ಪೌರಕಾರ್ಮಿಕರ ಮೇಲೆ ಹಲ್ಲೆ | ಕಠಿಣ ಕ್ರಮಕ್ಕೆ ಆಗ್ರಹಿಸಿ ಪೌರಕಾರ್ಮಿಕರ ಸಂಘ ಪ್ರತಿಭಟನೆ

ಹಿಂಸಾಚಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಬಿಬಿಎಂಪಿ ಪೌರಕಾರ್ಮಿಕರ ಸಂಘವು ಬಿಬಿಎಂಪಿ ಕೇಂದ್ರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿತು

Update: 2024-09-18 11:25 GMT
ಪೌರ ಕಾರ್ಮಿಕರು ತಮಗೆ ನ್ಯಾಯ ಒದಗಿಸುವಂತೆ ಪ್ರತಿಭಟನೆ ನಡೆಸಿದರು.
Click the Play button to listen to article

ಮಹಿಳಾ ಪೌರಕಾರ್ಮಿಕರ ಮೇಲೆ ಭೀಕರವಾಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ಹಾಗೂ SC/ST ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದ್ದರೂ ಆರೋಪಿಗಳನ್ನು ಇದುವರೆಗೂ ಬಂಧಿಸಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಬಿಬಿಎಂಪಿ ಪೌರಕಾರ್ಮಿಕರ ಸಂಘಟನೆ ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯ ಎದುರು ಪ್ರತಿಭಟನೆ ನಡೆಸಿತು. 

ಬಿಬಿಎಂಪಿಯ 72ನೇ ವಾರ್ಡ್ ಕೆಲಸ ಮಾಡುತ್ತಿದ್ದ ಆರು ಜನ ಮಹಿಳಾ ಪೌರಕಾಮಿಕರ ಮೇಲೆ ಭೀಕರವಾಗಿ ಹಲ್ಲೆ ಮಾಡಿ, ಜಾತಿ ನಿಂದನೆ ಎಸಗಲಾಗಿದೆ. ಸ್ಥಳೀಯ ನಿವಾಸಿಯಾದ ಚಂದ್ರು ಮತ್ತು ಅವರ ತಾಯಿಯವರು ಪೌರಕಾರ್ಮಿಕರ ಜಾತಿಯನ್ನು ಆಧರಿಸಿ ನಿಂದಿಸಿದ್ದಾರೆ. ಈ ದೌರ್ಜನ್ಯದ ಘಟನೆಯನ್ನು ಫೋನಿನಲ್ಲಿ ರೆಕಾರ್ಡ್ ಮಾಡುತ್ತಿದ್ದ ಮತ್ತೊಬ್ಬಳು ಪೌರಕಾರ್ಮಿಕರ ಮೇಲೆ ದೈಹಿಕ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಫೋನನ್ನು ಒಡೆದುಹಾಕಿ, ಇತರೆ ಪೌರಕಾರ್ಮಿಕರನ್ನೂ ಹೊಡೆದು ಗಾಯಗೊಳಿಸಿದ್ದಾರೆ. ಆ ಬಗ್ಗೆ ಪೌರಕಾರ್ಮಿಕರು SC/ST ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದ್ದರೂ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ ಎಂದು ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷರಾದ ಕಾಮ್ರೇಡ್ ನಿರ್ಮಲಾ ಮಾತನಾಡುತ್ತಾ, "ಪೌರಕಾರ್ಮಿಕರ ಕೆಲಸದ ಪರಿಸ್ಥಿತಿಯನ್ನು ಈ ಘಟನೆಯು ಎತ್ತಿತೋರಿಸುತ್ತದೆ. ಅವರ ಜಾತಿ, ಲಿಂಗ ಮತ್ತು ವರ್ಗದ ಮೇರೆಗೆ ಅವರುಗಳು ದಿನನಿತ್ಯ ಮುಪ್ಪಟ್ಟು ಶೋಷಣೆಯನ್ನು ಅನುಭವಿಸುತ್ತಾರೆ. ಸಾರ್ವಜನಿಕ ಅರೋಗ್ಯ ಸೇವೆಯಲ್ಲಿ ಅವರು ಅಗತ್ಯ ಸೇವೆ ಒದಗಿಸುತ್ತಿದ್ದರೂ ಸಹ, ತಾರತಮ್ಯ ಮತ್ತು ಹಿಂಸೆ ಇವರಿಗೆ ಮೀರಿದ್ದಲ್ಲ. ಇದನ್ನು ತುರ್ತಾಗಿ ಸರಿಪಡಿಸುವ ಅವಕ್ಷ್ಯಕತೆ ಇದೆ," ಎಂದು ಹೇಳಿದರು.

