ಧರ್ಮಸ್ಥಳ ಪ್ರಕರಣ | ಸರ್ಕಾರದಿಂದಲೇ ಕ್ಷೇತ್ರದ ಗೌರವ ಹಾಳು- ನಿಖಿಲ್ ಕುಮಾರಸ್ವಾಮಿ ಆರೋಪ
ಎಸ್ಐಟಿ ರಚನೆಯನ್ನು ಪ್ರಶ್ನಿಸಿದ ಅವರು, ತರಾತುರಿಯಲ್ಲಿ ಎಸ್‌ಐಟಿ ಮಾಡಿದ್ದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಕ್ಷೇತ್ರದ ಗೌರವ ಕಳೆಯುವ ಕೆಲಸವನ್ನು ಸರ್ಕಾರವೇ ಮಾಡಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.;
ಧರ್ಮಸ್ಥಳದ ಕುರಿತು ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ, ನೈತಿಕ ಬೆಂಬಲ ನೀಡಲು ಜೆಡಿಎಸ್ ಕೈಗೊಂಡಿರುವ ಸತ್ಯಯಾತ್ರೆ ಭಾನುವಾರ ಧರ್ಮಸ್ಥಳ ತಲುಪಿತು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಶಾಸಕರು, ಪರಿಷತ್ ಸದಸ್ಯರು ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, "ಚಿಕ್ಕ ವಯಸ್ಸಿನಿಂದಲೂ ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಿದ್ದೇನೆ. ಈ ಬಾರಿ ಧರ್ಮ ಉಳಿಯಬೇಕು ಎಂಬ ಉದ್ದೇಶದಿಂದ ಸತ್ಯ ಯಾತ್ರೆ ಮಾಡಿದ್ದೇವೆ. ನಾವು ರಾಜಕೀಯಕ್ಕಾಗಿ ಈ ಯಾತ್ರೆ ಮಾಡಿಲ್ಲ," ಎಂದು ಹೇಳಿದರು.
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ, ಅಪಪ್ರಚಾರ ನಡೆಯುತ್ತಿದೆ. ಇದನ್ನೆಲ್ಲಾ ನೋಡಿಕೊಂಡು ಇರಲು ಆಗುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಧರ್ಮಾಧಿಕಾರಿಗಳ ಮನಸ್ಸಿಗೆ ನೋವಾಗಿದ್ದರೂ ಅವರು ತೋರಿಸಿಕೊಂಡಿಲ್ಲ. ಭಗವಂತ ಅವರಿಗೆ ಆ ಶಕ್ತಿ ಕೊಟ್ಟಿದ್ದಾನೆ ಎಂದು ಹೇಳಿದರು.
ಎಸ್ಐಟಿ ರಚನೆಯನ್ನು ಪ್ರಶ್ನಿಸಿದ ಅವರು, ತರಾತುರಿಯಲ್ಲಿ ಎಸ್‌ಐಟಿ ಮಾಡಿದ್ದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಕ್ಷೇತ್ರದ ಗೌರವ ಕಳೆಯುವ ಕೆಲಸವನ್ನು ಸರ್ಕಾರವೇ ಮಾಡಿದೆ. ಬುರುಡೆ ತಂದಾಗಲೇ ಅನಾಮಿಕನನ್ನು ತನಿಖೆಗೆ ಒಳಪಡಿಸಬೇಕಿತ್ತು. ಆದರೆ, ಸರ್ಕಾರ ಕೆಲವರ ಮಾತು ಕೇಳಿ ತರಾತುರಿಯಲ್ಲಿ ಎಸ್‌ಐಟಿ ರಚಿಸಿದೆ ಎಂದು ಆರೋಪಿಸಿದರು.
ಸಿಬಿಐ ತನಿಖೆಗೆ ಆಗ್ರಹ
ಕೆಲ ಯೂಟ್ಯೂಬರ್‌ಗಳು ವಿದೇಶಗಳಿಂದ ಹಣ ಪಡೆದು, ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡುತ್ತಿವೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಕರೆ ಮಾಡಿ ಬೆಂಬಲ ಕೋರಿದ್ದಾರೆ. ಷಡ್ಯಂತ್ರ ಎಂಬ ಪದ ನಾವು ಬಳಸಿಲ್ಲ, ಸ್ವತಃ ರಾಜ್ಯ ಸರ್ಕಾರದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ ಎಂದು ತಿಳಿಸಿದರು.