The Federal Explainer | ಕೋವಿಡ್ ಹಗರಣ: ಸಾವಿನ ದಂಧೆಯ ಕುರಿತು ತನಿಖೆ ಹೇಳಿದ್ದೇನು?
ಕೋವಿಡ್-19 ಅವಧಿಯಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಾದ ಅವ್ಯವಹಾರ ಕುರಿತ ಆರೋಪಗಳ ಬೆನ್ನತ್ತಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹಾಗೂ ಕುನ್ಹಾ ಆಯೋಗ ವರದಿಗಳು ಬ್ರಹ್ಮಾಂಡ ಭ್ರಷ್ಟಾಚಾರವನ್ನು ತೆರೆದಿಟ್ಟಿವೆ.;
ಎಲ್ಲವೂ ಮುಗಿದೇ ಹೋಯಿತು ಎಂಬ ಆತಂಕವನ್ನು ಹುಟ್ಟಿಸಿದ್ದ ಕೋವಿಡ್-19 ಸೋಂಕು ಈಗ ನಿಷ್ಕ್ರಿಯವಾಗಿದ್ದರೂ ಅದರ ರಾಜ್ಯದಲ್ಲಿ ಅದರ ಹೆಸರು ಮತ್ತೆ ಚಾಲ್ತಿಗೆ ಬಂದಿದೆ. ಕೋವಿಡ್ ನಿರ್ವಹಣೆಯ ವೇಳೆ ಅಂದಿನ ಸರ್ಕಾರ ನಡೆಸಿದ ಬ್ರಹ್ಮಾಂಡ ಭ್ರಷ್ಟಾಚಾರದೊಂದಿಗೆ ಥಳಕು ಹಾಕಿಕೊಂಡಿದೆ.
ಕರ್ನಾಟಕದಲ್ಲಿ ವೈದ್ಯಕೀಯ ಉಪಕರಣ ಹಾಗೂ ಔಷಧ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ 2020 ರಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ(ಕೆಆರ್‌ಎಸ್) ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಗುರುತರ ಆರೋಪ ಮಾಡಿದ್ದರು. ಅಂದಿನ ಬಿಜೆಪಿ ಸರ್ಕಾರದ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ವಿರುದ್ಧ ದಾಖಲೆ ಸಮೇತ ಆರೋಪ ಮಾಡಿದ್ದರು.
ಪ್ರತಿಪಕ್ಷಕ್ಕೆ ಅಸ್ತ್ರವಾದ ಆರೋಪ
ಬಿಜೆಪಿ ಸರ್ಕಾರದ ವಿರುದ್ಧ ರವಿಕೃಷ್ಣಾರೆಡ್ಡಿ ಮಾಡಿದ ಆರೋಪಗಳು ಅಂದಿನ ವಿರೋಧ ಪಕ್ಷ ಕಾಂಗ್ರೆಸ್ಸಿಗೆ ಅಸ್ತ್ರವಾಗಿ ಸಿಕ್ಕಿದ್ದವು. ಇದೇ ದಾಖಲೆ ಇಟ್ಟುಕೊಂಡು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಗರಣದ ದಾಳ ಉರುಳಿಸಿದ್ದರು.
ಕೋವಿಡ್-19 ಚಿಕಿತ್ಸಾ ಸಾಮಗ್ರಿ ಖರೀದಿಯಲ್ಲಿ ಬಿಜೆಪಿ ಸರ್ಕಾರ 2200 ಕೋಟಿ ರೂ. ಲೂಟಿ ಹೊಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಸಿದ್ದರಾಮಯ್ಯ ಆರೋಪಗಳಿಗೆ ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಮ್ಮದೇ ಶೈಲಿಯಲ್ಲಿ ತಿರುಗೇಟು ಕೊಟ್ಟಿದ್ದರು. ಕೊನೆಗೆ ವಿರೋಧ ಪಕ್ಷದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಎಚ್.ಕೆ. ಪಾಟೀಲ್ ಹಾಗೂ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಭ್ರಷ್ಟಾಚಾರದ ಆರೋಪಗಳ ಕುರಿತು ಪರಿಶೀಲನೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ರಚಿಸಲಾಯಿತು.
