ಬೆಂಗಳೂರು 7.11 ಕೋಟಿ ದರೋಡೆ ಪ್ರಕರಣ: 8 ಮಂದಿ ಬಂಧನ, 5.5 ಕೋಟಿ ರೂ. ರಿಕವರಿ
ತನಿಖಾ ತಂಡಗಳು ಆಂಧ್ರಪ್ರದೇಶ ಹಾಗೂ ತಮಿಳುನಾಡು ಎರಡೂ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಚೆನ್ನೈನಿಂದಲೂ ಓರ್ವನನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.
ಸಿಎಂಎಸ್ ವಾಹನ
ರಾಜ್ಯ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದಿದ್ದ ಭಾರೀ ಕುತೂಹಲ ಕೆರಳಿಸಿದ್ದ 7 ಕೋಟಿ 11 ಲಕ್ಷ ರೂಪಾಯಿ ನಗದು ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ಸು ಕಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್‌ಟೇಬಲ್ ಸೇರಿದಂತೆ ಒಟ್ಟು ಎಂಟು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಬರೋಬ್ಬರಿ 5.5 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.
ಈ ಹೈಟೆಕ್ ದರೋಡೆಯ ಸಂಚಿನ ಹಿಂದೆ ಇಲಾಖೆಯವರೇ ಮತ್ತು ಹಣ ಸಾಗಾಟ ಸಂಸ್ಥೆಯ ಸಿಬ್ಬಂದಿಯೇ ಶಾಮೀಲಾಗಿರುವುದು ತನಿಖೆಯ ವೇಳೆ ಬಹಿರಂಗವಾಗಿದೆ. ಪ್ರಕರಣದ ಪ್ರಮುಖ ಸೂತ್ರಧಾರಿ ಎನ್ನಲಾದ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್, ಸಿಎಂಎಸ್ (CMS) ಸಂಸ್ಥೆಯ ಮಾಜಿ ನೌಕರ ಝೇವಿಯರ್, ಪ್ರಸ್ತುತ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಸಿಬ್ಬಂದಿ ಹಾಗೂ ಕೃತ್ಯಕ್ಕೆ ಕಾರು ಒದಗಿಸಿದ ಕಲ್ಯಾಣ ನಗರದ ಇಬ್ಬರು ಮಾಲೀಕರು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಸದ್ಯ ಪ್ರಮುಖ ಆರೋಪಿಗಳಾದ ಅಣ್ಣಪ್ಪ ಮತ್ತು ಝೇವಿಯರ್ ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳಲ್ಲಿದ್ದು, ಪೊಲೀಸರು ಅವರಿಂದ ದರೋಡೆಯ ಸಂಪೂರ್ಣ ವಿವರಗಳನ್ನು ಕಲೆಹಾಕುತ್ತಿದ್ದಾರೆ.
ಉಳಿದ ಹಣಕ್ಕಾಗಿ ಚೆನ್ನೈ, ಆಂಧ್ರದಲ್ಲಿ ತೀವ್ರ ಶೋಧ
ವಶಪಡಿಸಿಕೊಂಡಿರುವ 5.5 ಕೋಟಿ ರೂ.ಗಳನ್ನು ಹೊರತುಪಡಿಸಿ, ಇನ್ನುಳಿದ ಸುಮಾರು ಒಂದೂವರೆ ಕೋಟಿ ರೂಪಾಯಿ ಹಣಕ್ಕಾಗಿ ಪೊಲೀಸರು ತೀವ್ರ ಶೋಧ ಮುಂದುವರಿಸಿದ್ದಾರೆ. ಉಳಿದ ಹಣವನ್ನು ಆರೋಪಿಗಳು ತಮಿಳುನಾಡಿನ ಚೆನ್ನೈ ಕಡೆಗೆ ಸಾಗಿಸಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಈ ಸುಳಿವು ಆಧರಿಸಿ ವಿಶೇಷ ತನಿಖಾ ತಂಡಗಳು ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸುತ್ತಿವೆ. ಚೆನ್ನೈನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ತಂಡವು ಈಗಾಗಲೇ ಓರ್ವ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.
