ʼಮಿಲ್ಕೀ ಬ್ಯೂಟಿʼ ಆಯ್ಕೆಗೆ ʼಮೋಹಕ ತಾರೆʼ ಸಿಡುಕು: ಸ್ಯಾಂಡಲ್ ಸೋಪ್‍ಗೆ ತಮನ್ನಾ ರಾಯಭಾರಿ ವಿಚಾರಕ್ಕೆ ರಮ್ಯಾ ಬೇಸರ

ಪ್ರತಿಯೊಬ್ಬ ಕನ್ನಡಿಗನೂ ಮೈಸೂರು ಸ್ಯಾಂಡಲ್‍ ಸೋಪ್‍ನ ರಾಯಭಾರಿ. ಅದನ್ನು ಪ್ರಪಂಚಕ್ಕೆ ತಲುಪಿಸುವುದಕ್ಕೆ ಪ್ರತಿಯೊಬ್ಬ ಕನ್ನಡಿಗರನ್ನೂ ಬಳಸಿಕೊಳ್ಳಬೇಕು, " ಎಂದು ಹೇಳಿದ್ದಾರೆ.;

Update: 2025-05-24 09:25 GMT

ಮೈಸೂರು ಸ್ಯಾಂಡಲ್ ಸೋಪ್‌ (ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್ಸ್ ಕಂಪನಿ)ಯ ಹೊಸ ರಾಯಭಾರಿಯಾಗಿ ಬಾಲಿವುಡ್‍ನ ಜನಪ್ರಿಯ ನಟಿ ತಮನ್ನಾ ಭಾಟಿಯಾ ಆಯ್ಕೆಯಾಗಿರುವ ವಿಷಯ ಎರಡು ದಿನಗಳಿಂದ ಸುದ್ದಿಯಾಗುತ್ತಿದೆ. ಈ ಕುರಿತು ಸಾಕಷ್ಟು ಟೀಕೆ-ಟಿಪ್ಪಣಿಗಳು ಕೇಳಿಬರುತ್ತಿವೆ. ಈ ವಿಷಯವಾಗಿ ಕನ್ನಡದ ಮೋಹಕ ತಾರೆ ರಮ್ಯಾ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

ಕರ್ನಾಟಕ ಡಿಟರ್ಜೆಂಟ್ಸ್ ಕಂಪನಿಯು ತನ್ನ ಉತ್ಪನ್ನಗಳತ್ತ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಬಾಲಿವುಡ್‍ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದೆ. ಅದಕ್ಕಾಗಿ ಅವರಿಗೆ ಎರಡು ವರ್ಷಗಳಿಗೆ 6.2 ಕೋಟಿ ರೂ. ಸಂಭಾವನೆಯನ್ನು ಗೊತ್ತುಪಡಿಸಿದೆ. ತಮನ್ನಾ, ಸಂಸ್ಥೆಯ ಪರವಾಗಿ ಪ್ರಚಾರ ನಡೆಸಲಿದ್ದಾರೆ.

ಸಂಸ್ಥೆಯ ಈ ನಡೆಯ ಕುರಿತು ಸೋಷಿಯಲ್‍ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಕರ್ನಾಟಕದ ಹೆಮ್ಮೆಯ ಸೋಪಿನ ಕುರಿತು ಪ್ರಚಾರ ಮಾಡುವುದಕ್ಕೆ ಕನ್ನಡ ನಟಿಯರು ಸಿಗಲಿಲ್ಲವೇ ಎನ್ನುವುದು ಒಂದು ಕಡೆಯಾದರೆ, ತಮನ್ನಾಗೆ ಸರ್ಕಾರವು 6.20 ಕೋಟಿ ರೂ. ವ್ಯಯಿಸಿರುವುದು ಸಂಪೂರ್ಣವಾಗಿ ಅನಗತ್ಯ ಮತ್ತು ಜವಾಬ್ದಾರಿಯಿಲ್ಲದ ನಿರ್ಧಾರವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಈಗ, ಕಾಂಗ್ರೆಸ್‌ ಮಾಜಿ ಸಂಸದರೂ ಆಗಿರುವ ರಮ್ಯಾ (ಮೂಲ ಹೆಸರು ದಿವ್ಯ ಸ್ಪಂದನ) ಸಹ ಈ ಕುರಿತು ಮಾತನಾಡಿದ್ದು, ಇದು ತೆರಿಗೆದಾರರ ಹಣ ವ್ಯರ್ಥ ಮಾಡಿದಂತೆ ಎಂದಿದ್ದಾರೆ.

