Techie suicide |ಬೆಂಗಳೂರಿನಲ್ಲಿ ಎಐ ಎಂಜಿನಿಯರ್ ನಿಖಿಲ್ ಸೋಮವಂಶಿ ದುರಂತ ಸಾವು: ಕೆಲಸದ ಒತ್ತಡ ಮತ್ತು ಕಿರುಕುಳದ ಆರೋಪ

ವಿಷಕಾರಿ ಕೆಲಸದ ಸಂಸ್ಕೃತಿ ಹಾಗೂ ಅಮೆರಿಕ ಮೂಲದ ವ್ಯವಸ್ಥಾಪಕರ ಕಿರುಕುಳದಿಂದ ನಿಖಿಲ್ ಸೋಮವಂಶಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕ್ರುಟ್ರಿಮ್ ಸಂಸ್ಥೆಯ ಹೆಸರೇಳಲು ಇಚ್ಛಿಸದ ನಿಖಿಲ್‌ ಸಹೋದ್ಯೋಗಿಗಳ ಹೇಳಿಕೆ ಉಲ್ಲೇಖಿಸಿ ರೆಡ್ಡಿಟ್ ಮತ್ತು ಕೆಲ ಮಾಧ್ಯಮಗಳು ವರದಿ ಮಾಡಿವೆ.;

Update: 2025-05-19 12:27 GMT

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕೃತಕ ಬುದ್ಧಿಮತ್ತೆ (AI) ಎಂಜಿನಿಯರ್ ನಿಖಿಲ್ ಸೋಮವಂಶಿ (25) ಅವರ ಸಾವಿನ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ. ಅಪಾಯಕಾರಿ ಕೆಲಸದ ಸಂಸ್ಕೃತಿ ಮತ್ತು ಕೆಲಸದ ಸ್ಥಳದಲ್ಲಿನ ಒತ್ತಡವೇ ಈ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ನಿಖಿಲ್ ಸೋಮವಂಶಿ ಅವರ ಮೃತದೇಹವು ಮೇ 8ರಂದು ಬೆಂಗಳೂರಿನ ಅಗರ ಕೆರೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಬೆಂಗಳೂರು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ರೆಡ್ಡಿಟ್ ಮತ್ತು ಕೆಲವು ಮಾಧ್ಯಮ ವರದಿಗಳ ಪ್ರಕಾರ, ಕ್ರುಟ್ರಿಮ್ ಸಂಸ್ಥೆಯ ಹೆಸರೇಳಲು ಇಚ್ಛಿಸದ ನಿಖಿಲ್ ಅವರ ಸಹೋದ್ಯೋಗಿಗಳು ಅಮೆರಿಕ ಮೂಲದ ವ್ಯವಸ್ಥಾಪಕರ ಕಿರುಕುಳ ಮತ್ತು ಅಪಾಯಕಾರಿ ಕೆಲಸದ ವಾತಾವರಣದಿಂದಾಗಿ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ (IISc) ಹಳೆಯ ವಿದ್ಯಾರ್ಥಿಯಾಗಿದ್ದ ನಿಖಿಲ್, ಸ್ನಾತಕೋತ್ತರ ಪದವಿ ಮುಗಿಸಿದ ನಂತರ 2024ರ ಆಗಸ್ಟ್ ತಿಂಗಳಲ್ಲಿ ಕ್ರುಟ್ರಿಮ್ ಎಐ ಸಂಸ್ಥೆಯಲ್ಲಿ ಮಿಷನ್ ಲರ್ನಿಂಗ್ ಎಂಜಿನಿಯರ್ ಆಗಿ ಸೇರಿಕೊಂಡಿದ್ದರು.

ಸಹೋದ್ಯೋಗಿಗಳ ಆರೋಪದ ಪ್ರಕಾರ, ಅಮೆರಿಕ ಮೂಲದ ವ್ಯವಸ್ಥಾಪಕ ರಾಜ್‌ಕಿರಣ್ ಪಾನುಗಂಟಿ ಅವರು ನಿಖಿಲ್‌ಗೆ ಕಿರುಕುಳ ನೀಡುತ್ತಿದ್ದರು. ಕಂಪನಿಯಲ್ಲಿ ರಾಜೀನಾಮೆ ನೀಡಿದ ಇತರ ಉದ್ಯೋಗಿಗಳ ಕೆಲಸವನ್ನೂ ಮಾಡುವಂತೆ ಒತ್ತಡ ಹೇರುತ್ತಿದ್ದರು. ಈ ಕಿರುಕುಳದಿಂದ ಬೇಸತ್ತೇ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ.

