ಜಿಎಸ್‌ಟಿ ಸುಧಾರಣೆ: ಜನತೆಗೆ ದಸರಾ ಗಿಫ್ಟ್ : ತೆರಿಗೆ ಇಳಿಕೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ
GST ರಿಯಾಯಿತಿ ʻದ ಫೆಡರಲ್ ಕರ್ನಾಟಕʼ ಈ ಬಗ್ಗೆ ಜನಸಾಮಾನ್ಯರಲ್ಲಿ ಅಭಿಪ್ರಾಯ ಕೇಳಿದಾಗ ಈ ಬಗ್ಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಎಲ್ಲಾರು ಕೇಂದ್ರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.;
ದ ಫೆಡರಲ್ ಕರ್ನಾಟಕದ ವಿಶೇಷ ಸುದ್ದಿ
ದೇಶದ ಜನಸಾಮಾನ್ಯರಿಗೆ ದಸರಾ ಹಬ್ಬದ ಭರ್ಜರಿ ಕೊಡುಗೆ ಎಂಬಂತೆ, ಕೇಂದ್ರ ಸರ್ಕಾರವು ಜಿಎಸ್‌ಟಿ ವ್ಯವಸ್ಥೆಯಲ್ಲಿ ಐತಿಹಾಸಿಕ ಸುಧಾರಣೆಗಳನ್ನು ಘೋಷಿಸಿದೆ. ಬುಧವಾರ ದೆಹಲಿಯಲ್ಲಿ ನಡೆದ 56ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ, ಪ್ರಸ್ತುತ ಇರುವ ನಾಲ್ಕು ಹಂತದ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಿ, ಕೇವಲ 5% ಮತ್ತು 18% ಎಂಬ ಎರಡು ಸ್ಲ್ಯಾಬ್‌ಗಳಿಗೆ ಇಳಿಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಈ ಮಹತ್ವದ ಬದಲಾವಣೆಯು ಸೆಪ್ಟೆಂಬರ್ 22 ರಿಂದ ದೇಶಾದ್ಯಂತ ಜಾರಿಗೆ ಬರಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 12% ಮತ್ತು 28% ತೆರಿಗೆ ಸ್ಲ್ಯಾಬ್‌ಗಳನ್ನು ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು. ಇದರಿಂದಾಗಿ, ದೈನಂದಿನ ಬಳಕೆಯ ಬಹುತೇಕ ವಸ್ತುಗಳು ಮತ್ತು ಸೇವೆಗಳು ಕಡಿಮೆ ತೆರಿಗೆ ವ್ಯಾಪ್ತಿಗೆ ಬರಲಿವೆ. ಆದರೆ, ಐಷಾರಾಮಿ ಮತ್ತು ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳ ಮೇಲೆ ಶೇ. 40ರಷ್ಟು ವಿಶೇಷ ತೆರಿಗೆಯನ್ನು ವಿಧಿಸಲಾಗಿದೆ.
ಜನಸಾಮಾನ್ಯರ ಪ್ರತಿಕ್ರಿಯೆ: ಸರ್ಕಾರದ ನಿರ್ಧಾರಕ್ಕೆ ಭರಪೂರ ಸ್ವಾಗತ
ಕೇಂದ್ರದ ಈ ನಿರ್ಧಾರಕ್ಕೆ ಬೆಂಗಳೂರಿನ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 'ದ ಫೆಡರಲ್ ಕರ್ನಾಟಕ' ನಡೆಸಿದ ಜನಾಭಿಪ್ರಾಯ ಸಂಗ್ರಹದಲ್ಲಿ ಎಲ್ಲರೂ ಸರ್ಕಾರದ ಈ ಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ವಿಮಾ ಕ್ಷೇತ್ರಕ್ಕೆ ಬೂಸ್ಟ್
"ಜೀವ ವಿಮಾ ಪ್ರೀಮಿಯಂ ಮೇಲೆ ಜಿಎಸ್‌ಟಿ ಬೇಡ ಎಂಬುದು ನಮ್ಮ ಬಹಳ ದಿನಗಳ ಬೇಡಿಕೆಯಾಗಿತ್ತು. ಅದು ಈಗ ಈಡೇರಿದೆ. ಪ್ರೀಮಿಯಂ ಪಾವತಿಸುವಾಗ ಜಿಎಸ್‌ಟಿ ಹೊರೆಯಾಗುತ್ತಿತ್ತು. ಅದನ್ನು ತೆಗೆದುಹಾಕಿರುವುದು ತುಂಬಾ ಸಂತೋಷ ತಂದಿದೆ. ಇದು ಹೆಚ್ಚು ಜನರು ವಿಮೆ ಮಾಡಲು ಪ್ರೇರೇಪಿಸುತ್ತದೆ" ಎಂದು ಎಲ್‌ಐಸಿ ಉದ್ಯೋಗಿ ರಮೇಶ್ ಬಾಬು ಹರ್ಷ ವ್ಯಕ್ತಪಡಿಸಿದ್ದಾರೆ.
