Devanahalli Farmers | ಭೂಸ್ವಾಧೀನ ಕೈಬಿಡುವ ಆಸೆ ಹುಟ್ಟಿಸಿ ರೈತರಿಗೆ ದ್ರೋಹ ಎಸಗಿತೇ ಸರ್ಕಾರ?
ಹೋಬಳಿಯ 13 ಗ್ರಾಮಗಳ 1777 ಎಕರೆ ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರ ಇದೀಗ ವಾಮಮಾರ್ಗದಲ್ಲಿ ರೈತರಿಂದ ಭೂಮಿ ಕಸಿಯುವ ಪ್ರಯತ್ನ ಆರಂಭಿಸಿದೆ.;
ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಕಳೆದ ಮೂರು ವರ್ಷಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ರೈತರಿಗೆ ಸರ್ಕಾರವೇ ದ್ರೋಹ ಬಗೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಹೋಬಳಿಯ 13 ಗ್ರಾಮಗಳ 1777 ಎಕರೆ ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರ ಇದೀಗ ವಾಮಮಾರ್ಗದಲ್ಲಿ ರೈತರಿಂದ ಭೂಮಿ ಕಸಿಯುವ ಪ್ರಯತ್ನ ಆರಂಭಿಸಿದ್ದು ಬಹಿರಂಗಗೊಂಡಿದೆ.
ದೇವನಹಳ್ಳಿ ತಾಲೂಕಿನ ಗೋಕರೆಬಚ್ಚೇನಹಳ್ಳಿ ಹಾಗೂ ಹ್ಯಾಡಾಳ ಗ್ರಾಮದ 439 ಎಕರೆ ಭೂಸ್ವಾಧೀನಕ್ಕೆ ದರ ನಿಗದಿ ಮಾಡುವ ಸಂಬಂಧ ಸೆ.6 ರಂದು ಸಭೆ ಕರೆದಿರುವ ಬಗ್ಗೆ ರೈತರಿಗೆ ನೋಟಿಸ್ ಜಾರಿ ಮಾಡಿದೆ. ಜು.15 ರಂದು ಸಿಎಂ ಸಿದ್ದರಾಮಯ್ಯ ಅವರು ರೈತ ಮುಖಂಡರೊಂದಿಗೆ ಸಭೆ ನಡೆಸಿದ್ದ ವೇಳೆ ಭೂಸ್ವಾಧೀನ ರದ್ದುಪಡಿಸುವ ಘೋಷಣೆ ಮಾಡಿದ್ದರು. ಸರ್ಕಾರದ ನಿರ್ಧಾರದಿಂದ ಹೋಬಳಿಯ ರೈತರು ನಿಟ್ಟುಸಿರು ಬಿಟ್ಟಿದ್ದರು.ಆದರೆ, ಭೂಸ್ವಾಧೀನ ಅಧಿಸೂಚನೆ ರದ್ದುಪಡಿಸಿ ಆದೇಶ ನೀಡುವವರೆಗೂ ಮುಷ್ಕರ ಸ್ಥಗಿತಗೊಳಿಸದಿರಲು ನಿರ್ಧರಿಸಿದ್ದರು.
ಭೂಸ್ವಾಧೀನ ಅಧಿಸೂಚನೆ ರದ್ದು ಮಾಡದೇ ದ್ರೋಹ
ರಾಜ್ಯ ಸರ್ಕಾರ ಗೋಕರೆ ಬಚ್ಚೇನಹಳ್ಳಿ ಹಾಗೂ ಹ್ಯಾಡಾಳ ಗ್ರಾಮದಲ್ಲಿ 2024 ಜೂ.28 ರಂದು ಹೊರಡಿಸಿದ್ದ ಭೂಸ್ವಾಧೀನ ಅಧಿಸೂಚನೆಯಂತೆ ಭೂಮಿಗೆ ದರ ನಿಗದಿ ಮಾಡಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದಿದೆ. ಈ ಬಗ್ಗೆ ಹಲವು ರೈತರಿಗೆ ನೋಟಿಸ್ ನೀಡಿರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಭೂಸ್ವಾಧೀನ ರದ್ದುಪಡಿಸಿದ್ದರೂ ಕೆಐಎಡಿಬಿ ಅಧಿಕಾರಿಗಳು ಯಾವುದೇ ಆದೇಶ ಹೊರಡಿಸದೇ ಮತ್ತೆ ಭೂಸ್ವಾಧೀನಕ್ಕೆ ಮುಂದಾಗಿರುವುದನ್ನು ರೈತರು, ವಿವಿಧ ಸಂಘಟನೆಗಳು ಖಂಡಿಸಿವೆ. ಮುಖ್ಯಮಂತ್ರಿ ಆದೇಶ ಮೀರಿ ದರ ನಿಗದಿ ಸಭೆ ಕರೆದಿರುವುದು ವಿಶ್ವಾಸದ್ರೋಹ ಬಗೆದಂತಾಗಿದೆ. ಸಿಎಂ ಮಾತನ್ನೇ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂದರೆ ಸಿದ್ದರಾಮಯ್ಯ ಅವರು ಹುದ್ದೆಯ ಮೌಲ್ಯ ಕಡಿಮೆಯಾದಂತೆ ತೋರುತ್ತಿದೆ. ಕೈಗಾರಿಕಾ ಸಚಿವರು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಮತ್ತೆ ಹೋರಾಟ ರೂಪಿಸುತ್ತೇವೆ ಎಂದು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡ ಕಾರಹಳ್ಳಿ ಶ್ರೀನಿವಾಸ್ 'ದ ಪೆಡರಲ್ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.
