ನೇತ್ರಾವತಿ ವಾಟರ್‌ ಮೆಟ್ರೋ | ನಗರ ಬೆಸೆವ ನದಿಗಳು; ಕರಾವಳಿ ಜಲಸಾರಿಗೆಯಲ್ಲಿ ಗರಿಗೆದರಿದ ಕನಸು
x
ಕೇರಳದ ಕೊಚ್ಚಿನ್‌ ವಾಟರ್‌ ಮೆಟ್ರೋ ಈ ರೀತಿ ಇದೆ

ನೇತ್ರಾವತಿ ವಾಟರ್‌ ಮೆಟ್ರೋ | ನಗರ ಬೆಸೆವ ನದಿಗಳು; ಕರಾವಳಿ ಜಲಸಾರಿಗೆಯಲ್ಲಿ ಗರಿಗೆದರಿದ ಕನಸು

ಕೂಳೂರು ಸೇತುವೆ (ಫಲ್ಗುಣಿ ನದಿ), ನವ ಮಂಗಳೂರು ಬಂದರು, ಸುಲ್ತಾನ್‌ ಬತ್ತೇರಿ, ತಣ್ಣೀರುಬಾವಿ, ಹಳೇ ಬಂದರು, ಬಜಾಲ್‌- ಮರವೂರು ಸೇತುವೆ ಪ್ರದೇಶದಲ್ಲಿ ಮೆಟ್ರೋ ಸಂಚಾರದ ನಿರೀಕ್ಷೆಯಿದೆ. ಸುಮಾರು 30 ಕಿಲೋಮೀಟರ್‌ ಉದ್ದದ ಮಾರ್ಗವಿದು. 17 ಕಡೆಗಳಲ್ಲಿ ನಿಲುಗಡೆ ಇರಲಿದೆ.


ಮುಂದಿನ ವರ್ಷ ನೇತ್ರಾವತಿ- ಗುರುಪುರ ನದಿ ತಟಗಳಲ್ಲಿ ನೀರಿನ ಮೇಲೆ ಮೆಟ್ರೋ ಓಡಬಹುದೇ. ಹೀಗೊಂದು ಕನಸು ಮತ್ತೆ ಚಿಗುರೊಡೆದಿದೆ. ಇಷ್ಟು ವರ್ಷ ಬರೀ ಕಲ್ಪನೆ, ಮಾತುಗಳಿಗಷ್ಟೇ ಸೀಮಿತವಾಗಿದ್ದ ಈ ಯೋಜನೆಗೆ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ.

ಇತ್ತೀಚೆಗೆ ನಡೆದ ಕರ್ನಾಟಕ ಜಲಸಾರಿಗೆ ಮಂಡಳಿ ಸಭೆಯಲ್ಲಿ ಕರ್ನಾಟಕ ಜಲಸಾರಿಗೆ ನೀತಿ -2024 ಬಿಡುಗಡೆಯಾಗಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರಾವತಿ ವಾಟರ್‌ ಮೆಟ್ರೋ ಯೋಜನೆಗೆ ಸಮ್ಮತಿ ನೀಡಿದ್ದಾರೆ. ಗುರುಪುರದಲ್ಲಿ ಹರಿಯುತ್ತಿರುವ ಫಲ್ಗುಣಿ ನದಿ ಮತ್ತು ಅಡ್ಯಾರ್‌ನಲ್ಲಿ ಹಾದು ಹೋಗಿರುವ ನೇತ್ರಾವತಿ ನದಿ ತಟಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಮಂಡಿಸಲಾದ ಪ್ರಸ್ತಾವಕ್ಕೆ ಮುಖ್ಯಮಂತ್ರಿಯವರ ಒಪ್ಪಿಗೆ ಸಿಕ್ಕಿದೆ. ಮಾತ್ರವಲ್ಲ ಸಾಗರಮಾಲಾ ಯೋಜನೆ ಅಡಿ ಮಂಗಳೂರಿನಲ್ಲಿ ಕರ್ನಾಟಕ ಜಲಸಾರಿಗೆ ತರಬೇತಿ ಕೇಂದ್ರ ಸ್ಥಾಪನೆಗೂ ಮುಖ್ಯಮಂತ್ರಿ ಸಮ್ಮತಿಸಿದ್ದಾರೆ.

ಇದು ಜಾರಿಗೆ ಬಂದಲ್ಲಿ ಕೇರಳದ ಕೊಚ್ಚಿನ್‌ ನಂತರ ಕರ್ನಾಟಕದಲ್ಲಿ ಎರಡನೇ ವಾಟರ್‌ ಮೆಟ್ರೋ ಬಂದಂತಾಗಲಿದೆ. ಹೀಗಾಗಿ ದಕ್ಷಿಣ ಭಾರತದ ಈ ಎರಡು ರಾಜ್ಯಗಳು ಜಲಸಾರಿಗೆ ಕ್ಷೇತ್ರದಲ್ಲಿ ನಾವಿನ್ಯತೆಯನ್ನು ಅಳವಡಿಸಿಕೊಂಡ ಮುಂಚೂಣಿಯ ರಾಜ್ಯಗಳಾಗಲಿವೆ.