ಇದೇ ಅಭಿಪ್ರಾಯವನ್ನು ಹಂಚಿಕೊಂಡ ಮತ್ತೊಬ್ಬ ಎಲ್‌ಐಸಿ ಉದ್ಯೋಗಿ ಪವನ್ ಬಾಬು"ಕಳೆದ 5-6 ವರ್ಷಗಳಿಂದ ಜಿಎಸ್‌ಟಿ ಬಡವರ ಮೇಲೆ ತೀವ್ರ ಪರಿಣಾಮ ಬೀರಿತ್ತು. ಈಗ ಸರ್ಕಾರವು ವಿಮೆಯ ಮೇಲಿನ ತೆರಿಗೆಯನ್ನು ಶೂನ್ಯಗೊಳಿಸಿರುವುದು ಅತ್ಯುತ್ತಮ ಹೆಜ್ಜೆ. ಈ ಮಹಾನ್ ನಿರ್ಧಾರಕ್ಕಾಗಿ ಪ್ರಧಾನಿ, ರಾಷ್ಟ್ರಪತಿ, ಮತ್ತು ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ನಮ್ಮ ಧನ್ಯವಾದಗಳು" ಎಂದಿದ್ದಾರೆ.
ಔಷಧ ಮತ್ತು ಶಿಕ್ಷಣಕ್ಕೂ ರಿಲೀಫ್
"ಔಷಧಗಳ ಮೇಲಿನ ತೆರಿಗೆ ವಿನಾಯಿತಿ, ವಿಶೇಷವಾಗಿ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಸಂಪೂರ್ಣ ತೆರಿಗೆ ರದ್ದು ಮಾಡಿರುವುದು ಮಧ್ಯಮ ವರ್ಗದ ಜನರಿಗೆ ದೊಡ್ಡ ಆಸರೆ . ಕೇಂದ್ರದ ಈ ನಿರ್ಧಾರ ಸ್ವಾಗತಾರ್ಹ," ಎಂದು ಐಟಿ ಉದ್ಯೋಗಿ ಸಂಜು ಹೇಳಿದರು.
ಶಿಕ್ಷಣ ಪರಿಕರಗಳ ಮೇಲಿನ ಜಿಎಸ್‌ಟಿ ಇಳಿಕೆಯನ್ನು ಸ್ವಾಗತಿಸಿದ ಪೋಷಕರಾದ ಖುಷ್ಬೂ, "ಎಲ್ಲಾ ಸರಕುಗಳಿಗೂ ನಾವು ತೆರಿಗೆ ಕಟ್ಟುತ್ತಿದ್ದೆವು. ಈಗ ಮಕ್ಕಳ ಶೈಕ್ಷಣಿಕ ವಸ್ತುಗಳ ಮೇಲಿನ ಹೊರೆ ಕಡಿಮೆಯಾಗಿರುವುದು ಖುಷಿಯ ವಿಚಾರ," ಎಂದರು.
ಹತ್ತು ವರ್ಷಗಳ ಬಳಿಕ ಸಿಕ್ಕ ಸಂತಸ
"ಜಿಎಸ್‌ಟಿ ಬಂದಾಗ ನಾವು ವಿರೋಧಿಸಿದ್ದೆವು. ಸುಮಾರು ಹತ್ತು ವರ್ಷಗಳ ಬಳಿಕವಾದರೂ ಸರ್ಕಾರ ನಮ್ಮ ಕಷ್ಟ ಅರಿತು ತೆರಿಗೆ ಇಳಿಕೆ ಮಾಡಿರುವುದು ತುಂಬಾ ಸಂತಸ ತಂದಿದೆ," ಎಂದು ಹೋಟೆಲ್ ಮಾಲೀಕ ಫಣಿರಾಜ್ ನಾಯ್ಕ್ ತಮ್ಮ ಸಂತಸವನ್ನು ಹಂಚಿಕೊಂಡರು.