ಐಪಿಎಲ್ ಟಿಕೆಟ್ ಅಕ್ರಮ ಮಾರಾಟ: ಖಾಸಗಿ ಕಂಪನಿ ಉದ್ಯೋಗಿ ಸಿಸಿಬಿ ಬಲೆಗೆ

ಕಾಳಸಂತೆಯಲ್ಲಿ ಐಪಿಎಲ್‌ ಪಂದ್ಯಗಳ ಟಿಕೆಟ್ ಖರೀದಿಸುತ್ತಿದ್ದ ಆರೋಪಿ, ಅದನ್ನ ದುಪ್ಪಟ್ಟು ಬೆಲೆಗಿಂತಲೂ ಅಧಿಕ ಬೆಲೆಗೆ ಬ್ಲ್ಯಾಕ್‌ನಲ್ಲಿಯೇ ಮಾರಾಟ ಮಾಡುತ್ತಿದ್ದ.;

Update: 2025-05-28 08:38 GMT

ಸಾಂದರ್ಭಿಕ ಚಿತ್ರ

ಐಪಿಎಲ್ ಪಂದ್ಯಗಳ ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಡಿ ಬೆಳ್ಳಂದೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿ ವಂಶಿ (23) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಐಟಿ ಕಂಪನಿಯಲ್ಲಿ ಉತ್ತಮ ಸಂಬಳ ಪಡೆಯುತ್ತಿದ್ದರೂ, ವಂಶಿ ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್‌ಗಳನ್ನು ಖರೀದಿಸಿ, ಅವುಗಳನ್ನು ದುಪ್ಪಟ್ಟು ಬೆಲೆಗಿಂತಲೂ ಹೆಚ್ಚು ಬೆಲೆಗೆ ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಮೇ 17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಪಂದ್ಯದ ಟಿಕೆಟ್‌ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಆರೋಪಿಯ ಬಳಿ ಖರೀದಿದಾರರ ಸೋಗಿನಲ್ಲಿ ತೆರಳಿದ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆರೋಪಿಯಿಂದ ಹತ್ತಕ್ಕೂ ಹೆಚ್ಚು ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬೆಳ್ಳಂದೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ಪಂದ್ಯಕ್ಕೂ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆಗ, 1,200 ರೂಪಾಯಿ ಮುಖಬೆಲೆಯ ಟಿಕೆಟ್‌ಗಳನ್ನು ಪ್ರತಿ ಟಿಕೆಟ್‌ಗೆ 12 ಸಾವಿರ ರೂ.ಗೆ ಮಾರಾಟ ಮಾಡಿ, ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು. ಆ ಆರೋಪಿಗಳಿಂದ ಒಟ್ಟು 32 ಟಿಕೆಟ್‌ಗಳು (ಮೌಲ್ಯ ₹38,400) ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. 

Tags:    

Similar News