ಹೇಗಿರಲಿದೆ ಯೋಜನೆ?

ನೇತ್ರಾವತಿ ನದಿ ಹರಿಯುತ್ತಿರುವ ಅಡ್ಯಾರ್‌ನಿಂದ ಸಮುದ್ರ ಸೇರುವ ಅಳಿವೆ ಬಾಗಿಲುವರೆಗೆ ಹಾಗೂ ಫಲ್ಗುಣಿ ನದಿ ಹರಿಯುತ್ತಿರುವ ಗುರುಪುರದಿಂದ ಆರಂಭಿಸಿ ತಣ್ಣೀರುಬಾವಿವರೆಗೆ ವಾಟರ್‌ ಮೆಟ್ರೋ ಬೋಟ್‌ಗಳು ಸಂಚರಿಸುವ ಅಂದಾಜು ಮಾಡಲಾಗಿದೆ.

ಓಡಾಟ ಹೇಗೆ?

ಕೂಳೂರು ಸೇತುವೆ (ಫಲ್ಗುಣಿ ನದಿ), ನವ ಮಂಗಳೂರು ಬಂದರು, ಸುಲ್ತಾನ್‌ ಬತ್ತೇರಿ, ತಣ್ಣೀರುಬಾವಿ, ಹಳೇ ಬಂದರು, ಬಜಾಲ್‌- ಮರವೂರು ಸೇತುವೆ ಪ್ರದೇಶದಲ್ಲಿ ಮೆಟ್ರೋ ಸಂಚಾರದ ನಿರೀಕ್ಷೆಯಿದೆ. ಸುಮಾರು 30 ಕಿಲೋಮೀಟರ್‌ ಉದ್ದದ ಮಾರ್ಗವಿದು. 17 ಕಡೆಗಳಲ್ಲಿ ನಿಲುಗಡೆ ಇರಲಿದೆ.

ಈ ಎರಡೂ ಪ್ರದೇಶಗಳು ಅರಬಿ ಸಮುದ್ರಕ್ಕೆ ಹತ್ತಿರದಲ್ಲಿರುವುದರಿಂದ ಈ ನದಿಗಳು ವರ್ಷಪೂರ್ತಿ ತುಂಬಿರುತ್ತವೆ. ನೀರಿನ ಪ್ರಮಾಣದ ಏಕರೂಪತೆ, ಮಳೆಗಾಲ ಅಥವಾ ಸಮುದ್ರದ ಏರಿಳಿತದ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಂಡು ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು ಎಂದು ಜಲಸಾರಿಗೆ ಮಂಡಳಿಯ ಮೂಲಗಳು ಹೇಳಿವೆ.

ಮುಂದಿನ ವರ್ಷ ಯೋಜನೆ ಜಾರಿಯಾಗುವುದೆಂದು ಘೋಷಣೆಯನ್ನೇನೋ ಮಾಡಲಾಗಿದೆ. ಆದರೆ ಅದರ ಸಮೀಕ್ಷೆ, ಭೂಸ್ವಾಧೀನ ಸಂಬಂಧಿಸಿ ಇನ್ನಷ್ಟು ವಿವರವಾದ ಅಧ್ಯಯನಗಳು ನಡೆಯಬೇಕಿವೆ. ಅದರ ಬಳಿಕವಷ್ಟೇ ಅದರ ಆರ್ಥಿಕ ಲೆಕ್ಕಾಚಾರಗಳು ಸ್ಪಷ್ಟವಾಗಲಿದೆ. ಖಾಸಗಿ ಪಾಲುದಾರಿಕೆ ಸಾಧ್ಯತೆಯೂ ಇದೆ ಎನ್ನುತ್ತವೆ ಮಂಡಳಿಯ ಮೂಲಗಳು.


ಸದ್ಯ 30 ಕಿಲೋಮೀಟರ್‌ ವ್ಯಾಪ್ತಿಯ ಕಾರ್ಯಾಚರಣೆ ಈ ಯೋಜನೆಯದ್ದು. ನೇತ್ರಾವತಿ ಸುತ್ತಮುತ್ತಲಿನ ಒಂದೆರಡು ಕುದ್ರುಗಳು (ಅಳಿವೆ ಬಾಗಿಲು, ಹೊಯ್ಗೆ), ದ್ವೀಪಗಳನ್ನು ಸಂಪರ್ಕಿಸಬಹುದು. ಉಳಿದಂತೆ ಈ ಯೋಜನೆ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಕೇಂದ್ರೀಕರಿಸಿದೆ. ಇದು ಮಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ ಎನ್ನಲಾಗುತ್ತಿದೆಯಾದರೂ ಈ ನದಿಗಳ ಮೂಲಕ ಭೂ ಸಾರಿಗೆ ವ್ಯವಸ್ಥೆಯ ಸಂಪರ್ಕ ಹೇಗೆ ಎನ್ನುವುದು ಸ್ಪಷ್ಟವಾಗಿಲ್ಲ.

