ಮೂಡಾ ಪ್ರಕರಣ | ಕರಂದ್ಲಾಜೆ-ಭೈರತಿ ವಾಕ್ಸಮರ: ವ್ಯಕ್ತಿಗತ ಟೀಕೆಗೆ ವಿಜಯೇಂದ್ರ ಕಿಡಿ

ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹಾಗೂ ಸಚಿವ ಭೈರತಿ ಸುರೇಶ್‌ ನಡುವಿನ ವಾಕ್ಸಮರ ತಾರಕಕ್ಕೇರಿದೆ.

Update: 2024-10-21 13:45 GMT

ಮುಡಾ ಹಗರಣ ಕುರಿತಂತೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಡುವಿನ ಪರಸ್ಪರ ಆರೋಪ-ಪ್ರತ್ಯಾರೋಪಗಳು ಈಗ ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ಪತ್ನಿ ದಿವಂಗತ ಮೈತ್ರಾದೇವಿ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಪುತ್ರ ದಿವಂಗತ ರಾಕೇಶ್‌ ಸಾವಿನ ಸುತ್ತ ಹೊರಳಿವೆ.

ಮುಡಾ ಹಗರಣದ ದಾಖಲೆ ಸುಟ್ಟುಹಾಕಿದ್ದಾರೆ ಎಂಬ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಆರೋಪಕ್ಕೆ ತಿರುಗೇಟು ನೀಡಿರುವ ಸಚಿವ ಭೈರತಿ ಸುರೇಶ್‌ ಅವರು, "ಯಡಿಯೂರಪ್ಪನವರ ಪತ್ನಿ ಮೈತ್ರಾದೇವಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರವಿದೆ ಎಂಬ ಅನುಮಾನವಿದೆ. ಈ ಬಗ್ಗೆ ತನಿಖೆಯಾಗಲಿ" ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿದ್ದ ಅವರು, "ಯಡಿಯೂರಪ್ಪ ಒಳ್ಳೆಯವರು. ಆದರೆ, ಶೋಭಾ ಅವರು ಕೇಂದ್ರ ಸಚಿವೆಯಾಗಿ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಅವರನ್ನು ಬಂಧಿಸಿ ತನಿಖೆ ನಡೆಸಿದರೆ ಮೈತ್ರಾದೇವಿಯವರ ಸಾವು ಹೇಗಾಯಿತು ಎಂಬುದು ತಿಳಿಯಲಿದೆ ಎಂದು ನಾನು ಒತ್ತಾಯಿಸಿದರೆ, ಶೋಭಾ ಅವರು ಒಪ್ಪುತ್ತಾರೆಯೇ?" ಎಂದು ಪ್ರಶ್ನಿಸಿದ್ದರು.

ಹೆಬ್ಬಾಳದಿಂದ ಓಡಿಸುತ್ತೇವೆ: ಶೋಭಾ

ಭೈರತಿ ಸುರೇಶ್ ಆರೋಪಕ್ಕೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, "ಸಿಎಂ ಸಿದ್ದರಾಮಯ್ಯನವರ ಪುತ್ರ ರಾಕೇಶ್‌ ಸಾವಿಗೆ ಭೈರತಿ ಸುರೇಶ್‌ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ನಾನು ಆ ಮಾತನ್ನು ಹೇಳಬೇಕಾಗುತ್ತದೆ" ಎಂದು ತಿರುಗೇಟು ನೀಡಿದ್ದಾರೆ.

"ಬೈರತಿ ಒಬ್ಬ ದರೋಡೆಕೋರ, ಸಿದ್ದರಾಮಯ್ಯ ಅವರ ಹೆಸರು ಹಾಳು ಮಾಡಿದವ. ಅವರನ್ನು ಹೆಬ್ಬಾಳದಿಂದ ಓಡಿಸುತ್ತೇವೆ. ಮುಡಾದಿಂದ ಸಾವಿರಾರು ಕಡತಗಳನ್ನು ಎತ್ತಿಕೊಂಡು ಬಂದು ಸುಟ್ಟು ಹಾಕಿದ್ದಾರೆ. ಸಿದ್ದರಾಮಯ್ಯನವರೇ ಇಂತವರನ್ನು ಯಾಕೆ ಹತ್ತಿರ ಇಟ್ಟುಕೊಂಡಿದ್ದೀರಿ" ಎಂದು ಪ್ರಶ್ನಿಸಿದ್ದಾರೆ.

