ನಾಲಿಗೆ ಹರಿಬಿಟ್ಟ ಮತ್ತೊಬ್ಬ ಮಠಾಧೀಶ | ಸಿಎಂ ಸಿದ್ದರಾಮಯ್ಯ ಕೆನ್ನೆಗೆ ಬಾರಿಸುತ್ತಿದ್ದೆ ಎಂದ ಅಭಿನವ ಸಂಗನಬಸವ

ಬಸವನಬಾಗೇವಾಡಿ ತಾಲೂಕಿನ ಹಿರೇಮಠದ ಅಭಿನವ ಸಂಗನಬಸವ ಸ್ವಾಮಿ, ಸಮಾಜವನ್ನು ದಿಕ್ಕು ತಪ್ಪಿಸುವ, ಹಿಂಸೆಗೆ ಕುಮ್ಮಕ್ಕು ನೀಡುವ ಮಠಾಧೀಶರ ಹೊಸ ಸಂಪ್ರದಾಯವನ್ನು ಮುಂದುವರಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಕೆನ್ನೆಗೆ ಹೊಡೆಯುವ ಮಾತನಾಡಿದ್ದಾರೆ.

Update: 2024-11-14 07:36 GMT
ಸಿಎಂ ಸಿದ್ದರಾಮಯ್ಯ ನಿಂದಿಸಿದ ಅಭಿನವ ಸಂಗನಬಸವ ಸ್ವಾಮಿ

ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಸಾಮಾಜಿಕ ಹೊಣೆಗಾರಿಕೆಯ ಮಠಾಧೀಶರೇ ಹೊಡಿ- ಬಡಿ, ಕೊಚ್ಚು-ಕೊಲ್ಲು ಎಂಬ ಹೇಳಿಕೆಗಳನ್ನು ನೀಡಿ ವಿವಾದಕ್ಕೀಡಾಗುವ ಪ್ರಕರಣಗಳು ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮತ್ತೆಮತ್ತೆ ವರದಿಯಾಗುತ್ತಿವೆ.

ಉಡುಪಿಯ ಪೇಜಾವರ ಮಠದ ಸ್ವಾಮೀಜಿ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಮೂರು ದಿನಗಳ ಹಿಂದೆ ಕಲಬುರಗಿಯ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಕ್ಕಳ ಕೈಗೆ ಪೆನ್ನಿನ ಬದಲು ತಲ್ವಾರ್ ಕೊಡಿ ಎಂದು ಹೇಳುವ ಮೂಲಕ ಮತ್ತೊಂದು ವಿವಾದ ಹುಟ್ಟುಹಾಕಿದ್ದರು. ತಲ್ವಾರ್ ಕೊಡುವ ಮಾತನಾಡಿದ ಸ್ವಾಮೀಜಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸುವ ಮಟ್ಟಿಗೆ ಪ್ರಕರಣ ಹೋಗಿತ್ತು.

ಇದೀಗ ಪ್ರಚೋದನಾತ್ಮಕ ಮತ್ತು ನಿಂದನಾ ಹೇಳಿಕೆ ನೀಡುವ ಮಠಾಧೀಶರ ಸಾಲಿಗೆ ಮತ್ತೊಬ್ಬ ಸ್ವಾಮೀಜಿ ಸೇರಿದ್ದು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.

ಬಸವನಬಾಗೇವಾಡಿ ತಾಲೂಕಿನ ಹಿರೇಮಠದ ಅಭಿನವ ಸಂಗನಬಸವ ಸ್ವಾಮಿ, ಸಮಾಜವನ್ನು ದಿಕ್ಕು ತಪ್ಪಿಸುವ, ಹಿಂಸೆಗೆ ಕುಮ್ಮಕ್ಕು ನೀಡುವ ಮಠಾಧೀಶರ ಹೊಸ ಸಂಪ್ರದಾಯವನ್ನು ಮುಂದುವರಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಕೆನ್ನೆಗೆ ಹೊಡೆಯುವ ಮಾತನಾಡಿದ್ದಾರೆ.

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿ ನಡೆದ ಕಿತ್ತೂರ ರಾಣಿ ಚನ್ನಮ್ಮನ 246ನೇ ಜಯಂತ್ಯೋತ್ಸವ ಹಾಗೂ 200ನೇ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿರುವ ಅಭಿವನ ಸಂಗನಬಸನ ಸ್ವಾಮಿ, “ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಬಸವ ಜಯಮೃತ್ಯುಂಜಯ ಶ್ರೀಗಳ ಹೆಗಲ ಮೇಲೆ ಸಿದ್ದರಾಮಯ್ಯ ಕೈ ಹಾಕಿದ್ದರು. ನಾನಾಗಿದ್ದರೆ ಸಿಎಂ ಸಿದ್ದರಾಮಯ್ಯ ಕಪಾಳಕ್ಕೆ ಹೊಡೆಯುತ್ತಿದ್ದೆ. ಆದರೆ, ಬಸವ ಜಯಮೃತ್ಯುಂಜಯ ಶ್ರೀಗಳು ಸುಮ್ಮನೆ ಇದ್ದರು” ಎಂದು ಹೇಳಿದ್ದಾರೆ.

ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಮ್ಮ ಮಾತಿನ ಉದ್ದಕ್ಕೂ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ವರದಿಯಾಗಿದೆ.

ಮಠಾಧೀಶರ ಹೇಳಿಕೆಗೆ ಖಂಡನೆ

ರಾಜ್ಯದ ಮುಖ್ಯಮಂತ್ರಿಗಳನ್ನು ಸಾರ್ವಜನಿಕ ಸಮಾರಂಭದಲ್ಲಿ ಏಕ ವಚನದಲ್ಲಿ ನಿಂದಿಸಿದ್ದಲ್ಲದೆ ಅವರ ಕಪಾಲಕ್ಕೆ ಹೊಡೆಯುತ್ತಿದ್ದೆ ಎಂದು ಹೇಳಿರುವ ಸ್ವಾಮಿ, ಮಠ ಮತ್ತು ಧಾರ್ಮಿಕ ಪರಂಪರೆಗೆ ಅಪಚಾರ ಎಸಗಿದ್ದಾರೆ, ಮಾತ್ರವಲ್ಲ; ವ್ಯಕ್ತಿ ಘನತೆ ಮತ್ತು ಸಾರ್ವಜನಿಕ ಸಭ್ಯತೆಯನ್ನೂ ಗಾಳಿಗೆ ತೂರಿ ಸಂವಿಧಾನಿಕ ಸ್ಥಾನದಲ್ಲಿರುವ ವ್ಯಕ್ತಿಯ ಬಗ್ಗೆ ನಿಂದನೆ ಮತ್ತು ಹಲ್ಲೆ ನಡೆಸುವ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.

ಅಂತಹ ಹೇಯ ವರ್ತನೆ ತೋರಿರುವ ಸ್ವಾಮಿಯ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ,

ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಮಿಯ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ವಾಮಿ ವಿಷಾದ ವ್ಯಕ್ತಪಡಿಸಿದ್ದು, “ಮಾತಿನ ಭರದದಲ್ಲಿ ಸಿಎಂ ವಿರುದ್ಧ ಮಾತನಾಡಿದೆ. ಅವರ ಸ್ಥಾನಮಾನಕ್ಕೆ ಅವಮಾನ ಮಾಡಿದೆ. ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಹೇಳಿದ್ದಾರೆ.

Tags:    

Similar News