ಭೂಸ್ವಾಧೀನ ಕೈ ಬಿಡುವುದಾಗಿ ಹೇಳಿದ್ದ ಸರ್ಕಾರ ಈಗ ಎರಡು ಹಳ್ಳಿಗಳಲ್ಲಿ 439 ಎಕರೆ ಭೂಮಿಗೆ ದರ ನಿಗದಿ ಮಾಡಲು ಸಭೆ ಕರೆದಿದೆ. ಸಿಎಂ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ 1777 ಎಕರೆ ಭೂಸ್ವಾಧೀನ ಕೈಬಿಡುವುದಾಗಿ ಹೇಳಿತ್ತು. ಗೋಖರೆ ಬಚ್ಚೇನಹಳ್ಳಿ, ಹ್ಯಾಡಾಳದಲ್ಲಿ ಜಮೀನು ಕೊಡಲು ಒಪ್ಪದ ರೈತರಿಗೂ ನೋಟಿಸ್ ನೀಡಲಾಗಿದೆ. ಆ ಮೂಲಕ ಕೈಗಾರಿಕಾ ಸಚಿವರು, ಭೂ ದಲ್ಲಾಳಿಗಳು ಹಾಗೂ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ ಎಂದು ಹ್ಯಾಡಾಳ ಗ್ರಾಮದ ರೈತ ಸುರೇಶ್ 'ದ ಫೆಡರಲ್ ಕರ್ನಾಟಕ'ದ ಬಳಿ ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಕ್ಷೇತ್ರಕ್ಕೆ ಬರೀ ಶಾಸಕರಷ್ಟೇ. ಅದರೆ, ಬಡವರು ಹಾಗೂ ರೈತರ ಸಮಸ್ಯೆ ಕೇಳಲು ಪುರುಸೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಹ್ಯಾಡಾಳ ಗ್ರಾಮದ ಮತ್ತೊಬ್ಬ ರೈತ ಲಘುಮಯ್ಯ ಮಾತನಾಡಿ, ನಮ್ಮದೇ ಜಮಿನಿಗೆ ಬೋಗಸ್ ದಾಖಲೆ ಸೃಷ್ಟಿಸಿ, ನಕಲಿ ಸಹಿ ಮಾಡಿ ನೋಟಿಸ್ ನೀಡಲಾಗಿದೆ. ನಾವು ಹಿಂದಿನಿಂದಲೂ ಜಮೀನು ನೀಡುವುದಿಲ್ಲ ಎಂದು ಹೋರಾಟ ಮಾಡಿದ್ದೇವೆ. ಈಗ ಗ್ರಾಮದ ಕೆಲ ರಾಜಕೀಯ ಮುಖಂಡರು ಹಾಗೂ ದಲ್ಲಾಳಿಗಳು ಸೇರಿ ನಮಗೆ ಗೊತ್ತಿಲ್ಲದೇ ನೋಟಿಸ್ ನೀಡಿದ್ದಾರೆ ಎಂದು ದೂರಿದರು.
ಸಿಎಂ ಹೇಳಿದ್ದೇನು?
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ. ಕೆಲವು ರೈತರು ಜಮೀನು ನೀಡಲು ಸಿದ್ಧರಿರುವುದಾಗಿ ಮುಂದೆ ಬಂದಿದ್ದಾರೆ. ಜಮೀನು ನೀಡಲು ಇಚ್ಚಿಸುವವರಿಗೆ ಸರ್ಕಾರ ಹೆಚ್ಚಿನ ಪರಿಹಾರ ಹಾಗೂ ಅಭಿವೃದ್ಧಿಪಡಿಸಿದ ಭೂಮಿ ನೀಡಲಿದೆ ಎಂದು ಹೇಳಿದ್ದರು.