ಪಿಎಸಿ ವರದಿ ಹೇಳುವುದೇನು?
ಕೋವಿಡ್ ಉಪಕರಣಗಳ ಖರೀದಿಯಲ್ಲಿ ನಡೆದ ಅವ್ಯವಹಾರಗಳ ತನಿಖೆ ನಡೆಸಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹಲವು ಅಕ್ರಮಗಳನ್ನು ಗುರುತಿಸಿತ್ತು.
ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯನ್ನು ಅಂದಿನ ಸರ್ಕಾರ 1.20 ಲಕ್ಷದಷ್ಟು ಕಡಿಮೆ ತೋರಿಸಿದೆ. ದುಬಾರಿ ಬೆಲೆಗೆ ವೈದ್ಯಕೀಯ ಉಪಕರಣ ಖರೀದಿಸಿದೆ. ಉಪಕರಣಗಳ ಪೂರೈಕೆಗೆ ಹರಾಜು ಕೂಗಿದ್ದ ಕೆಲ ಕಂಪನಿಗಳು ಉಪಕರಣಗಳನ್ನೇ ಪೂರೈಸಿಲ್ಲ. ಅಗತ್ಯವಿಲ್ಲದ ಔಷಧಗಳನ್ನು ಖರೀದಿಸಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು ಎಚ್.ಕೆ.ಪಾಟೀಲ್ ನೇತೃತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (PAC) ತನ್ನ ವರದಿಯಲ್ಲಿ ಬಹಿರಂಗಪಡಿಸಿತ್ತು.
ರಾಜ್ಯದ ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚು. ಇದಕ್ಕೆ ಕಾರಣ ಸೋಂಕಿತರ ಅಸಮರ್ಪಕ ಪರೀಕ್ಷೆ, ಪರೀಕ್ಷಾ ಸಾಮರ್ಥ್ಯ ಹಾಗೂ ಪರೀಕ್ಷಾ ವರದಿ ನೀಡುವಲ್ಲಿ ವಿಳಂಬ, ಔಷಧ ಮತ್ತು ಆಮ್ಲಜನಕದ ಕೊರತೆ ಕಾರಣ ಎಂದು ಸಮಿತಿ ಹೇಳಿತ್ತು.
2020 ಜನವರಿಯಿಂದ ಜುಲೈವರೆಗೆ 2,69,029 ಮಂದಿ, 2021 ಜನವರಿಯಿಂದ ಜುಲೈವರೆಗೆ 4,26,943 ಸಾವುಗಳು ಸಂಭವಿಸಿವೆ. ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾವಿನ ಸಂಖ್ಯೆ ಕೇವಲ 37,206 ಎಂದು ತಪ್ಪು ಮಾಹಿತಿ ನೀಡಿದೆ. ಆ ಮೂಲಕ ಅಧಿಕಾರಿಗಳು ಘೋರ ಅಪರಾಧ ಎಸಗಿದ್ದಾರೆ. ಅಷ್ಟೂ ಮೃತರ ಕುಟುಂಬಗಳನ್ನು ಗುರುತಿಸಿ ಪರಿಹಾರ ನೀಡಲು ಪ್ರಯತ್ನಿಸಬೇಕು ಎಂಬುದು ಸಮಿತಿ ಶಿಫಾರಸು ಮಾಡಿತ್ತು.
