ಜಯಮೃತ್ಯುಂಜಯ ಸ್ವಾಮೀಜಿ ಉಚ್ಛಾಟನೆಗೆ ಸಿ ಸಿ ಪಾಟೀಲ್ ವಿರೋಧ

ಸ್ವಾಮೀಜಿ ಮತ್ತು ನಿಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದರೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬಗೆಹರಿಸಿಕೊಳ್ಳೋಣ ಎಂದು ನಾನು ಕಾಶಪ್ಪನವರಿಗೆ ಮನವಿ ಮಾಡಿದ್ದೆ. ಆದರೆ, ಅವರು ಕೇಳಲಿಲ್ಲ ಎಂದು ಸಿಸಿ ಪಾಟೀಲ್ ಅವರು ಹೇಳಿದ್ದಾರೆ.

Update: 2025-09-23 09:20 GMT

 ಸಿ ಸಿ ಪಾಟೀಲ್ 

Click the Play button to listen to article

ಜಯ ಮೃತ್ಯುಂಜಯ ಸ್ವಾಮೀಜಿಗಳು ಪೀಠವನ್ನು ಏರಿದಾಗಿನಿಂದ ಸಮಾಜವನ್ನು ಸಂಘಟಿಸಲು ಹಗಲಿರುಳು ದುಡಿದಿದ್ದಾರೆ. ಹಣದ ಆಸೆಗೆ ಅವರು ಎಂದಿಗೂ ಬಲಿಯಾಗಿಲ್ಲ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದಿಂದ ಜಯ ಮೃತ್ಯುಂಜಯ ಸ್ವಾಮೀಜಿಗಳನ್ನು ಉಚ್ಚಾಟನೆ ಮಾಡಿರುವ ವಿಚಾರವಾಗಿ ಮಾಜಿ ಸಚಿವ ಸಿ.ಸಿ. ಪಾಟೀಲ್ ಅವರು ವಿಜಯಾನಂದ ಕಾಶಪ್ಪನವರ್ ಮತ್ತು ಟ್ರಸ್ಟ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯ ಮೃತ್ಯುಂಜಯ ಸ್ವಾಮೀಜಿಗಳ ಹೋರಾಟ ಮತ್ತು ಸಮುದಾಯಕ್ಕೆ ಅವರ ಕೊಡುಗೆಯನ್ನು ಶ್ಲಾಘಿಸಿದರು. ಜಯಮೃತ್ಯುಂಜಯ ಸ್ವಾಮೀಜಿಗಳು ಪೀಠವನ್ನು ಏರಿದಾಗಿನಿಂದ ಸಮಾಜವನ್ನು ಸಂಘಟಿಸಲು ಹಗಲಿರುಳು ದುಡಿದಿದ್ದಾರೆ. ಹಣದ ಆಸೆಗೆ ಅವರು ಎಂದಿಗೂ ಬಲಿಯಾಗಿಲ್ಲ. ಸಮಾಜದ ಏಳಿಗೆ ಮತ್ತು ಒಗ್ಗಟ್ಟಿಗಾಗಿ ಸುಮಾರು 750 ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ. 8 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಅರಮನೆ ಮೈದಾನದಲ್ಲಿ ದೊಡ್ಡ ಸಮಾವೇಶ ಮಾಡಿ ಸಮಾಜದ ಶಕ್ತಿ ಪ್ರದರ್ಶನ ಮತ್ತು ಸರ್ಕಾರಗಳಿಗೆ ಎಚ್ಚರಿಕೆ ಕೊಡುವ ಕೆಲಸ ಮಾಡಿದ್ದಾರೆ. ಈ ಎಲ್ಲಾ ಶ್ರೇಯಸ್ಸು ಜಯ ಮೃತ್ಯುಂಜಯ ಸ್ವಾಮೀಜಿಗಳಿಗೇ ಸಲ್ಲುತ್ತದೆ ಎಂದು ಅವರು ತಿಳಿಸಿದರು. 