ರಮ್ಯಾ ಯಾವತ್ತೂ ತಮ್ಮ ನೇರ ಮತ್ತು ನಿಷ್ಠುರ ಹೇಳಿಕೆಗಳಿಗೆ ಹೆಸರಾದವರು. ಇದಕ್ಕೂ ಮುನ್ನ ಹಲವು ವಿಷಯಗಳ ಕುರಿತು ರಮ್ಯಾ ಹೇಳಿಕೆಗಳನ್ನು ನೀಡಿದ್ದಾರೆ. ಈಗ ಮೈಸೂರು ಸ್ಯಾಂಡಲ್‍ ಸೋಪ್‍ಗೆ ತಮನ್ನಾ ರಾಯಭಾರಿಯಾಗಿದ್ದರ ಕುರಿತು ಇನ್ಸ್ಟಾ ಸ್ಟೋರಿಯಲ್ಲಿ ತಮ್ಮ ಅಭಿಪ್ರಾಯವನ್ನು ರಮ್ಯಾ ಹಂಚಿಕೊಂಡಿದ್ದಾರೆ.

‘ಉತ್ಪನ್ನಗಳ ಪ್ರಮೋಷನ್‌ಗೆ ರಾಯಭಾರಿಗಳನ್ನು ನೇಮಿಸುವುದು ಹಳೆಯ ಸಂಪ್ರದಾಯ. ಇದರಿಂದ ತೆರಿಗೆದಾರರ ಹಣ ವ್ಯರ್ಥಮಾಡಿದಂತಾಗುತ್ತದೆ. ಇಂದು ಒಂದು ಉತ್ಪನ್ನವನ್ನು ಜನ ಖರೀದಿಸುವುದಕ್ಕೆ ಯಾರೋ ಸೆಲೆಬ್ರಿಟಿ ಪ್ರಚಾರ ಮಡಬೇಕಿಲ್ಲ. ಆ ಸೋಪು ಹಚ್ಚುವುದರಿಂದ ಅವರು ರಾಯಭಾರಿಯಂತೆ ಕಾಣುವುದಕ್ಕೆ ಸಾಧ್ಯವಿಲ್ಲ ಎಂಬ ಸತ್ಯಾಂಶ ಅವರಿಗೆ ಚೆನ್ನಾಗಿ ಗೊತ್ತಿದೆ. ಜನ ನಿಮ್ಮ ಗ್ರಾಹಕರಾಗುವುದಕ್ಕೆ ಪ್ರಮುಖವಾಗಿ ನಿಮ್ಮ ಉತ್ಪನ್ನಗಳು ಚೆನ್ನಾಗಿರುವುದಷ್ಟೇ ಅಲ್ಲ, ಅದಕ್ಕೊಂದು ಪರಂಪರೆ ಇರಬೇಕು. ಮೈಸೂರು ಸ್ಯಾಂಡಲ್‍ ಸೋಪ್‍ ಬಳಸಿರುವ ಮತ್ತು ಬಳಸುವ ಪ್ರತಿಯೊಬ್ಬ ಗ್ರಾಹಕರೂ ಆ ಸೋಪಿನ ರಾಯಭಾರಿ. ಪ್ರತಿಯೊಬ್ಬ ಕನ್ನಡಿಗನೂ ಮೈಸೂರು ಸ್ಯಾಂಡಲ್‍ ಸೋಪ್‍ನ ರಾಯಭಾರಿ. ಅದನ್ನು ಪ್ರಪಂಚಕ್ಕೆ ತಲುಪಿಸುವುದಕ್ಕೆ ಪ್ರತಿಯೊಬ್ಬ ಕನ್ನಡಿಗರನ್ನೂ ಬಳಸಿಕೊಳ್ಳಬೇಕು, " ಎಂದು ಹೇಳಿದ್ದಾರೆ.

"ಕನ್ನಡಿಗರು ಅದನ್ನು ಉಚಿತವಾಗಿ ಮಾಡುತ್ತಾರೆ. ಏಕೆಂದರೆ, ಮೈಸೂರು ಸ್ಯಾಂಡಲ್‍ ಸೋಪ್‍ ಎನ್ನುವುದು ಕನ್ನಡ ಮತ್ತು ಕರ್ನಾಟಕದ ಹೆಮ್ಮೆ. ಜಗತ್ತಿನ ಯಶಸ್ವಿ ಬ್ರಾಂಡ್‍ಗಳ ಪೈಕಿ ಆ್ಯಪಲ್‍ ಪ್ರಮುಖವಾದುದು ಮತ್ತು ಆ ಸಂಸ್ಥೆಗೆ ಯಾರೂ ರಾಯಭಾರಿ ಇಲ್ಲ. ರಾಯಭಾರಿಗಾಗಿ ಅದು ಯಾವತ್ತೂ ಖರ್ಚು ಮಾಡಿಲ್ಲ. ಹಾಗೆಯೇ, ಡವ್‍ ಸೋಪ್‍ ಪ್ರಚಾರ ಬಹಳ ಚೆನ್ನಾಗಿರುತ್ತದೆ’ ಎಂದು ಹೇಳಿಕೊಂಡಿದ್ದಾರೆ.


ಈಗಾಗಲೇ ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಸೇರಿದಂತೆ ಹಲವರು ಮೈಸೂರು ಸ್ಯಾಂಡಲ್‍ ಸೋಪ್‍ಗೆ ತಮನ್ನಾ ರಾಯಭಾರಿಯಾಗಿದ್ದಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು.

Tags:    

Similar News