ಧರ್ಮಸ್ಥಳ | ನೇತ್ರಾವತಿ ನದಿ ಸೇತುವೆ ಬಳಿ ಶಿಕ್ಷಕನ ಶವ ಪತ್ತೆ
ಜುಮಲಾಪುರದ ಸರ್ಕಾರಿ ಶಾಲೆಯಲ್ಲಿ ಪ್ರಭಾರಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ ಪೊಲೀಸ್ ಪಾಟೀಲ್(35) ನಾಲ್ಕು ದಿನಗಳ ಹಿಂದೆ ಮಂಜುನಾಥ ಸ್ವಾಮಿ ದರ್ಶನಕ್ಕೆಂದು ಧರ್ಮಸ್ಥಳಕ್ಕೆ ತೆರಳಿದ್ದರು.;
ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಸಹಜ ಸಾವುಗಳ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದ ಬೆನ್ನಲ್ಲೇ ನೇತ್ರಾವತಿ ಸೇತುವೆ ಬಳಿ ಶಿಕ್ಷಕರೊಬ್ಬರ ಶವ ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಕುಷ್ಟಗಿ ತಾಲೂಕಿನ ಜುಮಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರಿ ಮುಖ್ಯ ಶಿಕ್ಷಕ ಬಸವರಾಜ ಪೊಲೀಸ್ ಪಾಟೀಲ್(35) ಮೃತರು. ನಾಲ್ಕು ದಿನಗಳ ಹಿಂದೆ ಮಂಜುನಾಥ ಸ್ವಾಮಿ ದರ್ಶನಕ್ಕೆಂದು ಧರ್ಮಸ್ಥಳಕ್ಕೆ ತೆರಳಿದ್ದರು.
ನೇತ್ರಾವತಿ ನದಿ ಸೇತುವೆ ಕೆಳಭಾಗದ ಹಳೆ ರಸ್ತೆಯಲ್ಲಿ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಧರ್ಮಸ್ಥಳದ ಸುತ್ತಮುತ್ತ ನಡೆದಿರಬಹುದಾದ ಕೊಲೆ ಪ್ರಕರಣಗಳ ತನಿಖೆ ನಡೆಸಲು ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.