ಸ್ವ-ಇಚ್ಛೆಯಿಂದ ರೈತರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚುವರಿ ದರ ನೀಡಲಾಗುವುದು. ಕೃಷಿ ಚಟುವಟಿಕೆ ಮುಂದುವರಿಸಲು ಬಯಸುವ ರೈತರು ಬದ್ಧರಾಗಬಹುದು. ಹೊಸ ಕೈಗಾರಿಕೆಗಳ ಆರಂಭಕ್ಕೆ ಜಮೀನಿನ ಅಗತ್ಯವಿದೆ. ಸರ್ಕಾರ ಕೈಗಾರಿಕೆಗಳಿಗೆ ಭೂಮಿ ಒದಗಿಸಬೇಕಾಗಿದೆ ಎಂದು ಹೇಳಿದ್ದರು. ಸರ್ಕಾರ ಜಮೀನುದಾರರು ಸೇರಿದಂತೆ ಎಲ್ಲರ ಅಹವಾಲುಗಳನ್ನು ಆಲಿಸಿದೆ. ಭೂ ಸ್ವಾಧೀನ ಕೈಬಿಟ್ಟರೆ ಕೈಗಾರಿಕೆಗಳು ಬೇರೆ ಕಡೆ ಹೋಗುವ ಸಾಧ್ಯತೆ ಇದೆ. ಆದರೂ,ರೈತರ ಹಿತಾಸಕ್ತಿ ಪರಿಗಣಿಸಿ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ನಿರ್ಧರಿಸಿದೆ ಎಂದು ಹೇಳಿದ್ದರು.
ಕೈಗಾರಿಕಾ ಸಚಿವರಿಗೆ ಅಧಿಸೂಚನೆ ರದ್ದತಿ ಇಷ್ಟವಿಲ್ಲ
ಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸುವ ಕುರಿತು ಸಿಎಂ ಘೋಷಣೆ ಮಾಡಿದ್ದರೂ ಅಧಿಸೂಚನೆ ರದ್ದುಪಡಿಸಲು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಇಷ್ಟವಿಲ್ಲ. ಡಿನೋಟಿಫಿಕೇಶನ್ ಹೊರಡಿಸುವ ಸಂಬಂಧ ತಿಂಗಳಾದರೂ ಸಭೆ ನಡೆಸಿಲ್ಲ. ಅಲ್ಲದೇ ಅಧಿಸೂಚನೆ ರದ್ದುಪಡಿಸುವ ಪ್ರಸ್ತಾವನೆ ಸಿದ್ಧಪಡಿಸಿ ಸಂಪುಟದ ಮುಂದೆ ತರುವುದಕ್ಕೂ ಮನಸ್ಸು ಮಾಡಿಲ್ಲ ಎಂದು ಕೈಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ರೈತ ಮುಖಂಡರಿಗೆ ತಿಳಿಸಿದ್ದಾರೆ.
ಈಗಾಗಲೇ ಹೋಬಳಿಯಲ್ಲಿ ಮೂರು ಬಾರಿ ಭೂಸ್ವಾಧೀನ ಪ್ರಕ್ರಿಯೆ ನಡೆದು, ಸಾವಿರಾರು ಎಕರೆಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದೆ. ಅದೇ ರೀತಿ ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಒಟ್ಟು 13,529 ಎಕರೆ 6 ಗುಂಟೆ ಜಮೀನನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಆ ಭೂಮಿಯಲ್ಲಿ 823 ಘಟಕಗಳಿಗೆ 2,755 ಎಕರೆ 17 ಗುಂಟೆ ಜಮೀನನ್ನು ಹಂಚಿಕೆ ಮಾಡಿದೆ.
ತುರ್ತು ಸಭೆಯ ನೋಟೀಸ್
ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಭೂಸ್ವಾಧೀನವನ್ನು ಸಂಪೂರ್ಣವಾಗಿ ಕೈಬಿಟ್ಟಿರುವ ಬಗ್ಗೆ ಮುಖ್ಯಮಂತ್ರಿ ಘೋಷಣೆ ಮಾಡಿದ ಬಳಿಕವೂ ಕೆಐಎಡಿಬಿ ಅಧಿಕಾರಿಗಳು ಎರಡು ಹಳ್ಳಿಗಳ ರೈತರಿಗೆ ಸೆ. 6 ರಂದು ದರ ನಿಗದಿ ಸಭೆಯ ನೋಟಿಸ್ ಕೊಡುವ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಿದ್ದಾರೆ.
ಈಗಾಗಲೇ ರೈತರು ಖನಿಜ ಭವನದಲ್ಲಿ ಕೈಗಾರಿಕಾ ಇಲಾಖೆಗೆ ಮುತ್ತಿಗೆ ಹಾಕಿ,ನೋಟಿಸ್ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಅಧಿಸೂಚನೆ ರದ್ದು ಮಾಡುವ ಕುರಿತು ಯಾವುದೇ ಆದೇಶ ಬಂದಿಲ್ಲ ಎಂದು ಹೇಳಿರುವುದು ರೈತರನ್ನು ಗಾಬರಿಗೊಳಿಸಿದೆ. ಒಟ್ಟಾರೆ, ರಾಜ್ಯ ಸರ್ಕಾರ ಮಾತು ತಪ್ಪಿರುವುದನ್ನು ಖಂಡಿಸಿ ರೈತರು ಮತ್ತೆ ಬೀದಿಗಿಳಿದು ಹೋರಾಡಲು ತೀರ್ಮಾನಿಸಿರುವುದು ಹೊಸ ತಲೆನೋವು ತಂದಿದೆ.