ಧರ್ಮಸ್ಥಳ ಪ್ರಕರಣ |ಗೃಹ ಸಚಿವ ಪರಮೇಶ್ವರ್ ಭೇಟಿಯಾದ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ
x

ಗೃಹ ಸಚಿವ ಡಾ.ಜಿ ಪರಮೇಶ್ವರ್ ಭೇಟಿ ಮಾಡಿದ ಪ್ರಣವ್ ಮೊಹಂತಿ

ಧರ್ಮಸ್ಥಳ ಪ್ರಕರಣ |ಗೃಹ ಸಚಿವ ಪರಮೇಶ್ವರ್ ಭೇಟಿಯಾದ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ

ಯಾರೂ ಸಹ ತನಿಖೆಯಿಂದ ಹಿಂದೆ ಸರಿಯುವ ಬಗ್ಗೆ ಸರ್ಕಾರಕ್ಕೆ ಅಥವಾ ನನಗಾಗಲಿ ಯಾವುದೇ ಮಾಹಿತಿ ನೀಡಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.


ಧರ್ಮಸ್ಥಳದಲ್ಲಿ ಅಸಹಜ ಸಾವುಗಳು, ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ನಾಪತ್ತೆ, ಅತ್ಯಾಚಾರ, ಕೊಲೆ ಪ್ರಕರಣಗಳ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ದ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಸೋಮವಾರ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರನ್ನು ಭೇಟಿ ಮಾಡಿ, ಅರ್ಧ ಗಂಟೆಗೂ ಹೆಚ್ಚು ಕಾಲ ತನಿಖೆ ಕುರಿತಂತೆ ಚರ್ಚಿಸಿದರು.

ನಾಲ್ವರು ಐಪಿಎಸ್‌ ಅಧಿಕಾರಿಗಳ ನೇತೃತ್ವದ ಎಸ್‌ಐಟಿಯನ್ನು ಭಾನುವಾರ ರಚಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ತನಿಖಾ ಆರಂಭಕ್ಕೂ ಮುನ್ನ ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.

ತನಿಖೆಯಿಂದ ಮಾತ್ರ ಸತ್ಯಾಂಶ ಬಯಲು

ಎಸ್‌ಐಟಿ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು, ವಿವಿಧ ಸಂಘಟನೆಗಳು ಮತ್ತು ಪ್ರಗತಿಪರ ಚಿಂತಕರ ಒತ್ತಾಯದ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನಡೆದಿರುವ ಅಸ್ವಾಭಾವಿಕ ಸಾವುಗಳ ತನಿಖೆಗಾಗಿ ಸರ್ಕಾರ ಎಸ್ಐಟಿ ರಚಿಸಿದೆ.

ಹಲವು ಸಂಘಟನೆಗಳು ಈ ಬಗ್ಗೆ ದೂರುಗಳನ್ನು ನೀಡಿವೆ. ಜನ ಸಮುದಾಯ ಮತ್ತು ಪ್ರಗತಿಪರ ಚಿಂತಕರು ತನಿಖೆಗೆ ಒತ್ತಾಯಿಸಿದ ಕಾರಣ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ತನಿಖೆ ನಡೆಸಿದಾಗ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ ಎಂದು ಹೇಳಿದರು.

ಇಬ್ಬರು ಐಪಿಎಸ್‌ ಅಧಿಕಾರಿಗಳ ನಿರ್ಗಮನ; ಸಚಿವರ ಸ್ಪಷ್ಟನೆ

ಎಸ್ಐಟಿ ತಂಡದಿಂದ ಇಬ್ಬರು ಅಧಿಕಾರಿಗಳು ಹೊರಬರಲಿದ್ದಾರೆ ಎಂಬ ವದಂತಿ ಕುರಿತು ಗೃಹ ಸಚಿವರು ಸ್ಪಷ್ಟನೆ ನೀಡಿದರು.

ಜವಾಬ್ದಾರಿ ಸ್ಥಾನದಲ್ಲಿರುವ ಹಿರಿಯ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ. ಅವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಯಾರೂ ಸಹ ತನಿಖೆಯಿಂದ ಹಿಂದೆ ಸರಿಯುವ ಬಗ್ಗೆ ಸರ್ಕಾರಕ್ಕೆ ಅಥವಾ ನನಗಾಗಲಿ ಮಾಹಿತಿ ನೀಡಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಪ್ರಣವ್ ಮೊಹಂತಿ ಅವರು "ನನಗೆ ಜವಾಬ್ದಾರಿ ಕೊಟ್ಟಿದ್ದೀರಾ, ಜವಾಬ್ದಾರಿ ಹೊತ್ತು ತನಿಖೆ ಮಾಡ್ತೇನೆ" ಎಂದು ಹೇಳಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ಸತ್ಯಾಸತ್ಯತೆ ಹೊರಬರಲು ತನಿಖೆ: ಡಿಕೆಶಿ

ಧರ್ಮಸ್ಥಳ ಪ್ರಕರಣ ಕುರಿತಂತೆ ಎಸ್ಐಟಿ ರಚಿಸಿರುವ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಬಗ್ಗೆ ಗೃಹ ಸಚಿವರು ಮಾಹಿತಿ ನೀಡುತ್ತಾರೆ ಎಂದರು.

ಹಿರಿಯ ಅಧಿಕಾರಿಗಳಿಗೆ ತನಿಖೆ ನೀಡಲಾಗಿದೆ. ಅವರು ತನಿಖೆ ಮಾಡುತ್ತಾರೆ. ಬಿಜೆಪಿಯವರು ಏನು ಬೇಕಾದರೂ ಆರೋಪ ಮಾಡಲಿ. ಕೋರ್ಟ್ ಗೆ ಯಾರೋ ಹೇಳಿಕೆ ಕೊಟ್ಟಿದ್ದರು, ಅದರ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ ಎಂದು ಶಿವಕುಮಾರ್ ಹೇಳಿದರು.

Read More
Next Story