ವಿಶ್ವ ಆರೋಗ್ಯ ಸಂಸ್ಥೆ 2021 ರಲ್ಲಿ ಐವರ್ ಮೆಕ್ಟಿನ್ ಮಾತ್ರೆ ಬಳಸದಂತೆ ಎಚ್ಚರಿಕೆ ನೀಡಿದ್ದರೂ ಆರೋಗ್ಯ ಇಲಾಖೆ 1.10 ಕೋಟಿ ಮಾತ್ರೆಗಳನ್ನು ಖರೀದಿಸಿದೆ. ಖರೀದಿಗೆ ಬಳಸಿದ ಮೊತ್ತ ಮತ್ತು ಮಾತ್ರೆ ವಿತರಣೆ ಬಗ್ಗೆ ಯಾವ ವಿವರವೂ ನೀಡಿಲ್ಲ. ಎಚ್ಚರಿಕೆ ಕಡೆಗಣಿಸಿದ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಿದೆ. ಜನರ ಜೀವದ ಜೊತೆ ಚೆಲ್ಲಾಟವಾಡಿದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಎಂದೂ ವರದಿ ಶಿಫಾರಸು ಮಾಡಿತ್ತು.
ಪಿಎಂ ಕೇರ್ಸ್ ನಿಧಿಯಡಿ ನೀಡಲಾದ ಸುಮಾರು 165 ವೆಂಟಿಲೇಟರ್ಗಳು ಖಾಸಗಿ ಆಸ್ಪತ್ರೆಗಳ ಪಾಲಾಗಿದ್ದವು. ಆದರೆ, ಈ ಖಾಸಗಿ ಆಸ್ಪತ್ರೆಗಳು ವೆಚ್ಚಕ್ಕೆ ಯಾವುದೇ ವಿನಾಯಿತಿ ನೀಡದೆ ರೋಗಿಗಳಿಂದ ಶುಲ್ಕ ವಸೂಲಿ ಮಾಡುತ್ತಿದ್ದವು. ಆರೋಗ್ಯ ಇಲಾಖೆ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾಗಿ ಸಾರ್ವಜನಿಕ ಹಿತಾಸಕ್ತಿ ಕಡೆಗಣಿಸಿದ್ದರು ಎಂದು ಸಮಿತಿ ಆಘಾತಕಾರಿ ಸಂಗತಿಯನ್ನು ಬಯಲುಮಾಡಿತ್ತು.
ಕೋವಿಡ್ ಎರಡನೇ ಅಲೆಯ ವೇಳೆ ವೆಂಟಿಲೇಟರ್, ಆಮ್ಲಜನಕದ ಕೊರತೆ ವಿಪರೀತವಾಗಿತ್ತು. ಪರಿಸ್ಥಿತಿ ಗಂಭೀರವಾಗಿದ್ದರೂ ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರು ಎಂಬುದನ್ನು ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಕ್ಷಿಪ್ರ ಪ್ರತಿಕಾಯ ಪರೀಕ್ಷಾ ಕಿಟ್‌ಗಳು, ರಕ್ತ ಕಣ ಕೌಂಟರ್ಗಳು ಮತ್ತು ಯುಪಿಎಸ್ನಂತಹ ಉಪಕರಣಗಳ ಖರೀದಿಯಲ್ಲಿ ಕೇರಳ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕ ಹೆಚ್ಚಿನ ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಿದೆ. ಖರೀದಿ ಮತ್ತು ಸಂಗ್ರಹಣೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲ, ಕೋವಿಡ್-19 ರೋಗಿಗಳಿಗೆ ಆಪ್ತಮಿತ್ರ ಸಹಾಯವಾಣಿಯನ್ನು ನಡೆಸಲು ಹಾಕಲಾದ ಟೆಂಡರ್ಗಳು ಅನಿಯಮಿತವಾಗಿದ್ದವು ಎಂದು ಸಮಿತಿ ವರದಿಯಲ್ಲಿ ತಿಳಿಸಿತ್ತು. ಏಪ್ರಿಲ್ 2021 ರಲ್ಲಿ ಆರೋಗ್ಯ ಇಲಾಖೆಯು 6.9 ಲಕ್ಷ ಕಿಟ್ಗಳನ್ನು ಪೂರೈಸಲು ಟೆಂಡರ್ ಆಹ್ವಾನಿಸಿತ್ತು. ಸುದರ್ಶನ್ ಫಾರ್ಮಾಗೆ ಕಿಟ್ ಪೂರೈಸಲು ಆದೇಶ ಸಹ ನೀಡಿತ್ತು. ಆದರೆ, ಕಂಪನಿಯು ಆರ್ಡರ್ ಮಾಡಿದ ಕಿಟ್ಗಳಲ್ಲಿ ಶೇ 50 ರಷ್ಟು ಮಾತ್ರ ಪೂರೈಸಿದೆ. ಹಾಗಿದ್ದರೂ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಬದಲು ಇಲಾಖೆಯು ಇತರ ಟೆಂಡರಿನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವ ಅಂಶವನ್ನೂ ಕೂಡ ಪಿಎಸಿ ವರದಿ ಹೇಳಿತ್ತು.