ಈ ಘಟನೆಯಲ್ಲಿ ನೊಂದ ಪೌರಕಾರ್ಮಿಕರಾದ ಲಕ್ಷ್ಮಿ ಅವರು ತಮ್ಮ ಘನತೆಯನ್ನು ಕುಂದುಂಟಾಗಿದೆ ಹಾಗೂ ಅಧಿಕಾರಿಗಳು ಯಾವುದೇ ರೀತಿಯ ಜವಾಬ್ದಾರಿಯನ್ನು ವಹಿಸಿರುವುದಿಲ್ಲ ಎಂದು ಹೇಳಿದರು. ಸಾರ್ವಜನಿಕವಾಗಿ ನನ್ನ ಘನತೆಗೆ ಧಕ್ಕೆಯನ್ನುಂಟು ಮಾಡಲಾಗಿದೆ. ಹೀಗಿದ್ದರೂ ಸಹ ಅಧಿಕಾರಿಗಳು ಯಾವುದೇ ರೀತಿ ಕ್ರಮ ಜರುಗಿಸದೆ  ನಮ್ಮಂತಹ ಕಾರ್ಮಿಕರ ಕುರಿತು ನಿರ್ಲಕ್ಷ್ಯೆಯನ್ನು ತೋರಿಸುತ್ತಿದ್ದಾರೆ ಎಂದು ಹೇಳಿದರು.

ಪೌರಕಾರ್ಮಿಕರು ದಿನನಿತ್ಯ ಅನುಭವಿಸುವ ಜಾತಿ ದೌರ್ಜನ್ಯದ ಕುರಿತು ಕಾಮ್ರೇಡ್ ರಂಗಮ್ಮ ಅವರು ಮಾತನಾಡಿ, "ಇದೊಂದೇ ಘಟನೆಯಲ್ಲ. ನಾವು ದಿನನಿತ್ಯ ಅಸ್ಪೃಶ್ಯತೆಯನ್ನು ಅನುಭವಿಸುತ್ತೇವೆ. ಮನೆಗಳ ಗೇಟ್ ಗಳನ್ನು ನಾವು ಮುಟ್ಟಬಾರದು, ನಾವು ಕುಡಿಯಲು ನೀರು ಕೇಳಿದಾಗ ಬಾತ್ರೂಮ್ ಚೊಂಬಿನಲ್ಲಿ ನೀರು ಕೊಡುತ್ತಾರೆ. ಈ ರೀತಿಯಲ್ಲಿ ನಾವು ತಾರತಮ್ಯ ಅನುಭವಿಸುತ್ತೇವೆʼʼ ಎಂದು ಹೇಳಿದರು. 

ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (AICCTU) ರಾಜ್ಯ ಕಾರ್ಯದರ್ಶಿಯಾದ ಕಾಮ್ರೇಡ್ ಅಪ್ಪಣ್ಣ ಅವರು ಬಿಬಿಎಂಪಿಯಲ್ಲಿ ಕೆಲಸ ಮಾಡುವ ದಲಿತ ಕಾರ್ಮಿಕರು ಅನುಭವಿಸುವ ವ್ಯವಸ್ಥಿತ ಶೋಷಣೆಯನ್ನು ಖಂಡಿಸಿ, "ಈ ಘಟನೆಯು ಬಿಬಿಎಂಪಿಯಲ್ಲಿರುವ ಆಳವಾದ ಮತ್ತು ವ್ಯವಸ್ಥಿತವಾದ ಸಮಸ್ಯೆಯನ್ನು ಎತ್ತಿತೋರಿಸುತ್ತದೆ. ದಲಿತ ಪೌರಕಾರ್ಮಿಕರ, ಅದರಲ್ಲೂ ಮಹಿಳಾ ಕಾರ್ಮಿಕರ ಶೋಷಣೆ ವಾತಾವರಣ ಮತ್ತು ಕೆಲಸದಿಂದ ವಜಾಗೊಳಿಸುವ ವ್ಯವಸ್ಥೆಯನ್ನು ತೋರಿಸುತ್ತದೆ. ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಈ ಕೂಡಲೇ ಎಲ್ಲಾ ಪೌರಕಾರ್ಮಿಕರಿಗೆ ನ್ಯಾಯಯುತ ಮತ್ತು ಘನತೆಯುಕ್ತ ಕೆಲಸದ ವಾತಾವರಣವನ್ನು ರೂಪಿಸಬೇಕು," ಎಂದು ಹೇಳಿದರು.

ಪೌರಕಾರ್ಮಿಕರ ಆಗ್ರಹಗಳೇನು? 

1. ಬ್ಯಾಡರಹಳ್ಳಿ ಪೊಲೀಸರು ಶೀಘ್ರ ಕ್ರಮ ಕೈಗೊಂಡು ಆರೋಪಿಗಳನ್ನು ತಡಮಾಡದೆ ಬಂಧಿಸಬೇಕು.

2. ಅನ್ಯಾಯವಾಗಿ ಹಲ್ಲೆ ಹಾಗೂ ದೌರ್ಜನ್ಯಕ್ಕೆ ಒಳಗಾದ ಪೌರಕಾರ್ಮಿಕರಿಗೆ ತಲಾ 10 ಲಕ್ಷ ಪರಿಹಾರ ದೊರಕಿಸಿಕೊಡಬೇಕು.

3. ಪೌರಕಾರ್ಮಿಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಅವರ ಸುರಕ್ಷತೆ ಮತ್ತು ಘನತೆಯನ್ನು ಖಾತ್ರಿಪಡಿಸುವುದಕ್ಕಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕು

4. ಸಾರ್ವಜನಿಕರಿಂದ ಇಂತಹ ಹಿಂಸಾತ್ಮಕ ದಾಳಿಗಳು ಮತ್ತು ಕಿರುಕುಳದಿಂದ ಪೌರ ಕಾರ್ಮಿಕರನ್ನು ರಕ್ಷಿಸುವುದು ಬಿಬಿಎಪಿಯ ಆದ್ಯ ಕರ್ತವ್ಯವಾಗಬೇಕು.

5. ಈ ಘಟನೆಯ ಬಗ್ಗೆ ಚರ್ಚಿಸಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ರೂಪಿಸಲು ಸಂಘಟನೆಯೊಂದಿಗೆ ಬಿಬಿಎಂಪಿ  ತುರ್ತು ಸಭೆ ಕರೆಯಬೇಕು

6. ಬಿಬಿಎಂಪಿ ಮತ್ತು ಸರ್ಕಾರ ಈ ಘಟನೆಯ ಗಂಭೀರತೆಯನ್ನು ಪರಿಗಣಿಸಬೇಕು ಮತ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯದ ಅತ್ಯಗತ್ಯ ಭಾಗವಾಗಿರುವ ಪೌರಕಾರ್ಮಿಕರನ್ನು ರಕ್ಷಿಸಲು ತ್ವರಿತವಾಗಿ ಕಾರ್ಯನಿರ್ವಹಿಸಬೇಕು

Tags:    

Similar News