ಚಿತ್ತೂರಿನಲ್ಲಿ ಪತ್ತೆಯಾದ ಕಾರು ಮತ್ತು ನಕಲಿ ನಂಬರ್ ಪ್ಲೇಟ್ ತಂತ್ರ
ದರೋಡೆಗೆ ಬಳಸಲಾದ ವಾಹನದ ಜಾಡು ಹಿಡಿದು ಹೊರಟ ಪೊಲೀಸರಿಗೆ ಆಂಧ್ರಪ್ರದೇಶದ ಚಿತ್ತೂರು ಬಳಿ ಇನೋವಾ ಕಾರೊಂದು ಪತ್ತೆಯಾಗಿದ್ದು, ತನಿಖೆಗೆ ಮಹತ್ವದ ತಿರುವು ನೀಡಿದೆ. ದರೋಡೆ ನಡೆದ ದಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಕಾರಿಗೆ 'ಗವರ್ನಮೆಂಟ್ ಆಫ್ ಇಂಡಿಯಾ' ಎಂಬ ಸ್ಟಿಕ್ಕರ್ ಮತ್ತು ಕರ್ನಾಟಕ ನೋಂದಣಿ ಸಂಖ್ಯೆಯ ಬೋರ್ಡ್ ಇತ್ತು. ಆದರೆ, ಚಿತ್ತೂರಿನಲ್ಲಿ ಪತ್ತೆಯಾದ ಕಾರಿಗೆ ಉತ್ತರ ಪ್ರದೇಶ (ಯುಪಿ) ನೋಂದಣಿಯ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಇದು ಪೊಲೀಸರನ್ನು ದಾರಿ ತಪ್ಪಿಸಲು ಆರೋಪಿಗಳು ನಡೆಸಿದ ತಂತ್ರಗಾರಿಕೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಕಾರಿನ ಹಿಂಭಾಗದಲ್ಲಿದ್ದ ಸರ್ಕಾರಿ ಸ್ಟಿಕ್ಕರ್ ಅನ್ನು ಕಿತ್ತು ಎಸೆದಿರುವ ಕುರುಹುಗಳು ಸ್ಪಷ್ಟವಾಗಿ ಗೋಚರಿಸಿವೆ.
ಚಿತ್ತೂರಿನ ಗುಡಿಪಾಲ ಬಳಿ ಪತ್ತೆಯಾದ ಈ ಕಾರನ್ನು ವಿಧಿವಿಜ್ಞಾನ ಪ್ರಯೋಗಾಲಯ (FSL) ಮತ್ತು ಬೆರಳಚ್ಚು ತಜ್ಞರ ತಂಡ ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಕಾರಿನಲ್ಲಿ ಎಷ್ಟು ಜನರು ಪ್ರಯಾಣಿಸಿದ್ದರು ಮತ್ತು ಯಾರ ಬೆರಳಚ್ಚುಗಳು ಲಭ್ಯವಾಗಲಿವೆ ಎಂಬುದು ಆರೋಪಿಗಳ ಪತ್ತೆಗೆ ನಿರ್ಣಾಯಕವಾಗಲಿದೆ. ದರೋಡೆಕೋರರು ಇದೇ ಕಾರನ್ನು ಬಳಸಿದ್ದರೇ ಅಥವಾ ಪೊಲೀಸರ ಗಮನ ಬೇರೆಡೆ ಸೆಳೆಯಲು ಈ ಕಾರನ್ನು ಇಲ್ಲಿ ಅನಾಥವಾಗಿ ಬಿಟ್ಟು, ಹಣದೊಂದಿಗೆ ಬೇರೆ ವಾಹನದಲ್ಲಿ ಪರಾರಿಯಾಗಿದ್ದಾರೆಯೇ ಎಂಬ ಕೋನದಲ್ಲಿಯೂ ತನಿಖೆ ಚುರುಕುಗೊಂಡಿದೆ. ಒಟ್ಟಿನಲ್ಲಿ ದರೋಡೆಕೋರರ ಪ್ಲಾನ್ ಎಷ್ಟೇ ಪಕ್ಕಾ ಆಗಿದ್ದರೂ, ಖಾಕಿ ಪಡೆಯ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ಸಾಬೀತಾಗಿದೆ.