ಅಲ್ಲದೆ, ಕೋವಿಡ್ ವೈದ್ಯಕೀಯ ಉಪಕರಣಗಳನ್ನು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದನ್ನು ತಡೆಯುವಲ್ಲಿ ಇಲಾಖೆ ವಿಫಲವಾಗಿತ್ತು ಎಂಬುದನ್ನು ಬಹಿರಂಗಪಡಿಸಿತ್ತು.
ಕೋವಿಡ್ ಅವ್ಯವಹಾರ ತನಿಖೆಗೆ ಆಯೋಗ ರಚನೆ
ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ಆಧರಿಸಿ ಕೋವಿಡ್ ಅವ್ಯವಹಾರ ಕುರಿತ ತನಿಖೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ಹಾ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಈ ಕುರಿತು ವಿಸ್ತೃತ ತನಿಖೆ ನಡೆಸಿದ ಆಯೋಗ ಒಟ್ಟು ರೂ.3,741.36 ಕೋಟಿ ಮೊತ್ತದ ಖರೀದಿಯಲ್ಲಿ ರೂ.769 ಕೋಟಿಯ ಅವ್ಯವಹಾರ ನಡೆದಿದೆ ಎಂದು ತನ್ನ ಮಧ್ಯಂತರ ವರದಿಯಲ್ಲಿ ಬಹಿರಂಗಪಡಿಸಿದೆ.
ಆಯೋಗದ ಮಧ್ಯಂತರ ವರದಿಯು ಪ್ರತಿ ಹಂತದಲ್ಲೂ ಅಕ್ರಮ, ಅವ್ಯವಹಾರಗಳು ಮತ್ತು ಭ್ರಷ್ಟಾಚಾರ ನಡೆದಿರುವುದನ್ನು ದಾಖಲೆ ಸಮೇತ ನೀಡಿದೆ.
ವೈದ್ಯಕೀಯ ಉಪಕರಣ ಹಾಗೂ ಔಷಧ ಪೂರೈಕೆದಾರರಿಂದಲೇ 500 ಕೋಟಿ ರೂ.ದಂಡ ಮತ್ತು ಹೆಚ್ಚುವರಿ ಪಾವತಿಯನ್ನು ವಸೂಲಿ ಮಾಡುವಂತೆ ಆಯೋಗ ಶಿಫಾರಸು ಮಾಡಿದೆ.
