Vehicle Parking: ಮನೆ ಕಾಂಪೌಂಡ್​, ಅಪಾರ್ಟ್‌ಮೆಂಟ್, ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳ ಪಾರ್ಕಿಂಗ್ ದರ ನಿಗದಿ

ವಸತಿ ಇದ್ದರೇ ವಸತಿ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕವನ್ನು ತೋಚಿದಷ್ಟು ವಸೂಲಿ ಮಾಡಲಾಗುತ್ತಿತ್ತು. ಆದರೆ, ಇದೀಗ ಪಾರ್ಕಿಂಗ್​ಗೆ ಚದರ ಅಡಿ ಲೆಕ್ಕದಲ್ಲಿ ಪಾಲಿಕೆ ದರ ನಿಗದಿ ಮಾಡಿದೆ.;

Update: 2025-04-01 13:43 GMT
Click the Play button to listen to article

ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ಇದೀಗ ವಾಹನ ಪಾರ್ಕಿಂಗ್‌ಗೆ  ಪ್ರದೇಶವಾರು ಯೂನಿಟ್ ದರ ನಿರ್ಧರಿಸಲು ಕರಡು ಅಧಿಸೂಚನೆಯನ್ನು  ಹೊರಡಿಸಿದೆ. ಅಧಿಸೂಚನೆ ಸಂಬಂಧ ಸಾರ್ವಜನಿಕರು ಸಲಹೆ ಮತ್ತು ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.

ಪಾರ್ಕಿಂಗ್ ಮೇಲಿನ ಆಸ್ತಿ ತೆರಿಗೆಯನ್ನು ಪ್ರಮಾಣಬದ್ದಿಕರಣಗೊಳಿಸಲಾಗುತ್ತಿದೆ ಮತ್ತು  ಕಡಿಮೆ ಮಾಡಲಾಗುತ್ತಿದೆ ಎಂದು ಪ್ರಕಟಣೆ ವಿವರಿಸಿದೆ.

ಶುಲ್ಕ ಸಂಗ್ರಹ ಯಾವ ರೀತಿ ಮತ್ತು ಎಷ್ಟು?

ಮನೆಯ ಕಾಂಪೌಂಡ್​, ಅಪಾರ್ಟ್‌ಮೆಂಟ್, ಕಮರ್ಷಿಯಲ್ ಕಾಂಪ್ಲೆಕ್ಸ್, ಮಾಲ್ ಸೇರಿದಂತೆ ಎಲ್ಲ ರೀತಿಯ ಕಟ್ಟಡಗಳಿಗೆ ಪಾರ್ಕಿಂಗ್ ದರ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ವಸತಿ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 600 ರೂಪಾಯಿ ಪಾರ್ಕಿಂಗ್ ತೆರಿಗೆ (ಆರಂಭಿಕ ದರ) (ಚದರ ಅಡಿಗೆ 2 ರೂ.) ವಸೂಲಿ ಮಾಡಲು ನಿರ್ಧರಿಸಲಾಗಿದೆ.

ವಾಣಿಜ್ಯ ಅಥವಾ ವಸತಿಯೇತರ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 1,125 ರೂ. ಪಾರ್ಕಿಂಗ್ ತೆರಿಗೆ (ಆರಂಭಿಕ ದರ) (ಚದರ ಅಡಿಗೆ 3 ರೂ.) ಸಂಗ್ರಹಿಸಲು ಬಿಬಿಎಂಪಿ ನಿರ್ಧರಿಸಿದೆ ಎಂದುಮುನೀಶ್ ಮೌದ್ಗಿಲ್, ವಿಶೇಷ ಆಯುಕ್ತರು (ಕಂದಾಯ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲೆಲ್ಲ ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಕಮರ್ಷಿಯಲ್ ಇದ್ದರೇ, ಕಮರ್ಷಿಯಲ್ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ವಸತಿ ಪ್ರದೇಶವಾಗಿದ್ದರೆ ವಸತಿ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕವನ್ನು ತೋಚಿದಷ್ಟು ವಸೂಲಿ ಮಾಡಲಾಗುತ್ತಿತ್ತು. ಆದರೆ, ಇದೀಗ ಪಾರ್ಕಿಂಗ್​ಗೆ ಚದರ ಅಡಿ ಲೆಕ್ಕದಲ್ಲಿ ಪಾಲಿಕೆ ದರ ನಿಗದಿ ಮಾಡಿದೆ.

ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಬಿಬಿಎಂಪಿ, ವಾಹನ ನಿಲ್ದಾಣದ ಪ್ರದೇಶದ ಪ್ರದೇಶವಾರು ಯೂನಿಟ್ ದರಗಳನ್ನು ನಿರ್ಧರಿಸುವ ಕರಡು ಅಧಿಸೂಚನೆಗೆ ಸಂಬಂಧಿಸಿದ ಸಾರ್ವಜನಿಕರಿಂದ ಸಲಹೆಗಳು ಮತ್ತು ಆಕ್ಷೇಪಣೆಗಳೇನಾದರೂ ಇದ್ದರೆ ಅಧಿಕೃತ ರಾಜ್ಯ ಪತ್ರದ ವಿಶೇಷ ಪತ್ರಿಕೆಯಲ್ಲಿ ಪ್ರಕಟಿಸಿದ ದಿನಾಂಕದಿಂದ 7 ದಿನಗಳವರೆಗೆ ಸಲಹೆಗಳು / ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ. 

ಈಗಾಗಲೇ ಬಿಬಿಎಂಪಿ ಮನೆ, ಅಂಗಡಿ ಮುಂಗಟ್ಟಿನ ಕಸಕ್ಕೂ ತೆರಿಗೆ ಪಾವತಿ ಮಾಡಬೇಕು ಎಂದು ಸೂಚಿಸಿದೆ. ಈ ವಿಚಾರವಾಗಿ ಬಿಬಿಎಂಪಿ ಬಜೆಟ್​​​ನಲ್ಲೂ ಘೋಷಣೆ ಮಾಡಲಾಗಿದೆ. ಈ ಮೂಲಕ 600 ಕೋಟಿ ರೂಪಾಯಿ ಆದಾಯ ಸಂಗ್ರಹಕ್ಕೆ ಬಿಬಿಎಂಪಿ ಗುರಿ ಹಾಕಿಕೊಂಡಿದೆ. ಇದೀಗ ವಾಹನ ಪಾರ್ಕಿಂಗ್‌ ಹೆಸರಿನಲ್ಲಿ ಆದಾಯ ಹೆಚ್ಚಿಸಿಕೊಳ್ಳಲು ಬಿಬಿಎಂಪಿ ಯೋಚಿಸಿದೆ.

ವಿವರ

ಹೊಸ UAV (ಯುನಿಟ್ ಏರಿಯಾ ವ್ಯಾಲ್ಯೂ) ದರಗಳ ಪ್ರಕಾರ 150 ಚದರ ಅಡಿಯ ವಾಹನ ನಿಲ್ದಾಣದ ಲೆಕ್ಕಾಚಾರವು ಈ ಕೆಳಗಿನಂತಿರುತ್ತದೆ -

(1) ವಸತಿ ಸ್ವತ್ತುಗಳು:

{(ಪಾರ್ಕಿಂಗ್ ಚದರ ಅಡಿ) x 10 ತಿಂಗಳುಗಳು x ಪ್ರತಿ ಚದರ ಅಡಿ ದರಕ್ಕೆ ರೂ. 2} ರ ಶೇ. 20

= 150x10x2 ರಲ್ಲಿ ಶೇ. 20 = 3,000 ರಲ್ಲಿ ಶೇ. 20 = ವರ್ಷಕ್ಕೆ ರೂ. 600

(2) ವಾಣಿಜ್ಯ ಮತ್ತು ವಸತಿಯೇತರ ಸ್ವತ್ತುಗಳು:

{(ಪಾರ್ಕಿಂಗ್ ಚದರ ಅಡಿ) x 10 ತಿಂಗಳುಗಳು x ಪ್ರತಿ ಚದರ ಅಡಿ ದರಕ್ಕೆ ರೂ 3} ರ ಶೇ. 25

= 150x10x3 ರಲ್ಲಿ ಶೇ. 25 = 4,500 ರಲ್ಲಿ ಶೇ. 25 = ವರ್ಷಕ್ಕೆ ರೂ. 1125

ವಾರ್ಷಿಕ ತೆರಿಗೆ 

ವಸತಿ

[UAV ದರ] ದ ಶೇ. 20 x [ಚದರ ಅಡಿ ಆಸ್ತಿ ವಿಸ್ತೀರ್ಣ] x 10 ತಿಂಗಳುಗಳು

ವಸತಿಯೇತರ

[UAV ದರ] ದ ಶೇ. 25 x [ಚದರ ಅಡಿ ಆಸ್ತಿ ವಿಸ್ತೀರ್ಣ] x 10 ತಿಂಗಳುಗಳು

ಆದ್ದರಿಂದ ವಾಹನ ನಿಲ್ದಾಣಗಳಿಗೆ UAV ದರಗಳಲ್ಲಿ ವಿಶಾಲವಾದ ಕಡಿತವಿದೆ. 

Tags:    

Similar News