"ರಾಜಕಾರಣಿಗಳು ಮಹಾಭಾರತ ಓದಬೇಕು. ಕೌರವರ ಜೊತೆ ಶಕುನಿ ಸೇರಿಕೊಂಡಿದ್ದ. ಆತ ದುರ್ಯೋಧನನನ್ನು ಉದ್ಧಾರ ಮಾಡಲು ಸೇರಿಕೊಂಡಿರಲಿಲ್ಲ. ಹಾಳು ಮಾಡಲು ಸೇರಿಕೊಂಡಿದ್ದ. ಅಂತಹ ಶಕುನಿಗಳು ರಾಜಕಾರಣದಲ್ಲೂ ಇದ್ದಾರೆ. ಉನ್ನತ ಪದವಿಗೆ ಬಂದಾಗ ಮುಖ್ಯಮಂತ್ರಿ ಹಿಂದೆ ಸುತ್ತುತ್ತಿರುತ್ತಾರೆ" ಎಂದು ಪರೋಕ್ಷವಾಗಿ ಭೈರತಿ ಸುರೇಶ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಪೋಲಕಲ್ಪಿತ ಆರೋಪ ಸರಿಯಲ್ಲ;ವಿಜಯೇಂದ್ರ

ಮೈತ್ರಾದೇವಿ ಸಾವಿನ ಕುರಿತ ಭೈರತಿ ಸುರೇಶ್‌ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

"ಮಿಸ್ಟರ್ ಭೈರತಿ ಸುರೇಶ್‌ ಅವರೇ, ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವುದು ಗಾದೆ ಮಾತು. ಆದರೆ ನೀವು ಹಾಗೂ ನಿಮ್ಮ ಮುಖ್ಯಮಂತ್ರಿಗಳ ಮೈಯೆಲ್ಲಾ ಭ್ರಷ್ಟತೆಯ ಹುಣ್ಣು ತುಂಬಿಕೊಂಡು ನಾರುತ್ತಿದೆ. ಒಂದರ ಮೇಲೊಂದು ತನಿಖೆ ನಡೆಯುತ್ತಲೇ ಇವೆ. ಕರ್ನಾಟಕದ ಇತಿಹಾಸದಲ್ಲಿ ಅನೈತಿಕತೆಯನ್ನು ಕತ್ತಿಗೆ ಕಟ್ಟಿಕೊಂಡು ಸರ್ಕಾರ ನಡೆಸುತ್ತಿರುವ ಇತಿಹಾಸ ನಿರ್ಮಿಸಿದ ದಾಖಲೆ ನಿಮಗೆ ಸೇರುತ್ತದೆ" ಎಂದು ಟೀಕಾಪ್ರಹಾರ ನಡೆಸಿದ್ದಾರೆ.

"ನೀವು ನಡೆಸಿದ ಕಡು ಭ್ರಷ್ಟ ಹಗರಣಗಳಿಗೆ ಕನಸು ಮನಸ್ಸಿನಲ್ಲೂ ಎಣಿಸದ ರೀತಿಯಲ್ಲಿ ತನಿಖೆಗಳು ನಿಮ್ಮನ್ನು ಸುತ್ತಿ ಕೊಳ್ಳುತ್ತಿವೆ. ಇದರಿಂದ ತೀವ್ರ ಹತಾಶಗೊಂಡಿರುವ ನೀವು ನಮ್ಮ ತಾಯಿಯವರ ಆಕಸ್ಮಿಕ ಸಾವಿನ ವಿಚಾರ ಮುಂದೆ ತಂದು ಮಾತನಾಡುತ್ತಿರುವುದು ಅಸಭ್ಯ ಹಾಗೂ ಸಂಸ್ಕೃತಿ ಹೀನ ನಡವಳಿಕೆಯನ್ನು ಪ್ರತಿಬಿಂಬಿಸುತ್ತಿದೆ" ಎಂದು ಎಕ್ಸ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾಡಿರುವ ಆರೋಪಗಳಿಗೆ ಉತ್ತರಿಸಲಾಗದ ನೀವು ಹೇಡಿಯಂತೆ ಕಪೋಲ ಕಲ್ಪಿತ ಆರೋಪಗಳನ್ನು ಮಾಡಿ ವಿಷಯಾಂತರ ಮಾಡಲು ಹೊರಟಿದ್ದೀರಾ? ನಿಮ್ಮ ನಡೆ ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಗುಣವ ಬಿಡು ನಾಲಿಗೆ ಎಂಬ ದಾಸರ ಪದವನ್ನು ನೆನಪಿಸುವಂತಿದೆ. ಮಾಡಿದ್ದುಣ್ಣೋ ಮಹರಾಯ ಎಂಬ ಮಾತಿನಂತೆ ಅತೀ ಶೀಘ್ರದಲ್ಲೇ ನಿಮ್ಮ ಹಾದಿ ಕೃಷ್ಣನ ಜನ್ಮಸ್ಥಾನದತ್ತ ಸಾಗಲಿದೆ" ಎಂದು ತಿರುಗೇಟು ನೀಡಿದ್ದಾರೆ.

Tags:    

Similar News