ಆಯೋಗದ ವರದಿ ಹೇಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 1,754.34 ಕೋಟಿ ಮೊತ್ತದ ಖರೀದಿ ನಡೆಸಿದರೆ, ರಾಷ್ಟ್ರೀಯ ಆರೋಗ್ಯ ಮಿಷನ್ 1,406.56 ಕೋಟಿ ರೂ. ಮೊತ್ತರ ಪರಿಕರ ಖರೀದಿಸಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ 918.34 ಕೋಟಿ ರೂ.ಗಳ ಖರೀದಿ ಮೇಲ್ವಿಚಾರಣೆ ನಡೆಸಿದೆ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ ರೂ. 1,394.59 ಕೋಟಿಯ ವೈದ್ಯಕೀಯ ಪರಿಕರ ಮತ್ತು ರೂ. 569.02 ಕೋಟಿ ಮೊತ್ತದ ಔಷಧವನ್ನು ಸ್ವಾದೀನಕ್ಕೆ ಪಡೆದಿತ್ತು. ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಯು ಒಟ್ಟು ರೂ. 264 ಕೋಟಿ ಮೊತ್ತದ ಪರಿಕರ ಪಡೆದಿತ್ತು. ಈ ಎಲ್ಲಾ ವಹಿವಾಟುಗಳಲ್ಲಿ ಅಕ್ರಮ ಕಂಡುಬಂದಿದ್ದು, ಪೂರೈಕೆದಾರರಿಂದ ಹಣ ವಸೂಲಿ ಮಾಡಬೇಕು. ಜೊತೆಗೆ ಇಲಾಖೆ ಅಧಿಕಾರಿಗಳ ವಿರುದ್ಧ ತನಿಖೆ ಕೂಡ ಮಾಡಬೇಕು ಎಂದು ಹೇಳಿದೆ.
ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯ ನ್ಯಾಯ ಸಂಹಿತೆ 2023 ರ ಅಡಿ ಅಗತ್ಯ ಇರುವ ಪ್ರಾಥಮಿಕ ಸಾಕ್ಷ್ಯಗಳಿವೆ. ಹಾಗಾಗಿ ಕಾನೂನು ಕ್ರಮ ಆರಂಭಿಸಬಹುದು ಎಂದು ಆಯೋಗ ರಾಜ್ಯ ಸರ್ಕಾರವನ್ನು ಕೋರಿದೆ.
ಕುನ್ಹಾ ಅವರು 11 ಸಂಪುಟಗಳಲ್ಲಿ ನೀಡಿರುವ ಮಧ್ಯಂತರ ವರದಿಯಲ್ಲಿ 7,223.64 ಕೋಟಿ ರೂಪಾಯಿಗಳ ವೆಚ್ಚವನ್ನು ಪರಿಶೀಲಿಸಿದೆ. ಆದರೆ, ಬಿಬಿಎಂಪಿಯ ನಾಲ್ಕು ವಲಯಗಳು ಮತ್ತು ರಾಜ್ಯದ 31 ಜಿಲ್ಲೆಗಳಿಂದ ಆಯೋಗವು ವರದಿಗಳನ್ನು ಕೇಳಿದೆ. ಇವುಗಳ ಪರಿಶೀಲನೆ ಬಾಕಿಯಿದೆ. ಮುಂದಿನ ಆರು ತಿಂಗಳಲ್ಲಿ ಪೂರ್ಣ ವರದಿ ಕೈ ಸೇರುವ ನಿರೀಕ್ಷೆ ಇದೆ. 1000 ಪುಟಗಳ ಮಧ್ಯಂತರ ವರದಿಯನ್ನು ಅಧಿಕಾರಿಗಳು ವಿಶ್ಲೇಷಿಸಿ 1 ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ
ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ಹಾ ವರದಿಯ ಕುರಿತು ಮುಂದಿನ ಕ್ರಮ ಜರುಗಿಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ಹಾಗೂ ಅದರ ಮೇಲ್ವಿಚಾರಣೆಗೆ ಸಚಿವ ಸಂಪುಟ ಉಪಸಮಿತಿ ರಚಿಸಿದೆ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣ ಕೇಳಿಬಂದಿರುವಾಗಲೇ ಕೋವಿಡ್ ಅವ್ಯವಹಾರದ ಕುನ್ಹಾ ಆಯೋಗದ ವರದಿ ಬಹಿರಂಗ ಹಾಗೂ ಎಸ್ಐಟಿ ನೇಮಕ ಮಾಡಿರುವ ಸರ್ಕಾರದ ಕ್ರಮವನ್ನು ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಟೀಕಿಸಿವೆ.
ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು, ಮಹತ್ವದ ವರದಿ ಬಂದಾಗಲೆಲ್ಲಾ ಸೇಡಿನ ಕ್ರಮ ಎಂದು ಕರೆಯುವ ವಾಡಿಕೆ ದುರದೃಷ್ಟಕರ ಎಂದು ಹೇಳಿದ್ದಾರೆ. ಮುಡಾ ಪ್ರಕರಣ ಎರಡು ತಿಂಗಳ ಹಿಂದಿನದ್ದು. ಆದರೆ, ಕುನ್ಹಾ ಆಯೋಗ ಒಂದು ವರ್ಷದ ಹಿಂದೆ ನೇಮಿಸಿದ್ದು ಎಂದು ಹೇಳಿದ್ದಾರೆ.
ಹಿರಿಯ ಅಧಿಕಾರಿ ಅಮಾನತು
ಪಿಪಿಇ ಕಿಟ್ ಮತ್ತು ಇತರ ಕೋವಿಡ್ ಸಂಬಂಧಿತ ಉಪಕರಣಗಳ ಖರೀದಿಯಲ್ಲಿ ನಡೆದ ಅಕ್ರಮಗಳ ಆರೋಪದ ಮೇಲೆ ಕಿದ್ವಾಯಿ ಸ್ಮಾರಕ ಆಂಕೋಲಜಿ ಸಂಸ್ಥೆಯ ಆರ್ಥಿಕ ಸಲಹೆಗಾರ ಜಿ.ಪಿ.ರಘು ಎಂಬುವರನ್ನು ಕಳೆದ ವಾರ ರಾಜ್ಯ ಸರ್ಕಾರ ಅಮಾನತು ಮಾಡಿದೆ. ಜಿ.ಪಿ.ರಘು ಅವರು ಕೋವಿಡ್ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಆರ್ಥಿಕ ಸಲಹೆಗಾರರಾಗಿದ್ದರು.
ಕರ್ನಾಟಕ ಪಾರದರ್ಶಕತೆ ಕಾಯ್ದೆಯಡಿ ಕಡ್ಡಾಯಗೊಳಿಸಿದ್ದ ಮಾನದಂಡಗಳನ್ನು ರಘು ಅವರು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಎಸ್ಐಟಿ ಮೇಲ್ವಿಚಾರಣೆಗೆ ಸಂಪುಟ ಉಪಸಮಿತಿ ರಚನೆ
ಕೋವಿಡ್ ಅವ್ಯವಹಾರದ ಕುರಿತು ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದ್ದು, ಅದರ ಮೇಲ್ವಿಚಾರಣೆ ಮಾಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಿ ಸರ್ಕಾರ ಆದೇಶಿಸಿದೆ. ಸಮಿತಿ ಸದಸ್ಯರಾಗಿ ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಸಂತೋಷ್ ಎನ್.ಲಾಡ್ ಹಾಗೂ ಶರಣ ಪ್ರಕಾಶ ಪಾಟೀಲ ಇದ್ದಾರೆ. ತನಿಖಾ ತಂಡ ಇನ್ನಷ್ಟೇ ಅವ್ಯವಹಾರ ನಡೆಸಿರುವವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದೆ. ಕುನ್ಹಾ ಆಯೋಗದ ಅಂತಿಮ ವರದಿ ಬಂದ ನಂತರ ಆರೋಪಿತರ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಶತ ಸಿದ್ಧ ಎಂಬುದು ಸಚಿವ ಎಚ್.ಕೆ.ಪಾಟೀಲ್ ಅವರ ಖಡಕ್ ನುಡಿ.