ಸರಕು ಸಾಗಾಟ ಸಾಧ್ಯತೆ?

ಸರಕು ಸಾಗಾಟಕ್ಕೆ ಅನುಕೂಲ, ರೋ ರೋ (ಸರಕು ವಾಹನಗಳನ್ನು ಬೋಟ್‌ಗೆ ರೋಲ್‌ ಆನ್‌ ಮೂಲಕ ಏರಿಸಿ- ರೋಲ್‌ ಆಫ್‌ ಮೂಲಕ ಇಳಿಸುವುದು) ಸೇವೆಗಳನ್ನೂ ಅಳವಡಿಸಬಹುದು ಎನ್ನಲಾಗುತ್ತಿದೆ. ಆದರೆ ಇಷ್ಟು ಕನಿಷ್ಠ ದೂರಕ್ಕೆ ಸರಕು ಸಾಗಾಟ ವಾಹನಗಳು ರೋಲ್‌ಆನ್‌ ರೋಲ್‌ ಆಫ್‌ ಆಗುತ್ತವೆಯೇ? ಅದು ವೆಚ್ಚ ಇಳಿಸಬಲ್ಲುದೇ ಎಂಬ ಚರ್ಚೆಗಳು ನಡೆದಿವೆ. ಮೀನುಗಾರಿಕೆ ಸಂಬಂಧಪಟ್ಟ ಒಂದಿಷ್ಟು ಸರಕು ಸಾಗಾಟಗಳಿಗೆ ಅನುಕೂಲ ಆಗಬಹುದು. ಮಂಜುಗಡ್ಡೆ, ಮೀನು, ಮೀನುಗಾರಿಕಾ ಪರಿಕರಗಳನ್ನು ಸಾಗಿಸಲು ನೆರವಾಗಬಹುದು ಎಂಬ ಮಾತೂ ಇದೆ.


ಮುಂದಿನ 25 ವರ್ಷಗಳಲ್ಲಿ ಮಂಗಳೂರು ನಗರದ ಬೆಳವಣಿಗೆಯನ್ನು ದೂರದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ.

ಏನಿದ್ದರೂ ಈ ಯೋಜನೆಗೆ ಈಗ ಅನುಮೋದನೆಯಷ್ಟೇ ದೊರೆತಿದೆ. ಅನುಷ್ಠಾನ ಸಂಬಂಧಿಸಿ ಇನ್ನಷ್ಟೇ ಗೊತ್ತಾಗಬೇಕಿದೆ ಎನ್ನುತ್ತವೆ ಜಿಲ್ಲಾಡಳಿತದ ಮೂಲಗಳು.

ಕೊಚ್ಚಿನ್‌ನಲ್ಲಿ ಹೇಗಿದೆ?

2023ರಲ್ಲಿ ಕೇರಳದ ಕೊಚ್ಚಿನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೊದಲ ವಾಟರ್‌ ಮೆಟ್ರೋ ಲೋಕಾರ್ಪಣೆಗೊಂಡಿತ್ತು. 76 ಕಿಲೋಮೀಟರ್‌ ಉದ್ದದ ವಾಟರ್‌ ಮೆಟ್ರೋ ಮಾರ್ಗವಿದು. ಅಲ್ಲಿನ ವೆಂಬನಾಡ್‌ ಸರೋವರದಲ್ಲಿ ಈ ಯೋಜನೆ ಕಾರ್ಯಗತಗೊಂಡಿದೆ. 10 ದ್ವೀಪಗಳನ್ನು ವಾಟರ್‌ಮೆಟ್ರೋ ಸಂಪರ್ಕಿಸಿದೆ. 78 ಬೋಟ್‌ ವಾಟರ್‌ ಮೆಟ್ರೋ ಟರ್ಮಿನಲ್‌ಗಳಿವೆ.


ಸಂಪೂರ್ಣ ಹವಾನಿಯಂತ್ರಿತ ಬೋಟ್‌ಗಳಿವೆ. ಅಲ್ಲಿ ಕೊಚ್ಚಿನ್‌ನ ರೈಲು, ಮೆಟ್ರೋ ರೈಲು ಮತ್ತು ಬಸ್‌ ನಿಲ್ದಾಣಗಳಿಗೆ ಪರಸ್ಪರ ಸಂಪರ್ಕ ಸುಲಭವಾಗುವಂತೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. 100 ಜನರ ಮತ್ತು 50 ಜನ ಪ್ರಯಾಣ ಸಾಮರ್ಥ್ಯದ ಮೆಟ್ರೋ ಬೋಟ್‌ಗಳು ಅಲ್ಲಿ ಸಂಚರಿಸುತ್ತಿವೆ.

Read More
Next Story