ತೀವ್ರ ಕೆಲಸದ ಒತ್ತಡವೇ ಕಾರಣವೆಂದು ಉಲ್ಲೇಖಿಸಿದ ರೆಡ್ಡಿಟ್ ಬಳಕೆದಾರ

ʼಕಿರ್ಗಾವಕುಟ್ಜೊʼ ಎಂಬ ರೆಡ್ಡಿಟ್ ಬಳಕೆದಾರರೊಬ್ಬರು ಸೋಮವಂಶಿ ಅವರ ಆತ್ಮಹತ್ಯೆಗೆ ʼತೀವ್ರ ಕೆಲಸದ ಒತ್ತಡʼವೇ ಕಾರಣ ಎಂದು ವರದಿ ಮಾಡಿದ್ದಾರೆ. ಸೋಮವಂಶಿ ಅವರು ಕ್ರುಟ್ರಿಮ್‌ನಲ್ಲಿ ಇಬ್ಬರು ಇತರ ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡುತ್ತಿದ್ದರು ಮತ್ತು ಕಂಪನಿಗೆ ಹೊಸಬರಾಗಿದ್ದರೂ ಯೋಜನೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದರು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅತಿಯಾದ ಕೆಲಸದ ಒತ್ತಡದಿಂದಾಗಿ ಇಬ್ಬರು ಸಹೋದ್ಯೋಗಿಗಳು ರಾಜೀನಾಮೆ ನೀಡಿದ ನಂತರ, ಆ ಕೆಲಸವನ್ನು ಅಮೆರಿಕ ಮೂಲದ ವ್ಯವಸ್ಥಾಪಕರು ಸೋಮವಂಶಿ ಅವರ ಮೇಲೆ ಹೇರಿದರು ಎಂದು ರೆಡ್ಡಿಟ್ ಬಳಕೆದಾರರು ಆರೋಪಿಸಿದ್ದಾರೆ. ಕಂಪನಿಯ ವ್ಯವಸ್ಥಾಪಕರಿಗೆ ಯಾವುದೇ ಕೌಶಲ್ಯವಿರಲಿಲ್ಲ ಮತ್ತು ಅವರು ಸಹೋದ್ಯೋಗಿಗಳನ್ನು ಸಾರ್ವಜನಿಕವಾಗಿ ನಿಂದಿಸಿ, ಕಿರುಚಾಡುತ್ತಿದ್ದರು ಎಂದು ಸಹ ಅವರು ದೂರಿದ್ದಾರೆ.

ವ್ಯವಸ್ಥಾಪಕರ ಕಿರುಕುಳದಿಂದ ಹಲವರ ರಾಜೀನಾಮೆ

ಕ್ರುಟ್ರಿಮ್ ಕಂಪನಿಯ ವ್ಯವಸ್ಥಾಪಕರ ಶೋಷಣೆಯಿಂದಾಗಿ ಅನೇಕ ಉದ್ಯೋಗಿಗಳು ತಮ್ಮ ಕೆಲಸಗಳಿಗೆ ರಾಜೀನಾಮೆ ನೀಡಿದ್ದಾರೆ ಎಂಬ ಆರೋಪವೂ ಇದೆ. ರಾಜ್‌ಕಿರಣ್ ಪಾನುಗಂಟಿ ಅವರು ಅಮೆರಿಕದಲ್ಲಿ ವಾಸಿಸುತ್ತಿದ್ದು, ಅಲ್ಲಿನ ಶೋಷಣೆಯ ಸಂಸ್ಕೃತಿಯನ್ನೇ ಬೆಂಗಳೂರಿನಲ್ಲಿಯೂ ಮುಂದುವರಿಸಿದ್ದಾರೆ. ಅವರು ಸಭೆಗಳಲ್ಲಿ ಕೆಟ್ಟ ಪದಗಳನ್ನು ಬಳಸಿ ನಿಂದಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಸಂತಾಪ ಸೂಚಿಸಿದ ಕ್ರುಟ್ರಿಮ್ ಕಂಪನಿ

ಸೋಮವಂಶಿ ಅವರ ನಿಧನಕ್ಕೆ ಕ್ರುಟ್ರಿಮ್ ಕಂಪನಿಯ ವಕ್ತಾರರು ಸಂತಾಪ ಸೂಚಿಸಿದ್ದಾರೆ. ನಿಖಿಲ್ ಅವರ ಅಗಲಿಕೆ ಕಂಪನಿಗೆ ದೊಡ್ಡ ನಷ್ಟವಾಗಿದ್ದು, ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ. ಮೂಲಗಳ ಪ್ರಕಾರ, ಸೋಮವಂಶಿ ಅವರು ಏಪ್ರಿಲ್ 8 ರಂದು ರಜೆಗಾಗಿ ಅರ್ಜಿ ಸಲ್ಲಿಸಿದ್ದರು ಮತ್ತು ಅವರಿಗೆ ರಜೆ ಮಂಜೂರಾಗಿತ್ತು. ನಂತರ, ಅವರು ಏಪ್ರಿಲ್ 17 ರಂದು ಹೆಚ್ಚುವರಿ ರಜೆಗಾಗಿ ವಿನಂತಿಸಿದ್ದರು ಮತ್ತು ಅವರ ರಜೆಯನ್ನು ವಿಸ್ತರಿಸಲಾಗಿತ್ತು ಎಂದು ಕಂಪನಿಯು ಇಮೇಲ್ ಮೂಲಕ ತಿಳಿಸಿದೆ. 

Tags:    

Similar News