ಪಂಚಮಸಾಲಿ ಪೀಠದ ವಿವಾದದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿಜಯಾನಂದ ಕಾಶಪ್ಪನವರ ಬಗ್ಗೆ ನಾನು ಏನು ಮಾತನಾಡುವುದಿಲ್ಲ, ಅದರ ಅವಶ್ಯಕತೆಯೂ ಇಲ್ಲ. ಸ್ವಾಮೀಜಿಗಳ ಉಚ್ಚಾಟನೆ ಅನಿರೀಕ್ಷಿತ ಅಲ್ಲ. ಸುಮಾರು ತಿಂಗಳಿಂದ ಅವರ ನಡುವಳಿಕೆಗಳಿಂದ ಇದು ಗೊತ್ತಾಗುತ್ತಿತ್ತು ಎಂದು ತಿಳಿಸಿದರು.

ಸಮಾಜದ ಮುಖಂಡರ ಮನವಿ ವಿಫಲ

ನಾನು ಆಗಲಿ, ನೀವು ಆಗಲಿ ವೈರಿಗಳಲ್ಲ. ಸಮಾಜದ ಸಂಘಟನೆಗಾಗಿ ಹೋರಾಟ ಮಾಡಿದವರು. ಸ್ವಾಮೀಜಿ ಮತ್ತು ನಿಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದರೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬಗೆಹರಿಸಿಕೊಳ್ಳೋಣ ಎಂದು ನಾನು ಕಾಶಪ್ಪನವರಿಗೆ ಮನವಿ ಮಾಡಿದ್ದೆ. ಆದರೆ, ಅದು ಅವರಿಗೆ ಅನಿಸುತ್ತೋ, ಇಲ್ಲವೋ ಗೊತ್ತಿಲ್ಲ ಎಂದು ಅವರು ತಿಳಿಸಿದರು. 

ಸ್ವಾಮೀಜಿಗಳ ಹಿಂದೆ ಪಂಚಮಸಾಲಿ ಸಮಾಜ

ಸಮಸ್ತ ಪಂಚಮಸಾಲಿ ಸಮಾಜ ಜಯ ಮೃತ್ಯುಂಜಯ ಸ್ವಾಮೀಜಿಗಳ ಬೆನ್ನಿಗೆ ಇದೆ. ಶನಿವಾರ ತಾವು ಯತ್ನಾಳ್, ಶಿವಶಂಕರ್, ಅರವಿಂದ್ ಬೆಲ್ಲದ್, ಸಿದ್ದು ಸವದಿ, ಮತ್ತು ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಮುಖಂಡರು ಸ್ವಾಮೀಜಿಗಳನ್ನು ಭೇಟಿ ಮಾಡಿ ಮುಂದಿನ ಹೆಜ್ಜೆಗಳ ಬಗ್ಗೆ ನಿರ್ಧರಿಸುತ್ತೇವೆ ಎಂದು ತಿಳಿಸಿದರು.

ಸಮಾಜ ಸಂಘಟನೆ ನಿಲ್ಲಿಸಲ್ಲ

ನಾನು ಈಗಾಗಲೇ ಸ್ವಾಮೀಜಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಸಮಾಜ ಸಂಘಟನೆ ಮತ್ತು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಅವರ ಈ ನಿರ್ಧಾರಕ್ಕೆ ನಾವೆಲ್ಲರೂ ಸಂಪೂರ್ಣ ನೈತಿಕ ಬೆಂಬಲ ನೀಡುತ್ತೇವೆ. ನಾನು ಒಬ್ಬನೇ ಹೇಳಬಾರದು, ನಾವು ಚರ್ಚೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು. 

ಪಂಚಮಸಾಲಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ್ದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದಿಂದ ಉಚ್ಚಾಟನೆ ಮಾಡಲಾಗಿದೆ. ಈ ಬಗ್ಗೆ  ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಭಾನುವಾರ ನಡೆದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಕಾರ್ಯಕಾರಣಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. 

ಈ ಸಭೆಯ ಬಳಿಕ  ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಅವರು, ಟ್ರಸ್ಟ್‌ನ ಕಾರ್ಯಕಾರಣಿ ಸಭೆಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಚಾಟಿಸಲು ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ ಸ್ವಾಮೀಜಿಗೂ, ಪೀಠ ಹಾಗೂ ಟ್ರಸ್ಟ್‌ಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಮಾಧ್ಯಮಕ್ಕೆ ತಿಳಿಸಿದ್ದರು. 

Tags:    

Similar News