಸಲು ಪ್ರದೇಶಗಳಲ್ಲಿ ಪ್ರತಿ ವರ್ಷ ನಾಲ್ಕು ಹಂತದ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಸಮೀಕ್ಷೆಯ ಬಳಿಕ ಅರಣ್ಯ ಇಲಾಖೆಯು ತನ್ನ ಕರ್ನಾಟಕ ವನ್ಯಜೀವಿ ತಾಂತ್ರಿಕ ಕೋಶದ ಮೂಲಕ ಹುಲಿಗಳು ಮತ್ತು ಇತರ ಸಸ್ತನಿಗಳ ಸ್ಥಿತಿಗತಿಯ ಕುರಿತು 2024 ರ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿತ್ತು. ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ವರದಿಯನ್ನು ಬಿಡುಗಡೆ ಮಾಡಿದರು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(NTCA) ಪ್ರಕಾರ, ನಾಲ್ಕು ಹಂತದ ಸಮೀಕ್ಷೆಯನ್ನು ಪ್ರತಿವರ್ಷ ಎಲ್ಲಾ ಹುಲಿ ಅಭಯಾರಣ್ಯದಲ್ಲಿ ನಡೆಸಲಾಗುತ್ತದೆ. ಸಮೀಕ್ಷೆ ನಂತರ, ಅರಣ್ಯ ಇಲಾಖೆ ಅದರ ಕರ್ನಾಟಕ ವನ್ಯಜೀವಿ ತಾಂತ್ರಿಕ ಕೋಶ ಮೂಲಕ ಹುಲಿಗಳ ಸಂತತಿ ಮತ್ತು ಇತರ ಸಸ್ತನಿಗಳ ಬಗ್ಗೆ 2024ರ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿತ್ತು.

ಹುಲಿ ಅಭಯಾರಣ್ಯಗಳಲ್ಲಿ 2,160 ಕಡೆ ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದ್ದು, ಸುಮಾರು 6.1 ಮಿಲಿಯನ್ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಹುಲಿಗಳ ಚಿತ್ರಗಳನ್ನು ಪ್ರತ್ಯೇಕಿಸಿ, ಕೃತಕ ಬುದ್ಧಿಮತ್ತೆ (AI) ಆಧಾರಿತ ಸಾಫ್ಟ್‌ವೇರ್ ಬಳಸಿ ಸಂಸ್ಕರಿಸಲಾಗಿದೆ. 2024 ರ ವೇಳೆಗೆ ಕರ್ನಾಟಕದಲ್ಲಿ ಸುಮಾರು 393 ಹುಲಿಗಳು ಇವೆ ಎಂದು ಅಂದಾಜಿಸಲಾಗಿದೆ. ಹುಲಿ ಅಭಯಾರಣ್ಯಗಳಿಂದ ಇತರ ಆವಾಸಸ್ಥಾನಗಳಿಗೆ ಚಲನವಲನಗಳನ್ನು ಸಹ ಮೇಲ್ವಿಚಾರಣೆ ಮಾಡಲಾಗುತ್ತಿದೆ.

Tags:    

Similar News